(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.11. ಜಿಲ್ಲೆಯ ಎಲ್ಲಾ ಸರಕಾರಿ ಶಾಲೆಗಳ ಜಮೀನಿನ ದಾಖಲೆಗಳನ್ನು ಸಮರ್ಪಕವಾಗಿಟ್ಟುಕೊಳ್ಳುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಸೂಚಿಸಿದ್ದಾರೆ.
ಅವರು ಮಂಗಳವಾರದಂದು ನೇತ್ರಾವತಿ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಹಲವಾರು ಸರಕಾರಿ ಶಾಲೆಗಳಿಗೆ ತಮ್ಮ ಜಮೀನಿನ ಸಮರ್ಪಕವಾದ ದಾಖಲೆಗಳಿಲ್ಲದೆ ಶಾಲಾ ಭೂಮಿ ಒತ್ತುವರಿಯಾಗುತ್ತಿರುವುದು ಕಂಡುಬಂದಿದೆ. ಶಾಲಾ ಆಟದ ಮೈದಾನಗಳು ಕೂಡಾ ಅತಿಕ್ರಮಿಸಲ್ಪಟ್ಟಿವೆ. ಈ ನಿಟ್ಟಿನಲ್ಲಿ ಕಂದಾಯ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಜಂಟೀಯಾಗಿ ಕ್ರಮ ಕೈಗೊಂಡು ಜಿಲ್ಲೆಯ ಎಲ್ಲಾ ಸರಕಾರಿ ಶಾಲೆಗಳ ಜಮೀನಿನ ದಾಖಲೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲು ಅವರು ತಿಳಿಸಿದರು.
ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಸರಕಾರಿ ಶಾಲಾ ಕಂಪೌಂಡ್ ಹಾಗೂ ಆಟದ ಮೈದಾನಗಳನ್ನು ನಿರ್ಮಿಸಲು ಅನುದಾನ ಲಭ್ಯವಿದೆ. ಹೀಗಾಗಿ ಇಂತಹ ಸೌಲಭ್ಯಗಳಿಲ್ಲದ ಶಾಲೆಗಳಲ್ಲಿ ಆಯಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಶಾಲಾ ಮುಖ್ಯೋಪಾಧ್ಯಾಯರು ಕ್ರಮ ವಹಿಸಬೇಕು. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಾವಕಾಶ ಸೃಷ್ಟಿಯಾಗುವುದಲ್ಲದೇ ಗ್ರಾಮೀಣ ಸೌಲಭ್ಯಗಳು ಹೆಚ್ಚಲಿವೆ ಎಂದು ಜಿ.ಪಂ. ಅಧ್ಯಕ್ಷರು ಹೇಳಿದರು. ವೆನ್‍ಲಾಕ್ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ವರದಿ ಬರಲು ವಿಳಂಬವಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ರೋಗಿಗಳಿಂದ ತೆಗೆದ ರಕ್ತವನ್ನು ಆಯಾ ದಿನದಂದೇ ಪರೀಕ್ಷೆಗೆ ಕಳುಹಿಸಬೇಕು. ವಿಳಂಬಕ್ಕೆ ಕಾರಣರಾಗುವ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮೀನಾಕ್ಷಿ ಶಾಂತಿಗೋಡು ಅವರು ವೆನ್‍ಲಾಕ್ ಅಧೀಕ್ಷಕರಿಗೆ ತಿಳಿಸಿದರು.
ವೆನ್‍ಲಾಕ್ ಆಸ್ಪತ್ರೆಯ ಉನ್ನತ ಜವಾಬ್ದಾರಿಗೆ ಜಂಟೀ ನಿರ್ದೇಶಕರ ಹುದ್ದೆಯನ್ನು ಸೃಷ್ಟಿಸಿ ರಾಜ್ಯ ಸರಕಾರ ಮಂಜೂರು ಮಾಡಿದೆ. ಆದರೆ, ಸದರಿ ಹುದ್ದೆಗೆ ಇನ್ನೂ ಅಧಿಕಾರಿಗಳು ನೇಮಕಗೊಳ್ಳದಿರುವ ಕುರಿತು ಅಧ್ಯಕ್ಷರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವೆನ್‍ಲಾಕ್ ಅಧೀಕ್ಷಕಿ ಡಾ. ರಾಜೇಶ್ವರಿ ದೇವಿ, ಜಂಟಿ ನಿರ್ದೇಶಕರಿಗೆ ಅಧಿಕಾರ ಹಸ್ತಾಂತರಿಸಲು ತನಗೆ ಸರಕಾರದಿಂದ ಯಾವುದೇ ಸೂಚನೆ ಬಂದಿಲ್ಲ. ಅಲ್ಲದೇ, ಈ ಹುದ್ದೆಯನ್ನು ರಾಜ್ಯ ಸರಕಾರ ಬೆಂಗಳೂರು ಮಹಾನಗರ ಪಾಲಿಕೆಗೆ ವರ್ಗಾಯಿಸಿದೆ ಎಂದು ಹೇಳಿದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ, ವೆನ್‍ಲಾಕ್ ಆಸ್ಪತ್ರೆಯಲ್ಲಿ ರೋಗಿಗಳು ಮತ್ತು ಅವರ ಪರಿಚಾರಕರೊಂದಿಗೆ ಆಸ್ಪತ್ರೆ ಸಿಬ್ಬಂದಿಗಳು ಸೌಜನ್ಯ ರೀತಿಯಲ್ಲಿ ವರ್ತಿಸದಿರುವ ಬಗ್ಗೆ ನಿರಂತರ ದೂರುಗಳು ಬರುತ್ತಿವೆ. ಈ ಬಗ್ಗೆ ಸಿಬ್ಬಂದಿಗಳಿಗೆ ಸೂಕ್ತ ತಿಳುವಳಿಕೆ ನೀಡಲು ಸೂಚಿಸಿದರು.
ಜಿಲ್ಲೆಯಲ್ಲಿ ಅಂಗನವಾಡಿಗಳ ದುರಸ್ತಿ ಕಾಮಗಾರಿಗೆ 1 ಕೋಟಿ 40 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಇದನ್ನು ಪ್ರಸಕ್ತ ವರ್ಷವೇ ಬಳಸಿಕೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು ಸಭೆಗೆ ತಿಳಿಸಿದರು. ಶಾಲಾ ಮಕ್ಕಳಿಗೆ ವಿತರಿಸಲು ಬಂದಿರುವ ಸೈಕಲ್‍ಗಳು ಕಳಪೆ ಗುಣಮಟ್ಟದಲ್ಲಿ ಕಂಡು ಬಂದಿರುವುದರಿಂದ ಅಂತಹ ಸೈಕಲ್‍ಗಳನ್ನು ಸ್ವೀಕರಿಸದಂತೆ ಹಾಗೂ ಮಕ್ಕಳಿಗೆ ವಿತರಿಸದಂತೆ ಎಲ್ಲಾ ಶಾಲೆಗಳಿಗೆ ಸೂಚಿಸಲಾಗಿದೆ ಎಂದು ಡಿಡಿಪಿಐ ತಿಳಿಸಿದರು. ಚಿಣ್ಣರ ಪ್ರವಾಸ ಯೋಜನೆಯಡಿ ಆಯ್ಕೆಯಾಗಿರುವ ಮಕ್ಕಳನ್ನು ಡಿಸೆಂಬರ್ ತಿಂಗಳಿನಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗುವುದು ಎಂದರು. ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ದುರಸ್ತಿ ಕಾಮಗಾರಿಗೆ ಜಿಲ್ಲಾ ಪಂಚಾಯತ್ ಅನುದಾನದಲ್ಲಿ 16 ಲಕ್ಷ ರೂ. ನಿಗದಿಪಡಿಸಲಾಗಿದೆ. ಆದರೆ, ಸ್ಮಾರ್ಟ್‍ಸಿಟಿ ಯೋಜನೆಯಡಿ ಮಂಗಳಾ ಕ್ರೀಡಾಂಗಣದ ಕಾಮಗಾರಿ ನಡೆಸಲು ಅನುದಾನ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿರುತ್ತಾರೆ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಂಗಳಾ ಕ್ರೀಡಾಂಗಣಕ್ಕೆ ಮೀಸಲಿಟ್ಟ ಅನುದಾನವನ್ನು ಜಿಲ್ಲೆಯ ಬೇರೆ ತಾಲೂಕು ಕ್ರೀಡಾಂಗಣದ ಅಭಿವೃದ್ಧಿಗೆ ಬಳಸುವಂತೆ ಸೂಚಿಸಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಸೆಲ್ವಮಣಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣಕ್ಕೆ ನಿಗದಿಪಡಿಸಿದ ಕಾರ್ಯಕ್ರಮಗಳ ಅನುಷ್ಠಾನ ವರದಿಯನ್ನು ಪ್ರತೀ ತಿಂಗಳ 5ನೇ ತಾರೀಕಿನೊಳಗೆ ಎಲ್ಲಾ ಇಲಾಖೆಗಳು ಸಮಾಜ ಕಲ್ಯಾಣ ಇಲಾಖೆಗೆ ಕಳುಹಿಸಬೇಕು. ಇಲ್ಲದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಸಭೆಯಲ್ಲಿ ಜಿ.ಪಂ. ವಿವಿಧ ಸ್ಥಾಯೀ ಸಮಿತಿ ಅಧ್ಯಕ್ಷರಾದ ಯು.ಪಿ. ಇಬ್ರಾಹಿಂ, ಅನಿತಾ ಹೇಮನಾಥ ಶೆಟ್ಟಿ, ಜನಾರ್ಧನ ಗೌಡ ಮತ್ತಿತರರು ಉಪಸ್ಥಿತರಿದ್ದರು.