(ನ್ಯೂಸ್ ಕಡಬ) newskadaba.com ಮಂಗಳೂರು ಡಿ .17. ಸಾರ್ವಜನಿಕರು ಸಮುದಾಯ ಭವನ, ಸಭಾಭವನದಲ್ಲಿ ಮದುವೆ, ಔತಣಕೂಟ, ಹುಟ್ಟುಹಬ್ಬ ಇನ್ನಿತರ ಆಚರಣೆಗಳ ಸಂದರ್ಭದಲ್ಲಿ ಆಮಂತ್ರಿತ ಅತಿಥಿಗಳಿಗೆ ಮದ್ಯ ಸರಬರಾಜು ಮಾಡುವುದಾದಲ್ಲಿ ಅಬಕಾರಿ ಇಲಾಖೆಯಿಂದ ನಿಯಮಗಳ ಅನ್ವಯ ಅನುಮತಿಯನ್ನು ಅಂದರೆ ಸಾಂದರ್ಭಿಕ (ಸಿಎಲ್-5) ಸನ್ನದನ್ನು ಕಡ್ಡಾಯವಾಗಿ ಪಡೆಯಬೇಕಾಗಿರುತ್ತದೆ.

ಸಿಎಲ್-5 ಸನ್ನದುದಾರರುಗಳು ಒಂದು ವಾರದ ಮುಂಚಿತವಾಗಿ ಅರ್ಜಿಯನ್ನು ಸಲ್ಲಿಸಿ, ಅದರಂತೆ ನಿಗಧಿತ ಸನ್ನದು ಶುಲ್ಕವನ್ನು ಸರಕಾರಕ್ಕೆ ಪಾವತಿಸಿ ಇಲಾಖಾ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಸನ್ನದು ಮಂಜೂರಾತಿ ಪಡೆದ ನಂತರ ಕೆ.ಎಸ್.ಬಿ.ಸಿ.ಎಲ್ ನಿಂದ ಮಾತ್ರ ಮದ್ಯವನ್ನು ಖರೀದಿಸಬೇಕಾಗಿರುತ್ತದೆ. ಕರ್ನಾಟಕ ಅಬಕಾರಿ (ದೇಶೀಯ ಮತ್ತು ವಿದೇಶಿ ಮದ್ಯಗಳ ಮಾರಾಟ) 1968ರ ನಿಯಮ 8(5)ರ ಅನ್ವಯ ಪ್ರತಿ ದಿನಕ್ಕೆ ನಿಗಧಿತ ಸನ್ನದು ಶುಲ್ಕ ರೂ. 10,000/- ಶೇಕಡಾ 15% ರಂತೆ ಹೆಚ್ಚುವರಿ ಸನ್ನದು ಶುಲ್ಕ ರೂ. 1,500/-ನ್ನು ಪಾವತಿಸಿ ಸಾಂದರ್ಭಿಕ ಸನ್ನದು ಪಡೆಯಬೇಕಾಗಿರುತ್ತದೆ.

ಹಾಲ್‍ನಲ್ಲಿ ನಡೆಯುತ್ತಿರುವ ಸಾರ್ವಜನಿಕ ಸಮಾರಂಭಗಳಾದ ಮದುವೆ, ಹುಟ್ಟುಹಬ್ಬ ಇನ್ನಿತರ ಸಭೆ ಸಮಾರಂಭಗಳಲ್ಲಿ ವಿಶೇಷವಾಗಿ ಸಮಾರಂಭದ ಸಂಘಟಕರು/ಆಯೋಜಕರು ಊಟದ ವ್ಯವಸ್ಥೆಯನ್ನು ಆಯೋಜಿಸಿರುವ ಸಂದರ್ಭದಲ್ಲಿ ಅಬಕಾರಿ ಇಲಾಖೆಯಿಂದ ಯಾವುದೇ ಸನ್ನದುಗಳನ್ನು ಹೊಂದದೇ/ ರಹದಾರಿಗಳಿಲ್ಲದೇ ಬಂದ ಅತಿಥಿಗಳಿಗೆ ಕುಡಿಯಲು ಮದ್ಯ/ಬೀರ್ ಅವಕಾಶ ಮಾಡಿ ಕೊಡುತ್ತಿರುವುದು ಹಾಗೂ ತೆರಿಗೆ ರಹಿತ ಗೋವಾ ಮದ್ಯ, ವಿದೇಶೀ ಮದ್ಯ ಹಾಗೂ ಮಿಲಿಟರಿ ರಕ್ಷಣಾ ಕ್ಯಾಂಟೀನಿನ ಸಿಬ್ಬಂದಿಗಳಿಗೆ ಹಂಚಿಕೆಯಾದ ಮದ್ಯವನ್ನು ವಿತರಿಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಸಂಬಂಧಿತ ಹಾಲ್‍ನ ವ್ಯವಸ್ಥಾಪಕರು/ಮಾಲೀಕರು ನೇರ ಜವಾಬ್ದಾರರಾಗಿರುತ್ತಾರೆ ಎಂದು ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.
