ಪೆರಿಯಶಾಂತಿ – ಇಚಿಲಂಪಾಡಿ ರಸ್ತೆ ಅಗಲೀಕರಣಕ್ಕೆ ತೊಡಕಾದ ಅರಣ್ಯ ► ಬದಲಿ ಜಮೀನು ನೀಡಿದ್ದಲ್ಲಿ ಅರಣ್ಯ ಇಲಾಖೆಯಿಂದ ಮರ ಕಡಿಯಲು ಗ್ರೀನ್ ಸಿಗ್ನಲ್..!!

(ನ್ಯೂಸ್ ಕಡಬ) newskadaba.com ಕಡಬ, ಡಿ.06. ಸುಬ್ರಹ್ಮಣ್ಯ- ಧರ್ಮಸ್ಥಳ ರಾಜ್ಯ ಹೆದ್ದಾರಿಯ ಪೆರಿಯಶಾಂತಿ – ಇಚ್ಲಂಪಾಡಿ ಮಧ್ಯದ ರಕ್ಷಿತಾರಣ್ಯ ಪ್ರದೇಶದಲ್ಲಿ ಹಾದುಹೋಗಿರುವ 02 ಕಿ.ಮೀ.ರಸ್ತೆಯ ಅಗಲೀಕರಣಕ್ಕೆ ಸಂಬಂಧಿಸಿದಂತೆ ರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯ ಮರಗಳ ತೆರವಿಗೆ ಬದಲಾಗಿ ಅಷ್ಟೇ ಪ್ರಮಾಣದ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕಂದಾಯ ಜಮೀನು ಗುರುತಿಸಿಕೊಡುವಂತೆ ವಿಶೇಷ ತಹಶೀಲ್ದಾರ್‌ಗೆ ಕೋರಲಾಗಿದೆ ಎಂದು ತಾಲೂಕು ಮಟ್ಟದ ಜನಸಂಪರ್ಕ ಸಭೆಯಲ್ಲಿ ಸಲ್ಲಿಸಿದ್ದ ಅರ್ಜಿಗೆ ಲೋಕೋಪಯೋಗಿ ಇಲಾಖೆಯಿಂದ ಉತ್ತರ ಬಂದಿದೆ ಎಂದು ಅರ್ಜಿದಾರ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ನಿವಾಸಿ ಉಮೇಶ್ ಶೆಟ್ಟಿ ಸಾಯಿರಾಮ್ ತಿಳಿಸಿದ್ದಾರೆ.

ದ.ಕ.ಜಿಲ್ಲೆಯ ಎರಡೂ ಪ್ರಸಿದ್ಧ ಯಾತ್ರಾ ಸ್ಥಳಗಳಾಗಿರುವ ಧರ್ಮಸ್ಥಳ ಹಾಗೂ ಸುಬ್ರಹ್ಮಣ್ಯ ಸಂಪರ್ಕದ ರಾಜ್ಯ ಹೆದ್ದಾರಿ ಪೆರಿಯಶಾಂತಿಯಿಂದ ಕಿ.ಮೀ.ರಕ್ಷಿತಾರಣ್ಯ ಪ್ರದೇಶದಲ್ಲಿ ಹಾದುಹೋಗುತ್ತದೆ. ಇಲ್ಲಿ ರಸ್ತೆ ಕಿರಿದಾಗಿರುವುದರಿಂದ ಪದೇ ಪದೇ ಅಪಘಾತಗಳು ನಡೆಯುತ್ತಿದ್ದು ಜೀವಹಾನಿಯೂ ಆಗಿದೆ. ಆದ್ದರಿಂದ ಈ 02 ಕಿ.ಮೀ.ರಸ್ತೆಯನ್ನು ಅಗಲೀಕರಣಗೊಳಿಸಿ ಡಾಮರೀಕರಣಕ್ಕೆ ಕ್ರಮ ಕೈಗೊಳ್ಳುವಂತೆ ತಾಲೂಕು ಮಟ್ಟದ ಜನಸಂಪರ್ಕ ಸಭೆಯಲ್ಲಿ ಅರ್ಜಿ ಸಲ್ಲಿಸಿ ಮನವಿ ಮಾಡಲಾಗಿತ್ತು.

Also Read  ತೆಂಗಿನ ಮರ ಬಿದ್ದು ಎರಡು ಮನೆಗಳಿಗೆ ಹಾನಿ

ಇದಕ್ಕೆ ಉತ್ತರ ನೀಡಿರುವ ಪುತ್ತೂರು ಉಪವಿಭಾಗದ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ರವರು, ಸುಬ್ರಹ್ಮಣ್ಯ – ಉಡುಪಿ ರಾಜ್ಯ ಹೆದ್ದಾರಿಯ ಪೆರಿಯಶಾಂತಿ – ಇಚ್ಲಂಪಾಡಿ ಮಧ್ಯೆಯ ರಸ್ತೆಯು ರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರುವುದರಿಂದ ಸದ್ರಿ ರಸ್ತೆಯನ್ನು ಅಗಲಗೊಳಿಸಿ ಅಭಿವೃದ್ಧಿಗೊಳಿಸಲು 1.77 ಹೆಕ್ಟೇರ್ ಭೂಮಿಯ ಅವಶ್ಯಕತೆ ಇದ್ದು ಅರಣ್ಯ ಇಲಾಖಾ ವತಿಯಿಂದ ಸದ್ರಿ ಮರಗಳನ್ನು ತೆರವುಗೊಳಿಸಲು ಜಿಪಿಎಸ್ ಸರ್ವೆ ನಡೆಸಿ ಆನ್‌ಲೈನ್ ಮೂಲಕ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಲಾಗಿದೆ.

ಅರಣ್ಯ ಇಲಾಖೆಯ ನಿಯಮಾವಳಿಯಂತೆ ರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯ ಮರಗಳ ತೆರವಿಗೆ ಬದಲಾಗಿ ಅಷ್ಟೇ ಪ್ರಮಾಣದ ಕಂದಾಯ ಜಮೀನನ್ನು ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯಲ್ಲಿನ ಯಾವುದಾದರೂ ರಕ್ಷಿತಾರಣ್ಯ ಪ್ರದೇಕ್ಕೆ ಹೊಂದಿಕೊಂಡಿರುವ 1.77 ಹೆಕ್ಟೇರ್ ಕಂದಾಯ ಇಲಾಖೆ ಜಮೀನನ್ನು ಗುರುತಿಸಿ ನಕ್ಷೆ ತಯಾರಿಸಿ ಒದಗಿಸಿಕೊಡುವಂತೆ ವಿಶೇಷ ತಹಶೀಲ್ದಾರ್‌ರವರಿಗೆ ಕೋರಲಾಗಿದೆ. ನಕ್ಷೆ ದೊರಕಿದ ಕೂಡಲೇ ಅರಣ್ಯ ಇಲಾಖೆಗೆ ಆನ್‌ಲೈನ್‌ನಲ್ಲಿ ಮತ್ತೊಮ್ಮೆ ಅರ್ಜಿ ಸಲ್ಲಿಸಿ ಎರಡು ಕಿ.ಮೀ.ಅಂತರದಲ್ಲಿ ಇರಬಹುದಾದ ಮರಗಳನ್ನು ತೆರವುಗೊಳಿಸಲು ಅನುಮತಿ ಪಡೆಯಬೇಕಾಗಿದೆ. ನಂತರ ಅಗತ್ಯ ಅನುದಾನ ಒದಗಿಸಿಕೊಂಡು ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲು ಕ್ರಮ ವಹಿಸಬಹುದಾಗಿದೆ ಎಂದು ಇಲಾಖೆಯಿಂದ ಉತ್ತರ ಬಂದಿದೆ ಎಂದು ಉಮೇಶ್ ಶೆಟ್ಟಿ ತಿಳಿಸಿದ್ದಾರೆ.

Also Read  ದ.ಕ. ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಪಂಡಿತ್ ದೀನ್ ದಯಾಳ ಉಪಾಧ್ಯಾಯ ಜನ್ಮದಿನಾಚರಣೆ

error: Content is protected !!
Scroll to Top