ಕಡಬ – ಎಡಮಂಗಲ ರಸ್ತೆಯ ಪಾಲೋಳಿ ಮುಳುಗು ಸೇತುವೆಗೆ ಊರವರಿಂದಲೇ ಕಾಯಕಲ್ಪ ► ಕೇಸರಿ ಯುವಕ ಮಂಡಲದ ಶ್ರಮದಿಂದ ಪಾಲೋಳಿ ಸೇತುವೆ ಸಂಚಾರಕ್ಕೆ ಮುಕ್ತ ► ಕೇವಲ 5 ಕಿ.ಮೀ. ಅಂತರದಲ್ಲಿ ಎಡಮಂಗಲ – ಕಡಬ ಸಂಪರ್ಕ ಕೊಂಡಿ

(ನ್ಯೂಸ್ ಕಡಬ) newskadaba.com ಕಡಬ, ಡಿ.16. ಇಲ್ಲನ ಎಡಮಂಗಲದಿಂದ ತಾಲೂಕು ಕೇಂದ್ರ ಕಡಬವನ್ನು ಪಿಜಕ್ಕಳ ಮೂಲಕ ಸಂಪರ್ಕಿಸುವ ಕುಮಾರಧಾರ ನದಿಗೆ ಪಾಲೋಳಿ ಬಳಿ ಊರವರೇ ಶ್ರಮದಾನದ ಮೂಲಕ ನಿರ್ಮಿಸಿರುವ ತಾತ್ಕಾಲಿಕ ಮುಳುಗು ಸೇತುವೆಯು ಶನಿವಾರ ರಾತ್ರಿಯಿಂದ ಸಂಚಾರಕ್ಕೆ ಮುಕ್ತವಾಗಿದೆ.

5 ವರ್ಷಗಳ ಹಿಂದೆ ಸಾರ್ವಜನಿಕರು ಸೇರಿಕೊಂಡು ಬೃಹತ್ ಗಾತ್ರದ ಮೋರಿಗಳನ್ನು ಬಳಸಿ ರಚನೆಗೊಂಡ ಸದ್ರಿ ಮುಳುಗು ಸೇತುವೆಯು ಬೇಸಿಗೆ ಕಾಲದಲ್ಲಿ ಎಡಮಂಗಲದಿಂದ ಪಿಜಕ್ಕಳ ಮೂಲಕ ಕಡಬಕ್ಕೆ ಸಂಚಾರದ ಕೊಂಡಿಯಾಗಿದೆ. ಮಳೆಗಾಲದಲ್ಲಿ ಈ ಪ್ರತಿ ವರ್ಷವೂ ಮಳೆಗಾಲ ಕಳೆದ ಕೂಡಲೇ ಈ ಸೇತುವೆಯನ್ನು ಸಾರ್ವಜನಿಕರೇ ಧನ ಸಂಗ್ರಹಿಸಿ ದುರಸ್ತಿಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಕಡಬದಿಂದ ಕೋಡಿಂಬಾಳ – ಪುಳಿಕುಕ್ಕು ಮೂಲಕ ಎಡಮಂಗಲವನ್ನು ತಲುಪಲು 12 ಕಿ.ಮೀ. ಸಂಚರಿಸಬೇಕಾಗಿದ್ದು, ಇದಕ್ಕೆ ಪ್ರತಿಯಾಗಿ ಪಿಜಕ್ಕಳ ಮೂಲಕ ಸಂಚರಿಸಿದ್ದಲ್ಲಿ ಕೇವಲ 5 ಕಿ.ಮೀ. ದೂರದಲ್ಲಿ ಎಡಮಂಗಲವನ್ನು ಸಂಪರ್ಕಿಸಬಹುದಾಗಿದೆ.

ಪ್ರಸ್ತುತ ಈ ವರ್ಷ ಹೊಸದಾಗಿ ರಚನೆಗೊಂಡಿರುವ ಸಾಮಾಜಿಕ ಸಂಘಟನೆ ‘ಕೇಸರಿ ಯುವಕ ಮಂಡಲ ಎಡಮಂಗಲ’ ಇವರು ಸೇತುವೆಯ ದುರಸ್ತಿ ಕಾರ್ಯದ ಹೊಣೆಯನ್ನು ಹೊತ್ತು ಸುಮಾರು 60 ಸಾವಿರ ರೂ. ಧನ ಸಂಗ್ರಹಿಸಿ ಪಾಲೋಳಿ ಶಾಶ್ವತ ಸೇತುವೆ ಹೋರಾಟ ಸಮಿತಿಯ ಮೇಲುಸ್ತುವಾರಿ ಹಾಗೂ ಮಾರ್ಗದರ್ಶನದಲ್ಲಿ ಐದು ದಿನಗಳ ನಿರಂತರ ದುರಸ್ತಿ ಕಾರ್ಯ ನಡೆಸಿ ಸಂಚಾರಕ್ಕೆ ಮುಕ್ತವಾಗಿಸಿದ್ದಾರೆ. ಕೇಸರಿ ಯುವಕ ಮಂಡಲದ ಈ ಸಮಾಜಮುಖಿ ಕೆಲಸವು ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ. ಪಾಲೋಳಿ ಶಾಶ್ವತ ಸೇತುವೆ ಹೋರಾಟ ಸಮಿತಿಯ ಅಧ್ಯಕ್ಷರಾದ ಶ್ರೀ ಸಾಂತಪ್ಪ ಗೌಡ ಪಿಜಕಳ ಇವರು ನೂತನ ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದರು. ಕೇಸರಿ ಯುವಕ ಮಂಡಲದ ಅಧ್ಯಕ್ಷ ಚೇತನ್ ಡಿ.ಎ.
ಹಾಗೂ ದುರಸ್ತಿ ಕೆಲಸಕ್ಕೆ ಸಂಪೂರ್ಣ ಮೇಲುಸ್ತುವಾರಿ ವಹಿಸಿದ ಪಾಲೋಳಿ ಶಾಶ್ವತ ಸೇತುವೆ ಹೋರಾಟ ಸಮಿತಿಯ ಉಪಾಧ್ಯಕ್ಷ ಜೋಸ್ ಕೇಂಜೂರು ಅವರನ್ನು ಅಭಿನಂದಿಸಲಾಯಿತು.

Also Read  ಜಾನುವಾರುಗಳಿಗೆ ಕಾಲು ಬಾಯಿ ಜ್ವರದ ಲಸಿಕಾ ಕಾರ್ಯಕ್ರಮ- ಜಿ.ಪಂ. ಸಿ.ಇ.ಓ ಸೂಚನೆ

ಈ ಸಂದರ್ಭದಲ್ಲಿ ಪ್ರಮುಖರಾದ ಎಡಮಂಗಲ ಪಂಚಾಯತ್ ಅಧ್ಯಕ್ಷರಾದ ಸುಂದರ ಗೌಡ ದೋಳ್ತಿಲ, ಪಾಲೋಳಿ ಶಾಶ್ವತ ಸೇತುವೆ ಹೋರಾಟ ಸಮಿತಿ ಗೌರವಾಧ್ಯಕ್ಷ ಚಂದ್ರಶೇಖರ ಗೌಡ ಮರಕ್ಕಡ, ಕಾರ್ಯದರ್ಶಿ ಶ್ಯಾಮ್ ತೋಮಸ್, ಕೋಶಾಧಿಕಾರಿ ರವೀಂದ್ರ ನೂಚಿಲ, ಕೇಸರಿ ಯುವಕ ಮಂಡಲದ ಉಪಾಧ್ಯಕ್ಷ ದಿನೇಶ್ ಮರೋಳಿ, ಕಾರ್ಯದರ್ಶಿ ಶರತ್ ಪಟ್ಲದಮೂಲೆ, ಕೋಶಾಧಿಕಾರಿ ಭರತ್ ಮಜ್ಜಾರು, ಪಿಜಕ್ಕಳ ಕುಮಾರಧಾರ ಯುವಕ ಮಂಡಲದ ಅಧ್ಯಕ್ಷ ಯತೀಂದ್ರ ಗೌಡ ಗೊಡಾಲ್, ಕಾರ್ಯದರ್ಶಿ ಪ್ರಭಾಕರ ಕೆ.ಎಸ್. ಪ್ರಮುಖರಾದ ಜಯರಾಮ ಗೌಡ, ಪೂವಪ್ಪಗೌಡ, ಸಚಿನ್ ಪಿ.ಎಸ್., ಸುಂದರ ಗೌಡ ಪಾಲೋಳಿ, ರಾಮಣ್ಣ ಗೌಡ ಪಿಜಕಳ, ಅನೀಶ್ ಕೇಂಜೂರು, ಜ್ಯೋತಿಶ್ ಕೇಂಜೂರು, ಯೋಗಿಶ್ ಭಟ್ ಕೇಂಜೂರು, ಇಸ್ಮಾಯಿಲ್ ಗಂಡಿತಡ್ಕ ಮೊದಲಾದವರು ಉಪಸ್ಥಿತರಿದ್ದರು.

Also Read  ಅತ್ಯಾಚಾರ ಸಂತ್ರಸ್ತೆಗೆ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ನೆರವು - ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

 

error: Content is protected !!
Scroll to Top