ರಂಗ ನಿರ್ದೇಶಕ ಶೀನಾ ನಾಡೋಳಿ ರವರಿಗೆ ಜ್ಞಾನ ಸಂಜೀವಿನಿ ಪ್ರಶಸ್ತಿ ಪ್ರದಾನ

(ನ್ಯೂಸ್ ಕಡಬ) newskadaba.com ಕಡಬ, ಡಿ.14 ಶಿಕ್ಷಣ ಜ್ಞಾನ ಮಾಸಪತ್ರಿಕೆಯ ವತಿಯಿಂದ ಶೈಕ್ಷಣಿಕ ರಂಗದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಮತ್ತು ಸಂಘನಾತ್ಮಕವಾಗಿ ಕೆಲಸ ಮಾಡಿದ ಸಾಧಕರಿಗೆ ವರ್ಷಂಪ್ರತಿ ನೀಡುವ ಜ್ಞಾನಸಂಜೀವಿನಿ ಪ್ರಶಸ್ತಿಯನ್ನು ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದ ನಾಡೋಳಿಯ ಪ್ರಸ್ತುತ ಪುಂಜಲಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲಬಾಷಾ ಉಪನ್ಯಾಸಕರು, ರಂಗನಿರ್ದೇಶಕರೂ ಆಗಿರುವ ಶೀನಾ ನಾಡೋಳಿರವರಿಗೆ ದ.8ರಂದು ಹುಬ್ಬಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.


ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಡಾ.ಕೆ.ಎಸ್.ಶರ್ಮಾ ಶೈಕ್ಷಣಿಕ ಸಂಕೀರ್ಣದಲ್ಲಿರುವ ವಿಶ್ವಶ್ರಮ ಚೇತನದಲ್ಲಿ ನಡೆದ ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ ಶೀನಾ ನಾಡೋಳಿಯವರಿಗೆ 2018ರ ಜ್ಞಾನ ಸಂಜೀವಿನಿ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಸರಕಾರಿ ದಿನಗೂಲಿ ನೌಕರರ ಮಹಾಮಂಡಳದ ಅಧ್ಯಕ್ಷ ಡಾ.ಕೆ.ಎಸ್.ಶರ್ಮಾ, ಅತಿಥಿಗಳು ಹಾಗೂ ಶಿಕ್ಷಣ ಜ್ಞಾನ ಮಾಸ ಪತ್ರಿಕೆಯ ಮುಖ್ಯಸ್ಥರು, ಸದಸ್ಯರು ಪ್ರದಾನ ಮಾಡಿ ಗೌರವಿಸಿದರು.


ಶೀನಾ ನಾಡೋಳಿಯವರು ಪ್ರಸ್ತುತ ಸರ್ಕಾರಿ ಪದವಿ ಪೂರ್ವ ಕಾಲೇಜು, ಪುಂಜಾಲಕಟ್ಟೆ ಇಲ್ಲಿ ಆಂಗ್ಲಭಾಷಾ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದು ಇವರು ‘ನೀನಾಸಂ’ ಪದವೀಧರರಾಗಿದ್ದು, ನೀನಾಸಂ ತಿರುಗಾಟ ನಾಟಕಗಳಲ್ಲಿ ಅಭಿನಯಿಸಿದ್ದಾರೆ, ಅನೇಕ ನಾಟಕಗಳನ್ನು ನಿರ್ದೇಶಿಸಿದ್ದಾರೆ. ‘ಶಿಕ್ಷಣದಲ್ಲಿ ರಂಗಭೂಮಿ’ಯ ಪರಿಕಲ್ಪನೆಯಲ್ಲಿ ಅನೇಕ ಪ್ರಯೋಗಾತ್ಮಕವಾದ ಪ್ರದರ್ಶನಗಳನ್ನೂ, ತರಬೇತಿಗಳನ್ನೂ, ನೀಡಿದ್ದಾರೆ. ತುಳು ಜಾನಪದ ಸಂಗೀತ ಸಂಯೋಜನೆಗಳ ಜೊತೆಗೆ ತುಳು ಹಾಗೂ ಕನ್ನಡಾನುವಾದದ ಕೃತಿಗಳನ್ನು ರಚಿಸಿದ್ದಾರೆ. ‘ಡೆನ್ನಾನ ಡೆನ್ನಾನ…. ಡೆನ್ನಾನ… ಡೆನ್ನಾನ.. ಇತ್ಯಾದಿ ಅಪ್ಪಟ ತುಳು ಮಣ್ಣಿನ ಸೊಗಡಿನ ಹಾಡುಗಳ ಮೂಲಕ ಜಿಲ್ಲೆಯಲ್ಲಿ ಚಿರಪರಿಚಿತರಾಗಿರುವ ಇವರು ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಸದಸ್ಯರೂ ಆಗಿರುತ್ತಾರೆ. ಬೆಳ್ತಂಗಡಿಯಲ್ಲಿ ‘ಕಾಂಜವೇ'(ಕಾಂತಾರದ ಚಿನ್ನದ ಜನಪದ ವೇದಿಕೆಯ ಮೂಲಕ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ನಾಟಕ ನಿರ್ದೇಶಿಸಿ ಪ್ರದರ್ಶಿಸುತ್ತಿರುವುದಲ್ಲದೆ ಹಲವಾರು ರಂಗ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುತ್ತಾರೆ, ‘ಸುದೆತ್ತ ಮಟೈಲ್ಡ್ ಕತೆ’ ಎಂಬ ತುಳು ಕತೆಗಳ ಜೊತೆಗೆ ‘ಭಯಮುಕ್ತ ಬದುಕಿನೆಡೆಗೆ’, ‘ಹಕ್ಕೊತ್ತಾಯ’ ಎಂಬ ಅನುವಾದ ಕೃತಿಗಳನ್ನು ರಚಿಸಿದ್ದಾರೆ .’ಧರ್ಮೊದಿಟ್ಟಿ’ ಎಂಬ ತುಳು-ಕನ್ನಡ ರೂಪಕವು ಪ್ರಕಟಣೆಗೆ ಸಿದ್ಧವಾಗಿದೆ.

Also Read  ಬೆಂಗಳೂರು: ಜಾರ್ಖಂಡ್‌ನಿಂದ ಕೂಲಿ ಕೆಲಸಕ್ಕೆ ಕರೆತರಲಾಗಿದ್ದ 12 ಅಪ್ರಾಪ್ತ ಮಕ್ಕಳ ರಕ್ಷಣೆ..!!

ಶೀನಾ ನಾಡೋಳಿಯವರು ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದ ನಾಡೋಳಿ ಕುಜುಂಬ ಅಜಿಲ ಹಾಗೂ ಬಿಡುಗು ದಂಪತಿಯ ಪುತ್ರರಾಗಿದ್ದು ತಮ್ಮ ಪ್ರಾಥಮಿಕ ಶಿಕ್ಷಣವನ್ನು ವಾಳ್ಯ ಕಿ.ಪ್ರಾ ಶಾಲೆಯಲ್ಲಿ ಹಾಗೂ ಹೊಸಮಠ ಹಿ.ಪ್ರಾ.ಶಾಲೆಯಲ್ಲಿ , ಹೈಸ್ಕೂಲ್ ಶಿಕ್ಷಣವನ್ನು ಪುತ್ತೂರಿನ ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಪಂಜ ಸರಕಾರಿ ಪ.ಪೂ.ಕಾಲೇಜಿನಲ್ಲಿ, ಪದವಿ ಶಿಕ್ಷಣವನ್ನು ಸುಬ್ರಹ್ಮಣ್ಯ ಕೆ.ಎಸ್.ಎಸ್.ಕಾಲೇಜಿನಲ್ಲಿ ಪಡೆದಿರುತ್ತಾರೆ. ಮಂಗಳೂರು ವಿಶ್ವಾವಿದ್ಯಾನಿಲಯದಿಂದ ಇಂಗ್ಲೀಷ್ ಎಂ.ಎ. ಸ್ನಾತಕೋತ್ತರ ಪದವಿಧರರಾಗಿರುವ ಇವರು ನೀನಾಸಂ ನಲ್ಲಿ ಒಂದು ವರ್ಷ ಡಿಪ್ಲೊಮಾ ಮತ್ತು ಒಂದು ವರ್ಷ ತಿರುಗಾಟ ನಾಟಕದಲ್ಲಿ ಅಭಿನಯಿಸಿದ್ದಾರೆ. ರಂಗನಿರ್ದೇಶಕರಾಗಿರುವ ಇವರು ಮಕ್ಕಳಿಗೆ ನಾಟಕ ತರಬೇತಿಗಳನ್ನು ನೀಡುತ್ತಿದ್ದಾರೆ. ಹಾಸನ ಜಿಲ್ಲೆಯಲ್ಲಿ ಸರಕಾರಿ ಸೇವೆಗೆ ಸೇರ್ಪಡೆಗೊಂಡ ಇವರು ಪ್ರಸ್ತುತ ಬೆಳ್ತಂಗಡಿ ತಾಲೂಕಿನ ಪುಂಜಲಕಟ್ಟೆ ಸ.ಪ.ಪೂ.ಕಾಲೇಜಿನಲ್ಲಿ ಆಂಗ್ಲಬಾಷಾ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶೀನಾ ನಾಡೋಳಿ ಯವರು ಪತ್ನಿ ಶಿಕ್ಷಕಿಯಾಗಿರುವ ಪ್ರಾರ್ಥನ ನಾಡೋಳಿ, ಪುತ್ರಿ ಜೋತ್ಸ್ನಾ ಎಸ್. ನಾಡೋಳಿ ರೊಂದಿಗೆ ಬೆಳ್ತಂಗಡಿಯಲ್ಲಿ ನೆಲೆಸಿದ್ದಾರೆ.

Also Read  ತುಳು ಅಕಾಡೆಮಿ ಪ್ರಕಟಿತ ಪುಸ್ತಕ ಬಿಡುಗಡೆ ಸಮಾರಂಭ

error: Content is protected !!
Scroll to Top