(ನ್ಯೂಸ್ ಕಡಬ) newskadaba.com ಕಡಬ, ಜು.27. ಕಡಬದಿಂದ ಕೊಣಾಜೆಗೆ ತೆರಳುವ ಸರಕಾರಿ ಬಸ್ಸನ್ನು ಸ್ಥಗಿತಗೊಳಿಸಿ ಹಠಾತ್ತನೆ ಪುತ್ತೂರಿಗೆ ಕಳುಹಿಸಿದರ ಪರಿಣಾಮ ವಿದ್ಯಾರ್ಥಿಗಳು ವಾಹನ ಸೌಕರ್ಯವಿಲ್ಲದೆ ಕಂಗೆಟ್ಟು ಕೆಎಸ್ಸಾರ್ಟಿಸಿ ಸಂಚಾರ ನಿಯಂತ್ರಕರ ಕೇಂದ್ರಕ್ಕೆ ಮುತ್ತಿಗೆ ಹಾಕಿದ ಘಟನೆ ಗುರುವಾರ ಸಂಜೆ ನಡೆಯಿತು.
ನಾಗರ ಪಂಚಮಿ ಆದುದರಿಂದ ಶಾಲೆಗಳಿಗೆ ರಜೆಯಿರಬಹುದೆಂದು ಭಾವಿಸಿ ಸುಬ್ರಹ್ಮಣ್ಯದಿಂದ ಕಡಬಕ್ಕೆ ಆಗಮಿಸಿ ಕೊಣಾಜೆಗೆ ತೆರಳಬೇಕಿದ್ದ ಬಸ್ಸಿನ ಚಾಲಕ – ನಿರ್ವಾಹಕರು ನೇರವಾಗಿ ಪುತ್ತೂರಿಗೆ ತೆರಳುವ ಪ್ರಯಾಣಿಕರಿಗೆ ಟಿಕೆಟ್ ನೀಡಿದ್ದರು. ಹಠಾತ್ತನೆ ಬಸ್ ಸ್ಥಗಿತಗೊಳಿಸಿದ್ದರಿಂದಾಗಿ ಆತಂಕಗೊಂಡ ವಿದ್ಯಾರ್ಥಿಗಳು ಹಾಗೂ ನಾಗರೀಕರು ಸಂಚಾರ ನಿಯಂತ್ರಕರನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಆಕ್ರೋಶಿತರನ್ನು ಸಮಾಧಾನಿಸಿ ಬದಲಿ ವ್ಯವಸ್ಥೆ ಮಾಡಿಕೊಡುವಂತೆ ಸೂಚಿಸಿದರು. ನಂತರ ಅದೇ ಬಸ್ಸನ್ನು ಹಿಂದೆ ಕರೆಸಿ ಕೊಣಾಜೆಗೆ ಕಳುಹಿಸಿಕೊಡಲಾಯಿತು.