ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಯಲ್ಲಿ ಸ್ಥಾಪಕರ ದಿನಾಚರಣೆ ► ಜ್ಞಾನವೇ ವಿಕಾಸದ ಸಾಧನ: ಅರವಿಂದ ಚೊಕ್ಕಾಡಿ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.12.  ನಾವು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಆದರ್ಶವನ್ನು ಕಂಡುಕೊಳ್ಳಬೇಕು. ದಿವಂಗತ ವಾರಣಾಶಿ ಸುಬ್ರಾಯ ಭಟ್ ಹಾಗೂ ಸಾಯ ಕೃಷ್ಣ ಭಟ್ ಅವರು ಭಾರತೀಯ ಕೌಟುಂಬಿಕ ಮೌಲ್ಯ ಮತ್ತು ಸಹಕಾರಿ ತತ್ತ್ವಗಳೊಂದಿಗೆ ಆದರ್ಶದಿಂದ ಬದುಕಿ ಜನಮನದಲ್ಲಿ ಸ್ಥಾಯಿಯಾಗಿ ನಿಂತರು ಎಂದು ಖ್ಯಾತ ಚಿಂತಕ ಮತ್ತು ಸಾಹಿತಿ ಅರವಿಂದ ಚೊಕ್ಕಾಡಿ ಹೇಳಿದರು.

ಅವರು ಡಿ.11ರಂದು ಅಡ್ಯನಡ್ಕದಲ್ಲಿ ಜರುಗಿದ ಜನತಾ ವಿದ್ಯಾಸಂಸ್ಥೆಗಳ ಸ್ಥಾಪಕರ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಆಮಿಷಕ್ಕಾಗಿ ನಾವು ಏನನ್ನೂ ಮಾಡಬಾರದು. ಸ್ವಪ್ರಜ್ಞೆಯಿಂದ ಕಾರ್ಯಸಾಧನೆ ಮಾಡಬೇಕು. ವಿಕಾಸದ ಸಾಧನ ಜ್ಞಾನವೇ ಆಗಿದೆ ಎಂದು ಅವರು ನುಡಿದರು. ಅಡ್ಯನಡ್ಕ ಎಜುಕೇಷನಲ್ ಸೊಸೈಟಿಯ ಅಧ್ಯಕ್ಷ ಗೋವಿಂದ ಪ್ರಕಾಶ್ ಸಾಯ ಅಧ್ಯಕ್ಷತೆ ವಹಿಸಿದ್ದರು. ಜನತಾ ವಿದ್ಯಾಸಂಸ್ಥೆಗಳ ಸಂಚಾಲಕಿ ಡಾ. ಅಶ್ವಿನಿ ಕೃಷ್ಣಮೂರ್ತಿ ಪ್ರಸ್ತಾವಿಸಿದರು. ಜನತಾ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ರಮೇಶ್ ಎಂ. ಬಾಯಾರ್ ಹಾಗೂ ಜನತಾ ಹಿ.ಪ್ರಾ. ಶಾಲಾ ಮುಖ್ಯೋಪಾಧ್ಯಾಯ ಮಾಧವ ನಾಯ್ಕ್ ಉಪಸ್ಥಿತರಿದ್ದರು. ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಆರ್. ನಾಯ್ಕ್ ವರದಿ ವಾಚಿಸಿದರು. ಜನತಾ ಪ.ಪೂ. ಕಾಲೇಜಿನ ಪ್ರಾಂಶುಪಾಲ ಡಿ. ಶ್ರೀನಿವಾಸ್ ಸ್ವಾಗತಿಸಿ, ಜನತಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಮಹಾಬಲ ಶೆಟ್ಟಿ ವಂದಿಸಿದರು. ಅಧ್ಯಾಪಕ ವೃಂದದ ಸುಗುಣ, ಮುನೀರ್ ಕೆ., ಸುಂದರ್ ಜಿ., ಗೀತಾ ಎಚ್. ಶೆಟ್ಟಿ, ಕುಸುಮಾವತಿ, ಸೋಮಶೇಖರ್ ಮತ್ತು ಗಣೇಶಮೂರ್ತಿ ಬಹುಮಾನ ವಿಜೇತರ ವಿವರ ವಾಚಿಸಿದರು.

Also Read  ಹರಿಹರ ಪಲ್ಲತಡ್ಕ: ರಸ್ತೆ ಕಾಂಕ್ರೀಟ್ ಕಾರ್ಯ

ಅಡ್ಯನಡ್ಕ, ಮೂಡಂಬೈಲು, ಸಾಯ ಮತ್ತು ಪೆರ್ಲ ಶಾಲೆಗಳ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಾರ್ಷಿಕೋತ್ಸವದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಮತ್ತು ಹಿರಿಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವೇದದೀಕ್ಷಾ ಪಿ. ಎಸ್. ಹಾಗೂ ಪಂಚಮಿಕುಮಾರಿ ಕಾರ್ಯಕ್ರಮ ನಿರೂಪಿಸಿದರು.
ಪೂರ್ವಾಹ್ನ ಅಡ್ಯನಡ್ಕ ಎಜುಕೇಷನಲ್ ಸೊಸೈಟಿಯ ಅಧ್ಯಕ್ಷ ಗೋವಿಂದ ಪ್ರಕಾಶ್ ಸಾಯ ಧ್ವಜಾರೋಹಣ ನೆರವೇರಿಸಿದರು. ದಿವಂಗತ ಪಾರ್ವತಿ ಅಮ್ಮ ಅವರ ಸ್ಮರಣಾರ್ಥ ಮಗ ನಾರಾಯಣ ಜೋಶಿ ಚವರ್ಕಾಡು ಅವರಿಂದ ಸಿಹಿತಿಂಡಿ ವಿತರಣೆ ಜರುಗಿತು. ಅಪರಾಹ್ನ ಪ್ರಾಂಶುಪಾಲ ಡಿ. ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಜರುಗಿದ ಹಿರಿಯ ವಿದ್ಯಾರ್ಥಿ ಸಂಘದ ಸಭಾ ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಾನಂದ ಉಳಯ, ಕಾರ್ಯದರ್ಶಿ ಎಂ.ಕುಂಞ ನಾಯ್ಕ್ ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿಗಳಿಂದ ನಡೆದ ಮನರಂಜನಾ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ಮತ್ತು ರಾಜಶೇಖರ್ ಮರಕಿಣಿ ಮತ್ತು ಬಳಗದವರಿಂದ ಸಂಗೀತ ರಸಮಂಜರಿ ಜರುಗಿತು. ನಿವೃತ್ತ ಅಧ್ಯಾಪಕ ಟಿ. ಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು.

Also Read  ವಿಧಾನಸಭೆ ಚುನಾವಣೆ: 43 ಕ್ಷೇತಗಳಿಗೆ ಇಂದು ಮತದಾನ ಆರಂಭ

error: Content is protected !!
Scroll to Top