(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.27. ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಎನ್. ಧರಂ ಸಿಂಗ್ ಕೆಲ ದಿನಗಳ ಅನಾರೋಗ್ಯದಿಂದಾಗಿ ಹೃದಯಾಘಾತದಿಂದಾಗಿ ಗುರುವಾರದಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಗುಲ್ಬರ್ಗ ಜಿಲ್ಲೆಯ ಜೇವರ್ಗಿ ತಾಲೂಕಿನ ಗ್ರಾಮವೊಂದರಲ್ಲಿ 1936 ಡಿಸೆಂಬರ್ 25 ರಂದು ಜನಿಸಿದ್ದ ಇವರು ಜ್ವರ ಹಾಗೂ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಆ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ನಗರದ ವಿಕ್ರಮ್ ಆಸ್ಪತ್ರೆಗೆ ದಾಖಲಾಗಿದ್ದು, ನಂತರ ಅವರ ಆರೋಗ್ಯ ಸ್ಥಿತಿ ಸುಧಾರಿಸಿತ್ತು. ಆದರೆ ಮತ್ತೆ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗುರುವಾರ ಮೃತಪಟ್ಟಿದ್ದಾರೆ. ಇವರು ಹೈದರಾಬಾದಿನ ುಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಎಂ.ಎ. ಹಾಗೂ ಎಲ್ಎಲ್‍ಬಿ ಪದವಿಯನ್ನು ಪಡೆದು ಕೆಲಕಾಲ ವಕೀಲ ವೃತ್ತಿಯನ್ನು ನಿರ್ವಹಿಸಿ 1960ರಲ್ಲಿ ಕಾಂಗ್ರೆಸ್ ಸೇರಿದ್ದ ಧರಂ ಸಿಂಗ್ 2004 ರಿಂದ 2006ರವರೆಗೆ ರಾಜ್ಯದ 17ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಸತತ 7 ಬಾರಿ ವಿಧಾನ ಸಭೆಗೆ ಆಯ್ಕೆಯಾಗಿದ್ದ ಇವರು ಗೃಹ, ಲೋಕೋಪಯೋಗಿ, ಅಬಕಾರಿ, ಕಂದಾಯ ಮತ್ತು ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.