(ನ್ಯೂಸ್ ಕಡಬ) newskadaba.com ಕಡಬ, ಡಿ.07. ಜೆಸಿಐ ಕಡಬ ಕದಂಬ ಇದರ 2019ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ದ.5ರಂದು ಸಂಜೆ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಅತಿಥಿಯಾಗಿದ್ದು ಜೆಸಿಐಗೆ ಹೊಸದಾಗಿ ಸೇರ್ಪಡೆಗೊಂಡ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದ ಜೇಸಿಐ ವಲಯ 15ರ ವಲಯಾಧ್ಯಕ್ಷ ಅಶೋಕ್ ಚೂಂತಾರುರವರು, ಜೆಸಿಐಯಲ್ಲಿ ತೊಡಗಿಕೊಂಡಲ್ಲಿ ಸಮಾಜಮುಖಿ ಕೆಲಸ ಮಾಡಲು ಸಾಧ್ಯವಿದೆ. ಇದರಲ್ಲಿ ತೊಡಗಿಕೊಂಡವರು ತಾವು ವಿಕಸನ ಹೊಂದುವುದರೊಂದಿಗೆ ಸಮಾಜದ ಅಭಿವೃದ್ಧಿಗೆ ಶ್ರಮಿಸಲು ಸಾಧ್ಯವಿದೆ ಎಂದರು. ಹೊಸದಾಗಿ ಸೇರ್ಪಡೆಗೊಂಡ ಸದಸ್ಯರಿಗೆ ಜೇಸಿಐ ನೀತಿ ನಿಯಮಗಳನ್ನು ತಿಳಿಸಿದ ಅವರು, ಜೆಸಿಐ ಮೂಲಕ ಉತ್ತಮ ಕೆಲಸ ನಿರ್ವಹಿಸುವಂತೆ ಕರೆ ನೀಡಿದರು. ವಲಯ 15ರ ಅಧ್ಯಕ್ಷನಾಗಿ ಹಲವು ಜೆಸಿಐ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡಿರುತ್ತೇನೆ. ಕಡಬ ಜೆಸಿಐಯಲ್ಲಿ ಯುವಕರ ದಂಡೇ ಇದ್ದು ಇಂದಿನ ಪದಗ್ರಹಣ ಸಮಾರಂಭದಲ್ಲಿಯೂ ಹಲವು ಸದಸ್ಯರನ್ನು ಸೇರ್ಪಡೆಗೊಳಿಸುವ ಮೂಲಕ ವಲಯ ಮಟ್ಟದಲ್ಲಿಯೇ ಅತ್ಯಂತ ಹೆಚ್ಚಿನ ಸದಸ್ಯರನ್ನು ಹೊಂದಿರುವ ಮತ್ತು ಬಹಳ ಚುರುಕುತನದಲ್ಲಿ ಕಾರ್ಯ ಮಾಡುತ್ತಿರುವ ಸಂಸ್ಥೆಯಾಗಿ ಮೂಡಿಬಂದಿದೆ. ನೂತನ ಅಧ್ಯಕ್ಷ ರವಿಚಂದ್ರ ಪಡುಬೆಟ್ಟುರವರ ಅಧ್ಯಕ್ಷತೆಯಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯ ನಡೆಯಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಕಡಬ ತಹಶೀಲ್ದಾರ್ ಜಾನ್‍ಪ್ರಕಾಶ್ ರೋಡ್ರಿಗಸ್‍ರವರು ಮಾತನಾಡಿ, ಇಚ್ಚಾಶಕ್ತಿಯಿಂದ ಕೆಲಸ ಮಾಡಿದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಇಲ್ಲಿಯ ಜೆಸಿಐ ಸಂಸ್ಥೆಯೇ ಸಾಕ್ಷಿಯಾಗಿದೆ, ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಕಡಬ ಕದಂಬ ಜೆಸಿಐ ಸಮಾಜಕ್ಕೆ ಮಾದರಿ ಸಂಸ್ಥೆಯಾಗಿದ್ದು, ಇದರಲ್ಲಿ ತೊಡಗಿಸಿಕೊಂಡವರಿಗೆ ತಮ್ಮ ವ್ಯಕ್ತಿತ್ವವನ್ನು ಬೆಳೆಸುವುದರ ಜೊತೆಗೆ ಇತರರನ್ನು ಬೆಳೆಸಿಕೊಳ್ಳಲು ಸಾಧ್ಯ ಎಂದರು. ಇನ್ನೋರ್ವ ಅತಿಥಿ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು ಮಾತನಾಡಿ, ಜನಪ್ರತಿನಿಧಿಗಳಿಗೆ ಅಥವಾ ಅಧಿಕಾರಿಗಳಿಗೆ ಸಾಮಾಜಿಕ ಕೆಲಸಗಳಲ್ಲಿ ಯಶಸ್ವಿಯಾಗಿ ತೊಡಗಿಕೊಳ್ಳಲು ಜೆಸಿಐ ದಾರಿದೀಪವಾಗಿದೆ ಎಂದರು. ಪದಗ್ರಹಣ ನೆರವೇರಿಸಿ ಮಾತನಾಡಿದ ವಲಯ ಉಪಾಧ್ಯಕ್ಷ ದಾಮೋದರ ಪಾಟೀಲ್‍ರವರು, ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಲು ಜೆಸಿಐ ಉತ್ತಮ ಸಂಸ್ಥೆಯಾಗಿದೆ ಎಂದರು. ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಾಗರಾಜ್ ಎನ್.ಕೆ.ಮಾತನಾಡಿ, ಕಡಬದಲ್ಲಿ ಜೆಸಿಐ ಆಂದೋಲನ ಪ್ರಾರಂಭಗೊಂಡು 20 ವರ್ಷ ಕಳೆದಿದೆ. ಕಡಬ ಗುತ್ತು ರಾಜೇಂದ್ರ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಕಡಬ ಕದಂಬ ಜೆಸಿಐ ಎಂದು ನಾಮಕರಣಗೊಂಡಿತು. ಜೆಸಿಐ ಹಿರಿಮೆಯನ್ನು ಕಡಬದಾದ್ಯಂತ ಪಸರಿಸಲು ಪೂರ್ವಾಧ್ಯಕ್ಷರುಗಳ, ಪದಾಧಿಕಾರಿಗಳ ಶ್ರಮ ಅಪಾರವಾಗಿದೆ ಎಂದರು. ನೂತನ ಅಧ್ಯಕ್ಷ ರವಿಚಂದ್ರ ಪಡುಬೆಟ್ಟುರವರು ಪದಗ್ರಹಣ ಸ್ವೀಕರಿಸಿ ಮಾತನಾಡಿ, ಜೆಸಿಐ ಸಂಸ್ಥೆಯಲ್ಲಿ ಸೇರಿಕೊಂಡ ಬಳಿಕ ನಾನು ಗಣನೀಯವಾಗಿ ಬೆಳೆದಿದ್ದು ತುಂಬಾ ಅನುಭವವಾಗಿದೆ. 2019ನೇ ಸಾಲಿನ ಅಧ್ಯಕ್ಷನಾಗಿ ಆಯ್ಕೆಯಾಗಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು. ಎಲ್ಲರ ಸಹಕಾರ ಸದ ಇರಲಿ ಎಂದು ಹೇಳಿದರು. ಸ್ಥಾಪಕಾಧ್ಯಕ್ಷ ರಾಜೇಂದ್ರ ಹೆಗ್ಡೆ ಗುತ್ತುಮನೆಯವರು ನಿಕಟಪೂರ್ವ ಅಧ್ಯಕ್ಷ ತಸ್ಲಿಂರವರಿಗೆ ಹಾರಾರ್ಪಣೆ ಮಾಡಿ ಪೂರ್ವಾಧ್ಯಕ್ಷರ ಸಾಲಿಗೆ ಸೇರ್ಪಡೆ ಮಾಡಿದರು.
ನೂತನ ಕಾರ್ಯದರ್ಶಿ ಕಾಶಿನಾಥ್ ಗೋಗಟೆಯವರಿಗೆ ನಿಕಟಪೂರ್ವ ಕಾರ್ಯದರ್ಶಿ ಮೋಹನ್‍ರವರು ಅಧಿಕಾರ ಹಸ್ತಾಂತರಿಸಿದರು. ಹೊಸದಾಗಿ ಸೇರ್ಪಡೆಗೊಂಡ ಸದಸ್ಯರನ್ನು ಪೂರ್ವಾಧ್ಯಕ್ಷರುಗಳು ಸಭೆಗೆ ಪರಿಚಯಿಸಿದರು. ನಿರ್ಗಮನ ಅಧ್ಯಕ್ಷ ವೆಂಕಟೇಶ್ ಪಾಡ್ಲ ಸ್ವಾಗತಿಸಿ, ನೂತನ ಕಾರ್ಯದರ್ಶಿ ಕಾಶಿನಾಥ್ ಗೋಗಟೆ ವಂದಿಸಿದರು. ಕುಟ್ರುಪಾಡಿ ಸಿಎ ಬ್ಯಾಂಕ್ ಅಧ್ಯಕ್ಷ ಕರುಣಾಕರ ಗೋಗಟೆ, ಹೊಸಮಠ ಹಾ.ಉ.ಸ.ಸಂಘದ ಅಧ್ಯಕ್ಷ ಕಿರಣ್ ಗೋಗಟೆ, ಎಪಿಎಂಸಿ ಮಾಜಿ ಅಧ್ಯಕ್ಷರುಗಳಾದ ಕೃಷ್ಣ ಶೆಟ್ಟಿ ಕಡಬ, ಸೀತಾರಾಮ ಗೌಡ, ಕಡಬ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಎಸ್.ಅಬ್ದುಲ್ ಖಾದರ್, ಕಡಬ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ಗೌಡ ಕಜೆಮೂಲೆ, ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಮೇನೇಜರ್ ರೋ| ಮಹಮ್ಮದ್ ಕುಂಞ, ತಾ.ಪಂ.ಮಾಜಿ ಅಧ್ಯಕ್ಷೆ ಪುಲಸ್ತ್ಯ ರೈ, ಕುಟ್ರುಪ್ಪಾಡಿ ಸಿಎ ಬ್ಯಾಂಕ್ ನಿರ್ದೇಶಕ ಶಶಾಂಕ್ ಗೋಖಲೆ, ನೂಜಿಬಾಳ್ತಿಲ ಬೆಥನಿ ಸಂಯುಕ್ತ ಪ.ಪೂ.ಕಾಲೇಜಿನ ಉಪನ್ಯಾಸಕ ಜೋಸೆಪ್ ಟಿ.ಜೆ., ಕಡಬ ಪ್ರೌಢಶಾಲಾ ನಿವೃತ್ತ ಸಿಬ್ಬಂದಿ ಅಹ್ಮದ್ ಕುಂಞ, ಪೂರ್ವಾಧ್ಯಕ್ಷರುಗಳಾದ ಪಿ.ಕೆ.ಚೆರಿಯನ್,ಸುಜಿತ್ ಪಿ.ಕೆ. ಸೇರಿದಂತೆ ಶಾಲಾ ಕಾಲೇಜುಗಳ ಅಧ್ಯಾಪಕರು, ಸಂಘಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.