ನೇರೆಂಕಿಗುತ್ತು: ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ಪರಿವಾರ ದೈವಗಳು ಮತ್ತು ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ

(ನ್ಯೂಸ್ ಕಡಬ) newskadaba.com. ಕಡಬ,ಡಿ.29. ಭೂತಾರಾಧನೆಯಲ್ಲಿ ನಂಬಿಕೆಯೇ ಪ್ರಧಾನವಾಗಿದೆ. ಪೂಜೆ ಮಾಡುತ್ತಿರುವಂತೆಯೇ ಅಲ್ಲಿ ಸಾನಿಧ್ಯ ಸನ್ನಿಹಿತವಾಗುವುದೇ ದೈವರಾಧನೆಯ ವಿಶೇಷ ಕಲ್ಪನೆಯಾಗಿದೆ. ಇದು ಹಂತ ಹಂತವಾಗಿ ನಮ್ಮ ಮುಂದೆ ಪ್ರಕಟಗೊಳ್ಳುತ್ತದೆ ಎಂದು ಜಾನಪದ ವಿದ್ವಾಂಸ ಎಲ್ಲೂರು ಕೆ.ಲಕ್ಷ್ಮೀನಾರಾಯಣಕುಂಡಂತಾಯರವರು ಹೇಳಿದರು.ಕಡಬ ತಾಲೂ ಕು ಹಳೆನೇರೆಂಕಿ ಗ್ರಾಮದ ನೇರೆಂಕಿಗುತ್ತು ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ದೈವಸ್ಥಾನ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ನಡೆದ ಶ್ರೀ ದೈವಗಳ ಮತ್ತು ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವದ ಪ್ರಯುಕ್ತ ನಡೆದ ಧರ್ಮಜಾಗೃತಿ ಸಭೆಯಲ್ಲಿ ಮುಖ್ಯ ಉಪನ್ಯಾಸ ನೀಡಿದರು. ಈಗ ದೈವರಾಧಾನೆಯಲ್ಲೂ ವೈಧೀಕರಣ ಪ್ರವೇಶ ಪಡೆಯುತ್ತಿದೆ. ದೈವದ ನುಡಿಯನ್ನು ನಾವು ನಂಬದೇ ಇರುವುದರಿಂದಲೇ ವೈಧೀಕರಣ ಪ್ರವೇಶವಾಗಿದೆ. ಹಿಂದೆ ಸರಳವಾಗಿ ದೈವರಾಧನೆ ನಡೆಯುತ್ತಿತ್ತು. ಆದರೆ ಕಾಲ ಬದಲಾಗುತ್ತಿರುವಂತೆ ಬಣ್ಣ, ಉಡುಪು, ಮುಖವರ್ಣಿಕೆಯೂ ಬದಲಾಗುತ್ತಿದೆ.

ದೇವರಿಗೆ ಮಂತ್ರ ಪ್ರಧಾನವಾಗಿರುವಂತೆಯೇ ದೈವಕ್ಕೆ ಪಾಡ್ದನವೇ ಪ್ರಧಾನವಾಗಿದೆ. ಆದರೆ ಈಗ ಎಲ್ಲವೂ ಬದಲಾಗುತ್ತಿದ್ದು ದೈವನರ್ತಕರು ತಪ್ಪು ಮಾಡುವಂತೆ ನಾವೇ ಪ್ರೇರೇಪಿಸುತ್ತಿದ್ದೇವೆ. ದೈವರಾಧಾನೆಯೂ ದಯನೀಯ ಸ್ಥಿತಿಗೆ ಬಂದು ನಿಂತಿದೆ ಎಂದು ಹೇಳಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರಪ್ರಶಸ್ತಿ ಪುರಸ್ಕೃತ  ಶಿ ಕ್ಷಕ ಟಿ.ನಾರಾಯಣ ಭಟ್‍ರವರು ಮಾತನಾಡಿ, ದೈವ, ದೇವರಗಳ ಮೇಲೆ ನಂಬಿಕೆ ಇಲ್ಲದೇ ಇದ್ದಲ್ಲಿ ನಮ್ಮ ಬದುಕು ಅಧೋಗತಿಗೆ ಹೋಗಲಿದೆ. ಆಡಳಿತ ಮೊಕ್ತೇಸರ, ಪುತ್ತೂರಿನ ಉದ್ಯಮಿಎಸ್.ಕೆ.ಆನಂದರವರು, ದೈವ, ದೇವರ ಕಲ್ಪನೆ ನಮ್ಮ ಬದುಕಿಗೆ ಶಕ್ತಿ ನೀಡುತ್ತದೆ. ದೈವರಾಧನೆಯಲ್ಲಿ ಎಲ್ಲಾ ಜಾತಿ, ಧರ್ಮದವರು ಪಾಲ್ಗೊಳ್ಳುತ್ತಿದ್ದಾರೆ. ಎಲ್ಲಾ ಧರ್ಮ,ಜಾತಿಯವರು ದೈವರಾಧನೆಯಲ್ಲಿ ದೈವ ನರ್ತಕರಿಗೆ ವಂದಿಸಿ ಅವರಿಂದ ಪ್ರಸಾದ ತೆಗೆದುಕೊಳ್ಳುತ್ತಾರೆ. ಇದೊಂದು ದೇಶಕ್ಕೆ ಮಾದರಿಯಾದ ಕಾರ್ಯಕ್ರಮವೂ ಆಗಿದೆ. ದೈವರಾಧಾನೆಗೆ ಎಲ್ಲರನ್ನೂ ಒಂದಾಗಿಸುವ ವೈಶಿಷ್ಠವಿದೆ. ಮನುಷ್ಯನ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಲು ನೇಮೋತ್ಸವಗಳು ಸಹಕಾರಿಯಾಗಿದೆ ಎಂದರು.

Also Read  ಕಡಬ ಜಿ.ಪಂ.ಸದಸ್ಯರ ಬೂತ್ ನ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

ಆಡಳಿತ ಸಮಿತಿ ಸಂಚಾಲಕ ಕೃಷ್ಣಮೂರ್ತಿ ಇ.ಕಲ್ಲೇರಿ, ಉಪಾಧ್ಯಕ್ಷ ಪ್ರಸನ್ನ ನಿಸರ್ಗ, ಅಕ್ಷಯ ಮಾಸ್ಟರ್ ಪ್ಲಾನರಿ ಉಪಸ್ಥಿತರಿದ್ದರು.ಆಡಳಿತ ಸಮಿತಿ ಜೊತೆ ಕಾರ್ಯದರ್ಶಿ ಶ್ಯಾಮ್ ಪ್ರಸಾದ್ ಕಾಯಾರ ಸ್ವಾಗತಿಸಿ, ಅರ್ಜುನ್‍ರವರು ವಂದಿಸಿದರು. ಕಾರ್ಯದರ್ಶಿ ಕಿರಣ್ ಪಾದೆ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ಪರಿವಾರ ದೈವಗಳು ಮತ್ತು ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ ನಡೆಯಿತು. ಈ ಸಂದರ್ಭ ಸಾವಿರಾರು ಮಂದಿ ಭಕ್ತರು ಹರಕೆ ಸಲ್ಲಿಸಿದರು. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೈವಕ್ಕೆ ತೆಂಗಿನಕಾಯಿ, ಬಟ್ಟಲು ಕಾಣಿಕೆ, ಕೈ ಕಾಣಿಕೆ, ಬೆಳ್ಳಿಯ ವಿವಿಧ ರೂಪಗಳನ್ನು ಹರಕೆ ಮೂಲಕ ಸಲ್ಲಿಸಿದರು. ವಿಶೇಷವಾಗಿ ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ, ಸಂತಾನ ಪ್ರಾಪ್ತಿ, ಸರಕಾರಿ ಕೆಲಸ, ಕುಟುಂಬದ ಸಮಸ್ಯೆಗಳ ನಿವಾರಣೆಗಾಗಿ ಭಕ್ತರು ದೈವಕ್ಕೆ ಹರಕೆ ಸಮರ್ಪಣೆ ಮಾಡಿದರು.

Also Read  ಮಕ್ಕಳ ಮೇಲೆ ದೌರ್ಜನ್ಯ ➤ 3ನೇ ಸ್ಥಾನದಲ್ಲಿ ಬೆಂಗಳೂರು.!!

 

error: Content is protected !!
Scroll to Top