(ನ್ಯೂಸ್ ಕಡಬ) newskadaba.com ಉಡುಪಿ, ಜು.27. ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಅನಿವಾಸಿ ಭಾರತೀಯ ಉದ್ಯಮಿ ಕೋಟ್ಯಾಧಿಪತಿ ಉಡುಪಿಯ ದುರ್ಗಾ ಇಂಟರ್‌ನ್ಯಾಶನಲ್ ಹೊಟೇಲ್ ಮಾಲಕ ಭಾಸ್ಕರ್ ಶೆಟ್ಟಿ(52)ಯವರನ್ನು ಹೋಮ ಕುಂಡದಲ್ಲಿಟ್ಟು ಕರ್ಪೂರ, ತುಪ್ಪ, ಪೆಟ್ರೋಲ್ ನಿಂದ ಸುಟ್ಟು ಕೊಲೆಗೈದ ಪ್ರಕರಣಕ್ಕೆ ಶುಕ್ರವಾರಕ್ಕೆ ಒಂದು ವರ್ಷ ತುಂಬಿದೆ.
ನಿಗೂಢ ರೀತಿಯಲ್ಲಿ ಕಣ್ಮರೆಯಾದ ಭಾಸ್ಕರ ಶೆಟ್ಟಿಯವರನ್ನು ಕೊಲೆ ಮಾಡಲಾಗಿದೆ ಎಂದು ಅವರ ತಾಯಿ ನೀಡಿದ್ದ ದೂರಿನ ಜಾಡು ಹಿಡಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಅವರ ಪತ್ನಿ, ಪುತ್ರ ಹಾಗೂ ಸ್ಥಳೀಯ ಜ್ಯೋತಿಷಿಯೋರ್ವನನ್ನು ಬಂಧಿಸಿದ್ದರು. ಆಸ್ತಿ ವಿಚಾರ ಹಾಗೂ ಪತ್ನಿ ಹಾಗೂ ಜ್ಯೋತಿಷಿಯ ಅನೈತಿಕ ಸಂಬಂಧಕ್ಕೆ ಭಾಸ್ಕರ ಶೆಟ್ಟಿಯವರು ಅಡ್ಡಿಯಾಗುತ್ತಿದ್ದಾರೆ ಎಂದು ಅವರನ್ನು ಅತ್ಯಂತ ಅಮಾನವೀಯವಾಗಿ ಕೊಲೆ ಮಾಡಲಾಗಿತ್ತು.
ಊರವರ ಒತ್ತಡದ ಮೇರೆಗೆ ಸರಕಾರವು ಪ್ರಕರಣವನ್ನು ಸಿಒಡಿಗೆ ಒಪ್ಪಿಸಿದ್ದು, ಪ್ರಕರಣದ ತನಿಖೆ ನಡೆಸಿದ ಸಿಓಡಿ ಈವರೆಗೆ ಹೆಚ್ಚುವರಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸದ ಕಾರಣ ಪ್ರಕರಣದ ವಿಚಾರಣೆಯನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇನ್ನಷ್ಟೆ ಕೈಗೆತ್ತಿಕೊಳ್ಳಬೇಕಾಗಿದೆ.
ಪ್ರಕರಣ ಪ್ರಮುಖ ಆರೋಪಿಗಳಾದ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ(50), ಮಗ ನವನೀತ್ ಶೆಟ್ಟಿ(20) ಹಾಗೂ ನಂದಳಿಕೆಯ ಜೋತಿಷ್ಯ ನಿರಂಜನ್ ಭಟ್(26) ಇದೀಗ ಮಂಗಳೂರು ಜೈಲಿನಲ್ಲಿ ಇದ್ದಾರೆ. ಸಾಕ್ಷ್ಯನಾಶ ಆರೋಪಿಗಳಾದ ನಿರಂಜನ್ ಭಟ್ ತಂದೆ ಶ್ರೀನಿವಾಸ ಭಟ್ (56) ಹಾಗೂ ಗೆಳೆಯ ರಾಘವೇಂದ್ರ(26) 2016ರ ಅ.1ರಂದು ಜಾಮೀನು ಪಡೆದು ಬಿಡುಗಡೆಗೊಂಡಿದ್ದಾರೆ.
ರಾಜೇಶ್ವರಿ ಶೆಟ್ಟಿ ಜಾಮೀನು ಅರ್ಜಿಯನ್ನು ಉಡುಪಿ ಜಿಲ್ಲಾ ನ್ಯಾಯಾಲಯ ಮತ್ತು ಹೈಕೋರ್ಟ್ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಆಕೆ ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ಇನ್ನೋರ್ವ ಆರೋಪಿ ನಿರಂಜನ್ ಭಟ್ ಜಾಮೀನು ಅರ್ಜಿಯನ್ನು ಹೈಕೋರ್ಟ್ ನಿನ್ನೆಯಷ್ಟೆ ವಜಾಗೊಳಿಸಿದೆ. ಆದರೆ ಮಗ ನವನೀತ್ ಶೆಟ್ಟಿ ಈವರೆಗೆ ಜಾಮೀನಿಗೆ ಅರ್ಜಿ ಹಾಕಿಲ್ಲ.
ಪ್ರಕರಣ ವಿಚಾರಣೆಗೆ ಸಂಬಂಧಿಸಿದಂತೆ ಜು.31ರಂದು ದೋಷಾರೋಪಣಾ ಪಟ್ಟಿಯನ್ನು ವಾಚಿಸುವ ಪ್ರಕ್ರಿಯೆ ನಡೆಯಲಿದ್ದು, ಅದರ ಬಳಿಕ ನ್ಯಾಯಾಲಯವು ವಿಚಾರಣಾ ದಿನಾಂಕವನ್ನು ನಿಗದಿಪಡಿಸಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಓಡಿ ಈಗಾಗಲೇ 1300 ಪುಟಗಳ ದೋಷಾರೋಪಣಾ ಪಟ್ಟಿಯನ್ನು ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಇನ್ನು ಹೆಚ್ಚುವರಿ ದೋಷಾ ರೋಪಣಾ ಪಟ್ಟಿ ಸಲ್ಲಿಸಲು ಬಾಕಿ ಇದೆ. ಅಲ್ಲದೆ ತನಿಖೆಗೆ ಸಂಬಂಧಿಸಿದ ಕೆಲವೊಂದು ವರದಿಗಳನ್ನು ಸಲ್ಲಿಸಲು ಬಾಕಿ ಇದೆ ಎಂದು ತಿಳಿದುಬಂದಿದೆ.