(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ. 21. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಮಾಣಿ ದಾರಲ್ ಇರ್ಶಾದ್ ಎಜುಕೇಶನ್ ಸೆಂಟರ್ ಸಹಯೋಗದಲ್ಲಿ ಬ್ಯಾರಿ ಸಾಹಿತ್ಯ ಕಮ್ಮಟ ಮತ್ತು ಬ್ಯಾರಿ ಪ್ರತಿಭಾ ಸ್ಪರ್ಧೆ ಮಿತ್ತೂರಿನ ಕೆಜಿಎನ್ ಕ್ಯಾಂಪಸ್‍ನಲ್ಲಿ ಗುರುವಾರ ಜರುಗಿತು.ಬಂಟ್ವಾಳ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ ಕಾರ್ಯಕ್ರಮ ಉದ್ಘಾಟಿಸಿ, ಯುವ ಮನಸ್ಸಿನಲ್ಲಿ ಬ್ಯಾರಿ ಭಾಷೆಯ ಬಗ್ಗೆ ಅಭಿಮಾನ ಮೂಡಿಸುವ ಕೆಲಸ ನಡೆಯಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯಕ್ರಮ ಆಯೋಜಿಸುವುದು ಉತ್ತಮ ಬೆಳವಣಿಗೆ. ಮನಸ್ಸಿನೊಳಗೆ ಭಾಷೆ ಬಗ್ಗೆ ಅಭಿಮಾನ ಮೂಡಿಸಿ, ಅದನ್ನು ಉಳಿಸಿ ಬೆಳೆಸಲು ಎಲ್ಲರ ಸಹಕಾರ ಅಗತ್ಯ ಎಂದರು.
ಇಡ್ಕಿದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಮಾತನಾಡಿ, 2008ರಲ್ಲಿ ಬ್ಯಾರಿ ಅಕಾಡೆಮಿ ಸ್ಥಾಪನೆಗೊಂಡು ನಾಲ್ಕು ಅಧ್ಯಕ್ಷರನ್ನು ಕಂಡಿದೆ. ಅಕಾಡೆಮಿಯು ಭಾಷೆಯ ಬೆಳವಣಿಗೆಗೆ ಉತ್ತಮ ಕಾರ್ಯಕ್ರಮ ರೂಪಿಸುತ್ತಿದೆ. ಅದು ಪರಿಣಾಮಕಾರಿಯಾಗಿ ಜಾರಿಗೆ ಬರಬೇಕಾದರೆ, ಸಮುದಾಯದ ಸಹಕಾರದ ಅಗತ್ಯವಿದೆ. ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಅವಕಾಶ ನೀಡಿ, ಅವರಲ್ಲಿ ಭಾಷೆ ಬಗ್ಗೆ ಜಗೃತಿ ಮೂಡಿಸುವುದು ಶ್ಲಾಘನೀಯ ಎಂದರು.ಬ್ಯಾರಿ ಅಕಾಡೆಮಿ ಅಧ್ಯಕ್ಷ ಕರಂಬಾರ್ ಮೊಹಮ್ಮದ್ ಅಧ್ಯಕ್ಷತೆ ವಹಿಸಿ, ಅಕಾಡೆಮಿ ಪ್ರಕಟಿಸಿರುವ ನಿಘಂಟು ಸಹಿತ ಪುಸ್ತಕಗಳನ್ನು ದಾರುಲ್ ಇರ್ಶಾದ್ ಕೇಂದ್ರದ ಲೈಬ್ರೆರಿಗೆ ಹಸ್ತಾಂತರಿಸಿ, ಬ್ಯಾರಿ ಭಾಷೆ, ಸಾಹಿತ್ಯ, ಕಲೆ, ಜಾನಪದ ಪ್ರಕಾರಗಳನ್ನು ಉಳಿಸಿ ಬೆಳೆಸುವುದು ಅಕಾಡೆಮಿ ಉದ್ದೇಶ. ಈ ಕಾರ್ಯ ಮಾಡುವ ಜನರಿಗೂ ಅಕಾಡೆಮಿ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.ದಾರುಲ್ ಇರ್ಶಾದ್ ಸೆಂಟರ್ ನ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ಶರೀಫ್ ಸಖಾಫಿ ಶುಭ ಹಾರೈಸಿದರು.
ಪರ್ಲೊಟ್ಟು ಅಬೂಬಕ್ಕರ್ ಸಿದ್ದೀಕ್ ಮಸೀದಿ ಅಧ್ಯಕ್ಷ ಕೆ.ಬಿ.ಕಾಸಿಂ, ಕೊಡಾಜೆ ಬದ್ರಿಯಾ ಜುಮಾ ಮಸ್ಜಿದ್ ಅಧ್ಯಕ್ಷ ಬಿ.ಇಬ್ರಾಹಿಂ ರಾಜ್‍ಕಮಲ್, ಕೆಜಿಎನ್ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಸಿದ್ದೀಕ್ ಅಕ್ಬರ್, ದಾರುಲ್ ಇರ್ಶಾದ್ ಬಾಲಕರ ಪ್ರೌಢಶಾಲೆ ಮುಖ್ಯ ಶಿಕ್ಷಕ ಅಶ್ರಫ್ ಬಿ.ಸಿ.ರೋಡ್, ಹನೀಫ್ ಬಗ್ಗುಮೂಲೆ, ಅಕಾಡೆಮಿ ಮಾಜಿ ಸದಸ್ಯ ಶಂಸುದ್ದೀನ್ ಮಡಿಕೇರಿ, ಮುಹಮ್ಮದ್ ಅಲಿ, ಅಕಾಡೆಮಿ ಸದಸ್ಯರಾದ ಬಶೀರ್ ಬೈಕಂಪಾಡಿ, ಅಬ್ದುಲ್ ರೆಹಾಮನ್ ಕುತ್ತೆತ್ತೂರು, ಎಸ್.ಎಂ.ಶರೀಫ್ ಮಡಿಕೇರಿ, ಮುಹಮ್ಮದ್ ಆರಿಫ್ ಪಡುಬಿದ್ರಿ,ಸದಸ್ಯ ಸಂಚಾಲಕ ಸಲೀಂ ಬರಿಮಾರ್ ಉಪಸ್ಥಿತರಿದ್ದರು .ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ತನ್ಸಿಫ್ ಬಿ.ಎಂ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮಾಜಿ ಸದಸ್ಯ ಅಬ್ದುಲ್ಲತೀಫ್ ನೇರಳಕಟ್ಟೆ ವಂದಿಸಿದರು.ಸಭಾ ಕಾರ್ಯಕ್ರಮದ ಬಳಿಕ ಬಿ.ಮೂಡ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಕಮ್ಮಟ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ನಡೆದವು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ನಡೆಯಿತು.