ಕಡಬದಲ್ಲಿ ಮದ್ಯವರ್ಜನ ಶಿಬಿರ – ಪೂರ್ವಭಾವಿ ಸಭೆ

(ನ್ಯೂಸ್ ಕಡಬ) newskadaba.com ಕಡಬ,  ಡಿ.25. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪುತ್ತೂರು ತಾಲೂಕಿನಲ್ಲಿ ನಡೆಯುವ 51ನೇ ಮದ್ಯವರ್ಜನ ಶಿಬಿರ ಕಡಬ ಒಕ್ಕಲಿಗ ಗೌಡ ಸಂಘದ ಸಭಾಭವನದಲ್ಲಿ ಜ.29ರಿಂದ ಫೆ.5ರ ತನಕ ನಡೆಯಿದ್ದು ಇದರ ಪೂರ್ವಭಾವಿ ಸಭೆ ಸೋಮವಾರ ಒಕ್ಕಲಿಗ ಸಭಾಭವನದಲ್ಲಿ ನಡೆಯಿತು.ನೂತನವಾಗಿ ಆಯ್ಕೆಯಾದ ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿಯ ಗೌರವಾಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ ಮಾತನಾಡಿ ಕುಡಿತದ ಚಟಕ್ಕೆ ಬಲಿಯಾಗಿ ಜೀವನವನ್ನು ಕಳೆದುಕೊಂಡಿರುವ ಅನೇಕ ಬಡ ಕುಟುಂಬಗಳಿಗೆ ಬದುಕಿನ ಬೆಳಕನ್ನು ನೀಡುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆಯುವ ಮದ್ಯವರ್ಜನ ಶಿಬಿರವನ್ನು ಅನುಷ್ಠಾನ ಮಾಡುವಲ್ಲಿ ಪಾಲು ಪಡೆಯುತ್ತಿರುವುದು ಒಂದು ಸೌಭಾಗ್ಯವಾಗಿದೆ.

ಇನ್ನೊಬ್ಬರ ಬದುಕು ಹಸನು ಮಾಡುವ ಈ ಪುಣ್ಯ ಕಾರ್ಯದಲ್ಲಿ ನಾವು ಪ್ರಾಮಾಣಿಕವಾಗಿ ತೊಡಗಿಸಿಕೊಂಡು ಶಿಬಿರವನ್ನು ಯಶಸ್ಸು ಮಾಡಿದರೆ, ನಮ್ಮ ಬದುಕಿನಲ್ಲಿ ಸಾರ್ಥಕತೆಯನ್ನು ಕಂಡುಕೊಂಡಂತೆ.ಒಂದು ಮನೆಯ ವ್ಯಕ್ತಿಯ ಜೀವನದ ಚಿತ್ರವನ್ನು ಬದಲಿಸಿದರೆ, ಆ ಮನೆಗೆ ಬ್ರಹ್ಮಕಲಶ ನೆರವೇರಿದಂತೆ ಈ ಹಿನ್ನಲೆಯಲಿ ಒಂದು ಊರಿನದೇವಾಲಯದಬ್ರಹ್ಮಕಲಶವನ್ನು ನೇರವೇರಿಸುವಾಗ ಊರಿನ ಜನತೆ ಶ್ರದ್ಧಾ ಭಕ್ತಿಯಿಂದ ಭಾಗವಹಿಸಿ ಸೇವೆ ಮಾಡುವ ರೀತಿಯಲ್ಲಿ ಶಿಬಿರದಲ್ಲಿ ಮದ್ಯ ವ್ಯಸನಿಗಳ ಸೇವೆ ಮಾಡಲು ನಾವು ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಬೇಕಾಗಿದೆ. ಈ ಹಿಂದೆ ಮರ್ದಾಳದಲ್ಲಿ ನಡೆದ ಯಶಸ್ವಿ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳ ಪೈಕಿ 55 ಜನ ಮನಪರಿವರ್ತನೆಗೊಂಡು ಜೀವನದಲ್ಲಿ ಅಭಿವೃದ್ಧಿಯನ್ನು ಕಂಡಿದಲ್ಲದೇ, ಸ್ವಾವಲಂಭಿಯೊಂದಿಗೆ ಗೌರವಯುತ ಜೀವನ ಸಾಗಿಸುತ್ತಿದ್ದಾರೆ. ಅದರಲ್ಲೂ ಕಾಲೋನಿಯ ಹಲವು ಮದ್ಯ ವ್ಯಸನಿಗಳು ಇಂದಿಗೂ ವ್ಯಸನಮುಕ್ತರಾಗಿದ್ದುಕೊಂಡು ಆದರ್ಶ ಜೀವನ ನಡೆಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.

Also Read  ಕಾಸರಗೋಡು: ಪ್ರವಾಸದ ಬಸ್ ಪಲ್ಟಿ ➤ 40 ಕ್ಕೂ ಅಧಿಕ ಮಂದಿಗೆ ಗಾಯ

ಕಡಬದ ಗೌಡ ಸಭಾಭವನದಲ್ಲಿ ನಡೆಯುವ ಶಿಬಿರವು ಯಶಸ್ವಿಯಾಗಿ ನಡೆಯಲು ಜವಬ್ದಾರಿ ವಹಿಸಿಕೊಂಡ ಎಲ್ಲಾ ಪದಾಧಿಕಾರಿಗಳು ಪ್ರಾಮಾಣಿಕವಾಗಿ ಮೇಲು ಕೀಳೆಂಬ ಭಾವನೆ ಇಲ್ಲದೆ ಎಲ್ಲರೂ ಒಂದಾಗಿ ದುಡಿಯಬೇಕಾಗಿದೆ ಎಂದು ಹೇಳಿದರು. ವ್ಯವಸ್ಥಾಪನ ಸಮಿತಿ ನೂತನ ಅಧ್ಯಕ್ಷ ತಮ್ಮಯ್ಯ ಗೌಡ ಸುಳ್ಯ ಮಾತನಾಡಿ ಕುಡಿತದ ಚಟ ಎನ್ನುವುದು ಕೇವಲ ಪುರುಷರಿಗೆ ಮಾತ್ರ ಸೀಮಿತವಾಗಿಲ್ಲ ಅದು ಇಂದು ಮಹಿಳೆಯರನ್ನು ಆವರಿಸಿಕೊಂಡಿದೆ. ಕುಟುಂಬ ನಿರ್ವಹಣೆಯ ಜವಬ್ದಾರಿಯನ್ನು ವಹಿಸಬೇಕಿದ್ದ ಮಹಿಳೆಯರು ಮದ್ಯದ ಚಟಕ್ಕೆ ಬಿದ್ದರೆ ಕುಟುಂಬ ಸರ್ವ ನಾಶವಾಗುದಲ್ಲದೇ, ಇಡೀ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಇಂತಹ ಸಂದಿಗ್ಧ ಪರಿಸ್ಥಿಗಳನ್ನು ನಾವು ಮನಸಿನಲ್ಲಿಟ್ಟುಕೊಂಡು ಶಿಬಿರದ ಯಶಸ್ಸಿಗೆ ಮನಪೂರ್ವಕವಾಗಿ ಶ್ರಮಿಸಬೇಕಿದೆ ಎಂದರು.

ಜನಜಾಗೃತಿ ವೇದಿಕೆಯ ಕಡಬ ವಲಯಾಧ್ಯಕ್ಷ ಲಕ್ಷ್ಮೀ ನಾರಾಯಣ ರಾವ್ ಆತೂರು ಸಭೆಯ ಅಧ್ಯಕ್ಷತೆ ವಹಿಸಿ ಶಿಬಿರದ ರೂಪುರೇಷೆ ಹಾಗೂ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ತಾಲೂಕು ಯೋಜನಾಧಿಕಾರಿ ಜನಾರ್ಧನ ಗೌಡ ಶಿಬಿರದ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಉದ್ಯಮಿ ಸುಂದರ ಗೌಡ ಮಂಡೆಕರ, ಜನಜಾಗೃತಿ ವೇದಿಕೆಯ ಸವಣೂರು ವಲಯಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ತಾ.ಪಂ.ಸದಸ್ಯ ಗಣೇಶ್ ಕೈಕುರೆ, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಗಂಗಾಧರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಪ್ರಮುಖರಾದ ಸಾಂತಪ್ಪ ಗೌಡ ಪಿಜಕಳ, ಬಾಬು ಗೌಡ ಕುಂಡಡ್ಕ, ಆನಂದ ಕೊಂಕ್ಯಾಡಿ, ನೀಲಾವತಿ ಶಿವರಾಮ್ ಮತ್ತಿತರರು ಸಲಹೆ ಸೂಚನೆ ನೀಡಿದರು. ಕಡಬ ವಲಯದ ವಿವಿಧ ಗ್ರಾಮಗಳ ಸೇವಾ ಪ್ರತಿನಿದಿಗಳು, ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶಿಬಿರದ ವ್ಯವಸ್ಥಾಪನ ಸಮಿತಿಯ ಪದಾಧಿಕಾರಿಗಳ ಆಯ್ಕೆ ನಡೆಯಿತು. ಯೋಜನೆಯ ಕಡಬ ವಲಯ ಮೇಲ್ವಿಚಾರಕ ಬಾಬು ಸ್ವಾಗತಿಸಿದರು. ಬಿಳಿನೆಲೆ ವಲಯ ಮೇಲ್ವಿಚಾರಕ ರಾಜು ಗೌಡ ವಂದಿಸಿದರು.

Also Read  ಕಲ್ಲುಗುಡ್ಡೆ ಅಂಗನವಾಡಿಯಲ್ಲಿ ಚುನಾವಣಾ ಪ್ರಮಾಣ ವಚನ ಬೋಧನೆ

error: Content is protected !!
Scroll to Top