ನೂಜಿಬಾಳ್ತಿಲ: ಬೆಥನಿ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ, ಸಮ್ಮಾನ ► ಸಾಧಕರ ಸಾಧನೆಗಳು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ: ಎಸ್.ಅಬ್ದುಲ್‍ಖಾದರ್

(ನ್ಯೂಸ್ ಕಡಬ) newskadaba.com ಕಡಬ, ಡಿ.10. ಪ್ರತಿಯೊಬ್ಬ ಸಾಧಕನ ಸಾಧನೆಯ ಹಿಂದೆ ಕಠಿಣ ಪರಿಶ್ರಮ, ಶ್ರದ್ಧೆ ಹಾಗೂ ನಿರಂತರ ಪ್ರಯತ್ನ ಅಡಗಿರುತ್ತದೆ. ಆದುದರಿಂದ ಸಾಧಕರ ಸಾಧನೆಗಳಿಂದ ವಿದ್ಯಾರ್ಥಿಗಳು ಪ್ರೇರಣೆ ಪಡೆಯಬೇಕು ಎಂದು ಸಾಮಾಜಿಕ ಮುಂದಾಳು, ಕಡಬದ ರಹ್ಮಾನಿಯಾ ಟೌನ್ ಜುಮ್ಮಾ ಮಸೀದಿ ಅಧ್ಯಕ್ಷ ಎಸ್.ಅಬ್ದುಲ್ ಖಾದರ್ ಅವರು ನುಡಿದರು.

ಅವರು ಶನಿವಾರ ರಾತ್ರಿ ಜರಗಿದ ನೂಜಿಬಾಳ್ತಿಲದ ಬೆಥನಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ವಾರ್ಷಿಕೋತ್ಸವ ಹಾಗೂ ನಿವೃತ್ತ ಶಿಕ್ಷಕರಿಗೆ ಸಮ್ಮಾನ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಕಲಿಕೆಯ ವಿಚಾರದಲ್ಲಿ ಸ್ಪಷ್ಟವಾದ ಗುರಿಯನ್ನು ಇರಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳು ಯಶಸ್ಸು ಪಡೆಯಲು ಸಾಧ್ಯ. ಗುರಿಯಿಲ್ಲದ ದಾರಿಯಲ್ಲಿ ಸಾಧನೆಗಳು ದಾಖಲಾಗಲು ಸಾಧ್ಯವಿಲ್ಲ. ಹೆತ್ತವರು ಮಕ್ಕಳಿಗೆ ಆಸ್ತಿ ಕೂಡಿಡುವ ಬದಲು ಸಂಸ್ಕಾರ ಮತ್ತು ಉತ್ತಮ ಶಿಕ್ಷಣ ನೀಡಿ ಮಕ್ಕಳನ್ನೇ ಆಸ್ತಿಯಾಗಿ ರೂಪಿಸುವ ಕೆಲಸ ಮಾಡಿದಾಗ ಸುಸಂಸ್ಕೃತ ಸಮಾಜ ನಿರ್ಮಾಣಗೊಳ್ಳುತ್ತದೆ ಎಂದರು. ಕ್ರೈಸ್ತ ಸಂಸ್ಥೆಗಳು ಶಿಕ್ಷಣ, ವೈದ್ಯಕೀಯ ಹಾಗೂ ಸೇವಾ ಕ್ಷೇತ್ರಗಳಲ್ಲಿ ನೀಡುತ್ತಿರುವ ಸೇವೆ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಭಾ ಕಾರ್ಯಕ್ರಮವನ್ನು ಉದ್ಘಾಟನೆಗೈದು ಮಾತನಾಡಿದ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ ಅವರು ಸರಕಾರವು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದೆ. ಬಡ ಮತ್ತು ಹಿಂದುಳಿದ ವರ್ಗಗಳ ಮಕ್ಕಳಿಗೆ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡುವ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದೆ. ಅದನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಉತ್ತಮ ಶೈಕ್ಷಣಿಕ ಸಾಧನೆ ಮಾಡಬೇಕು ಎಂದರು. ಈಗಾಗಲೇ ಬೆಥನಿ ವಿದ್ಯಾಸಂಸ್ಥೆಗೆ ವಿವಿಧ ಅನುದಾನಗಳ ಮೂಲಕ ನೆರವು ನೀಡಿದ್ದು, ಪರಿಸರದ ಮುಖ್ಯರಸ್ತೆಯಲ್ಲಿ ಬೀದಿ ದೀಪ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಹಾಗೆಯೇ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ತಂಗುದಾಣ ನಿರ್ಮಿಸಲಾಗುವುದು ಎಂದು ಅವರು ಭರವಸೆ ನೀಡಿದರು.

Also Read  ಇಂದಿನಿಂದ ಬ್ಯಾಕಿಂಗ್ ಕ್ಷೇತ್ರದಲ್ಲಾದ ಬದಲಾವಣೆಗಳ ಬಗ್ಗೆ ನಿಮಗೆ ತಿಳಿದಿದೆಯೇ

ಪುತ್ತೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ವಂ| ಡಾ| ಎಲ್ದೋ ಪುತ್ತನ್‍ಕಂಡತ್ತಿಲ್ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ನೂಜಿಬಾಳ್ತಿಲ ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ, ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಮಾಮಚ್ಚನ್ ಎಂ. ಹಾಗೂ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಖಾದರ್ ಸಾಹೇಬ್ ಕಲ್ಲುಗುಡ್ಡೆ ಅವರು ಮುಖ್ಯಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಸಂಸ್ಥೆಯ ಕೋಶಾಧಿಕಾರಿ ವಂ|ಗೀವರ್ಗೀಸ್ ಬರ್ಸೋಮಾ, ತಾ.ಪಂ.ಸದಸ್ಯ ಫಝಲ್ ಕೋಡಿಂಬಾಳ, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಉದ್ಯಮಿ ಅಭಿಲಾಷ್ ಪಿ.ಕೆ., ವಿದ್ಯಾರ್ಥಿ ನಾಯಕ ಹರ್ಷಿತ್‍ ಕುಮಾರ್, ನಾಯಕಿ ಇಂದಿಕಾ ಉಪಸ್ಥಿತರಿದ್ದರು.

ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಅನುದಾನದಿಂದ ಕಾಲೇಜಿನ ಸಂಪರ್ಕ ರಸ್ತೆಗೆ ಅಳವಡಿಸಲಾಗಿರುವ ಇಂಟರ್ಲಾಕ್ ವ್ಯವಸ್ಥೆಯನ್ನು ಉದ್ಘಾಟಿಸಲಾಯಿತು. ಕೇಂದ್ರ ಸರಕಾರದ ಅನುದಾನದಲ್ಲಿ ಕಾಲೇಜಿನಲ್ಲಿ ಪ್ರಾರಂಭಿಸಲಾಗಿರುವ ಅಟಲ್ ವಿಕಾಸ್ ವಿಜ್ಞಾನ ಕೇಂದ್ರವನ್ನು ಅನಾವರಣಗೊಳಿಸಲಾಯಿತು. ವಿದ್ಯಾರ್ಥಿಗಳಾದ ಸಮ್ಯತ್ ಹಾಗೂ ರಂಜಿತ್ ಅವರು ರಚಿಸಿದ ಕವಿತೆಗಳ ಸಂಕಲನವನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ಬೆಥನಿ ವಿದ್ಯಾಸಂಸ್ಥೆಗಳ ಸಂಚಾಲಕ ವಂ| ಡಾ| ವರ್ಗೀಸ್ ಕೆ`ಪನಡ್ಕ ಅವರು ಸ್ವಾಗತಿಸಿ, ಪ್ರಾಂಶುಪಾಲ ಜಾರ್ಜ್ ಟಿ.ಎಸ್. ವರದಿ ಮಂಡಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಎಸ್. ಭಟ್ ಸಮ್ಮಾನಿತರನ್ನು ಪರಿಚಯಿಸಿದರು. ಉಪನ್ಯಾಸಕರಾದ ಆ್ಯನಿ ಮತ್ತು ಬೀನಾ ನಿರೂಪಿಸಿ, ಶಿಕ್ಷಕ ಪ್ರದೀಪ್ ಪ್ರತಿಭಾನ್ವಿತರ ಪಟ್ಟಿ ವಾಚಿಸಿದರು. ಸಂಸ್ಥೆಯ ನಿರ್ದೇಶಕ ವಂ|ಸಖರಿಯಾಸ್ ನಂತಿಯಾಟ್ ವಂದಿಸಿದರು.

Also Read  ಕಡಬ: ಮಿನಿವಿಧಾನ ಸೌದ ಸಹಿತ ವಿವಿಧ ಕಟ್ಟಡಗಳ ಉದ್ಘಾಟನೆ ➤ ಸಚಿವ ಎಸ್.ಅಂಗಾರರ ನೇತೃತ್ವದಲ್ಲಿ ಮಹತ್ವದ ಸಭೆ

ಸಭಾ ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಸಮ್ಮಾನ:ಸಂಸ್ಥೆಯ ನಿವೃತ್ತ ಉಪನ್ಯಾಸಕ  ಜೋಸೆಫ್ ಟಿ.ಜೆ. ಮತ್ತು ಲಿಲ್ಲಿ ಜೋಸೆಫ್ ದಂಪತಿ ಹಾಗೂ ನಿವೃತ್ತ ಗಣಿತ ಶಿಕ್ಷಕ ಬಾಲಕೃಷ್ಣ ರೈ ಮತ್ತು ವಸಂತಿ ದಂಪತಿಯನ್ನು ಸಮ್ಮಾನಿಸಿ ಗೌರವಿಸಲಾಯಿತು. ಸಮ್ಮಾನಿತರು ತಮ್ಮ ಸೇವಾವಧಿಯಲ್ಲಿ ಸಹಕರಿಸಿದವರು ಹಾಗೂ ಸಮಾರಂಭದಲ್ಲಿ ಗೌರವಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಸಂಸ್ಥೆಯ ಅಭಿವೃದ್ಧಿಗೆ ಸಹಕಾರ ನೀಡಿದ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್, ನೂಜಿಬಾಳ್ತಿಲ ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ, ರಕ್ಷಕ ಶಿಕ್ಷಕ ಸಂಘದ ಖಾದರ್ ಸಾಹೇಬ್ ಕಲ್ಲುಗುಡ್ಡೆ ಮತ್ತು ಆಮೀನಾ ದಂಪತಿಯನ್ನು ಗೌರವಿಸಲಾಯಿತು.

error: Content is protected !!
Scroll to Top