ಸುಬ್ರಹ್ಮಣ್ಯ ಶ್ರೀ ಸಂಪುಟ ಮಠದ ವಿರುದ್ಧದದ ಆಪಾದನೆ ಸತ್ಯಕ್ಕೆ ದೂರ ► ಸಂಪುಟ ನರಸಿಂಹ ಸ್ವಾಮಿ ಮಠದ ಆಡಳಿತಾಧಿಕಾರಿ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com
ಸುಬ್ರಹ್ಮಣ್ಯ ಡಿ.07. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪಹಣಿ ಪತ್ರದಲ್ಲಿ ಶ್ರೀ ಸಂಪುಟ ನರಸಿಂಹ ಮಠದ ಕಡೆಯಿಂದ ತಿದ್ದುಪಡಿ ಮಾಡಿದ ಆರೋಪ ಸತ್ಯಕ್ಕೆ ದೂರವಾದುದು ಎಂದು ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಆಡಳಿತಾಧಿಕಾರಿ ಸ್ಪಷ್ಠೀಕರಣ ನೀಡಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿರುವ ಮಠದ ಆಡಳಿತಾಧಿಕಾರಿ ಸುದರ್ಶನ ಜೋಯಿಷ ಅವರು, ಸುಬ್ರಹ್ಮಣ್ಯ ಗ್ರಾಮದ ಸ.ನಂ 82/1ರ ಕೈ ಬರಹದ ಪಹಣಿಯಲ್ಲಿ ಸುಬ್ರಾಯ ದೇವಸ್ಥಾನ, ನರಸಿಂಹ ಮಠದ ಹೆಸರು ಅನಾದಿಕಾಲದಿಂದ ಕಲಂ ನಂ.11ರಲ್ಲಿ ಇತ್ತು. ಇತರ ಹಕ್ಕುಗಳ ಕಲಂನಲ್ಲಿ ಪಹಣಿ ಗಣಕೀಕರಣ ಆದ ನಂತರ ಕಣ್ಣುತಪ್ಪಿನಿಂದ ಬಿಟ್ಟುಹೋಗಿರುವುದನ್ನು ಉಚ್ಛ ನ್ಯಾಯಾಲಯದ ಆದೇಶದ ಪ್ರಕಾರ ಸೇರಿಸಲಾಗಿದೆ. ಸುಬ್ರಹ್ಮಣ್ಯ ದೇವಸ್ಥಾನದ ಹೆಸರನ್ನು ಉಳಿಸಿಕೊಂಡು, ತಿದ್ದುಪಡಿ ಮಾಡಿರುವುದರಿಂದ ಸದ್ರಿ ಕಾರ್ಯನಿರ್ವಾಹಕ ಅಧಿಕಾರಿಗೆ ನೋಟೀಸು ಮಾಡದೇ ಇರುವುದು ಕಾನೂನು ಬಾಹಿರವಾಗುವುದಿಲ್ಲ. ಸ.ನಂ.82/1ರಲ್ಲಿ ಸುಬ್ರಾಯ ದೇವಸ್ಥಾನ, ನರಸಿಂಹ ಮಠ ಆಸ್ತಿತ್ವದಲ್ಲಿರುವುದು ಅವಿವಾದಿತ ವಿಷಯ ಎಂದವರು ತಿಳಿಸಿದ್ದಾರೆ.

Also Read  ಫೋನ್ ನಲ್ಲಿ ಮಾತನಾಡುತ್ತಿದ್ದಾಗಲೇ ಹೃದಯಾಘಾತದಿಂದ ಮೃತ ಪಟ್ಟ ಮೆಡಿಕಲ್ ಅಂಗಡಿ ಮಾಲೀಕ

ಸುಬ್ರಹ್ಮಣ್ಯ ದೇವಸ್ಥಾನದ ಪರವಾಗಿ ಸುಳ್ಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದಕ್ಕೆ ಯಾವುದೇ ಶಾಸನ ಬದ್ಧ ಅಧಿಕಾರಿಯವರ ಪೂರ್ವಾನುಮತಿ ಇಲ್ಲ. ಇದು ಇನ್ನೂ ತನಿಖೆಗೆ ಬಾಕಿ ಇದೆ. ಈ ದಾವೆಯಲ್ಲಿ ಮಠದಲ್ಲಿ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ ಮುಂತಾದ ಪ್ರಾಯಶ್ವಿತ ಕರ್ಮಗಳನ್ನು ಮಾಡದಂತೆ ನಿರ್ಬಂಧಕಾಜ್ಞೆಯನ್ನು ಕೋರಿತ್ತು. ಸದ್ರಿ ಪ್ರಾಯಶ್ಚಿತ್ತಗಳನ್ನು ದೇವಸ್ಥಾನದಲ್ಲಿ ಮಾತ್ರ ಮಾಡಲು ಅವರಿಗಿರುವ ಹಕ್ಕು ಮತ್ತು ಮಠದಲ್ಲಿ ದೇವಸ್ಥಾನದ ಹೆಸರಲ್ಲಿ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಯಾವುದೇ ಪೂರಕ ದಾಖಲೆಗಳನ್ನು ನೀಡದೆ ಇರುವುದರಿಂದ ಮಠದಲ್ಲಿ ಮಾಡದಂತೆ ನಿರ್ಬಂಧಕಾಜ್ಞೆ ಆದೇಶ ಕೊಡಲು ನ್ಯಾಯಾಲಯ ನಿರಾಕರಿಸಿರುತ್ತದೆ ಎಂದು ತಿಳಿಸಿದರು.

ಮಠವು ಅಂತರ್ಜಾಲ ಮೂಲಕ ತನ್ನ ವೆಬ್‍ಸೈಟ್ www.snsmutt.com ನಲ್ಲಿ ಹಣ ಪಡೆದುಕೊಳ್ಳುತ್ತಿದೆ ಎಂದು ಸುಳ್ಳು ಅಪಾದನೆ ಮಾಡಲಾಗಿತ್ತು. ಸುಬ್ರಹ್ಮಣ್ಯ ದೇವಸ್ಥಾನದ ಹೆಸರಲ್ಲಿ ಕಾರ್ಯ ನಿರ್ವಾಹಣಾಧಿಕಾರಿ ಕೆಲವರ ಕುಮ್ಮಕ್ಕಿನಿಂದ ಮಠದ ವಿರುದ್ಧ ಅವಹೇಳನಕಾರಿ ಹಾಗೂ ಮಾನಹಾನಿಕರ ಹೇಳಿಕೆಗಳನ್ನು ಬಿತ್ತಿಪತ್ರ, ಬೋರ್ಡ್ ಇತ್ಯಾದಿಗಳಲ್ಲಿ ಹಾಕಲು ತೊಡಗಿದ್ದು, ಮಠದ ವಿರುದ್ಧದ ಅಪಾದನೆ, ಮಾನಹಾನಿಕರ ಹೇಳಿಕೆಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ನ್ಯಾಯಾಲಯಕ್ಕೆ ಮೊರೆ ಹೋದಾಗ ನ್ಯಾಯಾಲಯವು ನಿಬಂಧಕಾಜ್ಞೆ ನೀಡಿದ್ದು, ಕಾರ್ಯನಿರ್ವಹಣಾಧಿಕಾರಿಗೆ ನ್ಯಾಯಾಲಯಕ್ಕೆ ಹಾಜರಾಗಲು ನೋಟೀಸು ಜಾರಿ ಮಾಡಿದೆ. ನ್ಯಾಯಾಲಯದ ಆದೇಶ ಉಲ್ಲಂಘಿಸಿದಲ್ಲಿ ತಕ್ಷಣ ನ್ಯಾಯಾಲಯ ನಿಂದನೆಗೆ ಕ್ರಮ ಕೈಗೊಳ್ಳುವುದೆಂದು ನಿಶ್ಚಯಿಸಲಾಗಿದೆ. ಈ ಕುರಿತು ಹೇಳಿಕೆ ನೀಡಿದವರ ವಿರುದ್ಧ, ವಿತ್ತೀಯ ಪರಿಹಾರವನ್ನು ಕೋರಿ ದಾವೆಯನ್ನು ದಾಖಲಿಸಲು ನಿಶ್ಚಯಿಸಲಾಗಿದೆ ಎಂದರು.

Also Read  ಕಾರಿನ ಮೇಲೆ ನಿಂತಿದ್ದ ವೇಳೆ ಆಯತಪ್ಪಿ ಬಿದ್ದ ಸಚಿವ ಸೋಮಣ್ಣ..! ➤ ಕೈ ಹಿಡಿದ ಕಿಚ್ಚ ಸುದೀಪ್

ಸುಬ್ರಹ್ಮಣ್ಯ ದೇವಸ್ಥಾನದ ಹೆಸರನ್ನು ಬಳಸಿಕೊಂಡು ಶ್ರೀ ಮಠದ ವಿರುದ್ಧ ಮಾಡುವ ಯಾವುದೇ ಹೇಳಿಕೆ, ಪ್ರಕಟನೆಗೆ ಸಂದರ್ಶನ, ಪ್ರಚಾರಗಳಿಗೆ ಶ್ರೀ ಮಠದ ಭಕ್ತರು, ಪೋಷಕರು ವಿಚಲಿತರಾಗದೆ ಮಠಕ್ಕೆ ಬೆಂಬಲ ಮುಂದುವರೆಸುವಂತೆ ಅವರು ವಿನಂತಿಸಿದ್ದಾರೆ.

error: Content is protected !!
Scroll to Top