(ನ್ಯೂಸ್ ಕಡಬ) newskadaba.com ಕಡಬ, ಡಿ.08. ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣರವರ ಸೂಚನೆ ಮೇರೆಗೆ ಮರ್ದಾಳದಿಂದ ಕರ್ಮಾಯಿಗೆ ಸಂಪರ್ಕ ಕಲ್ಪಿಸುವ 4.2 ಕಿ.ಮೀ.ರಸ್ತೆ ಕಾಂಕ್ರಿಟೀಕರಣಕ್ಕೆ ಸಂಬಂಧಿಸಿ ಕಡಬ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್‍ರವರ ನೇತೃತ್ವದಲ್ಲಿ ಕಡಬ ತಾಲೂಕು ಪಿಡಬ್ಲ್ಯೂಡಿ ಇಂಜಿನಿಯರ್ ಶ್ರೀಕಾಂತ್‍ರವರು ಸ್ಥಳ ಪರಿಶೀಲನೆ ನಡೆಸಿ ಅಂದಾಜುಪಟ್ಟಿ ತಯಾರಿಸಿದ್ದಾರೆ.

ಸದ್ರಿ ರಸ್ತೆಯು ಕರ್ಮಾಯಿ ಸರಕಾರಿ ಹಿ.ಪ್ರಾ.ಶಾಲೆ, ಬಜಕರೆ ರೈಲ್ವೆ ನಿಲ್ದಾಣ, ಕರ್ಮಾಯಿ ಸೈಂಟ್ ಮೇರಿಸ್ ಚರ್ಚ್, ಗುಡ್‍ಶೆಫರ್ಡ್ ಪ್ರೌಢಶಾಲೆ, ಕರ್ಮಾಯಿ ಅಂಗನವಾಡಿ ಕೇಂದ್ರ, ಸೈಂಟ್ ಮೇರಿಸ್ ಪ್ರೌಢಶಾಲೆಗೆ ಸಂಪರ್ಕ ಕಲ್ಪಿಸುತ್ತಿದ್ದು ಸದ್ರಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣರವರಿಗೆ ಜಿಲ್ಲಾ ಪರಿಷತ್ ಮಾಜಿ ಸದಸ್ಯ, ಜೆಡಿಎಸ್ ಕಡಬ ತಾಲೂಕು ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್‍ರವರ ಮೂಲಕ ಗ್ರಾಮಸ್ಥರು ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಸಚಿವರು ರಸ್ತೆ ಕಾಂಕ್ರಿಟೀಕರಣಕ್ಕೆ ಸಂಬಂಧಿಸಿ ಅಂದಾಜುಪಟ್ಟಿ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಪಿಡಬ್ಲ್ಯೂಡಿ ಇಲಾಖೆ ಇಂಜಿನಿಯರ್ ಶ್ರೀಕಾಂತ್ ಹಾಗೂ ಸಿಬ್ಬಂದಿಗಳು, ಮರ್ದಾಳದಿಂದ ಕರ್ಮಾಯಿ ಮಾಯಿಪ್ಪಾಜೆ ಸಂಪರ್ಕದ 4.2 ಕಿ.ಮೀ. ಉದ್ದದ ರಸ್ತೆಯ ಅಗಲೀಕರಣ, ಮೋರಿ ಅಳವಡಿಕೆಗೆ ಸಂಬಂಧಿಸಿ ಅಂದಾಜು ಪಟ್ಟಿ ತಯಾರಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಉಪಸ್ಥಿತರಿದ್ದ ಜೆಡಿಎಸ್ ಕಡಬ ತಾಲೂಕು ಉಪಾಧ್ಯಕ್ಷ ಮೋಹನ ಗೌಡ ಪಂಜೋಡಿ, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಕಡಬ ವಲಯದ ನಿಕಟಪೂರ್ವಾಧ್ಯಕ್ಷ ಗಣಪಯ್ಯ ಗೌಡ ಪಂಜೋಡಿ, ಮರ್ದಾಳ ಗ್ರಾ.ಪಂ.ಅಧ್ಯಕ್ಷೆ ಲತಾ ಕೆ.ಎಸ್., ಕರ್ಮಾಯಿ ಸೈಂಟ್ ಮೇರಿಸ್ ಚರ್ಚ್‍ನ ರೆ.ಫಾ.ಡಾನಿಯಲ್, ಗುಡ್‍ಶೆಫರ್ಡ್ ಶಾಲಾ ಸಂಚಾಲಕ ಸನ್ನಿ ವರ್ಗೀಸ್, ಮುಖ್ಯಶಿಕ್ಷಕಿ ಮೈತ್ರಿ, ಗುಡ್‍ಶೆಫರ್ಡ್ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯ ಸತ್ಯವೃತನ್ ಮತ್ತಿತರರು ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ಶೀಘ್ರ ಆರಂಭಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಈ ವೇಳೆ ಆಗ್ರಹಿಸಿದರು.
