ಬಿಳಿನೆಲೆ ಸಿಪಿಸಿಆರ್ಐ ಯನ್ನು ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ ► ಜನತೆ ಆತಂಕ ಪಡುವ ಅಗತ್ಯವಿಲ್ಲ – ಸಿಪಿಸಿಆರ್ಐ ಉಳಿಸಿ ಹೋರಾಟ ಸಮಿತಿ ಭರವಸೆ

(ನ್ಯೂಸ್ ಕಡಬ) newskadaba.com ಕಡಬ, ಡಿ.05. ಇಲ್ಲಿನ ಬಿಳಿನೆಲೆ ಗ್ರಾಮದ ಕಿದು ಸಿಪಿಸಿಆರ್‌ಐ ಕೇಂದ್ರವನ್ನು ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ, ಅಧಿಕಾರಿಗಳ ಸ್ವ ಹಿತಾಸಕ್ತಿಯಿಂದ ಇಷ್ಟೆಲ್ಲಾ ಗೊಂದಲಗಳು ಉಂಟಾಗಿದ್ದು, ನಾವು ವ್ಯವಸ್ಥಿತ ಹೋರಾಟ ಮಾಡುವ ಮೂಲಕ ಗೊಂದಲಗಳಿಗೆ ತೆರೆ ಎಳೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಪ್ರಯತ್ನಕ್ಕೆ ಜನಪ್ರತಿನಿಧಿಗಳು ಸಂಪೂರ್ಣ ಸ್ಪಂದನ ನೀಡುತ್ತಿದ್ದು, ಜನತೆ ಆತಂಕಪಡುವ ಅವಶ್ಯಕತೆಯಿಲ್ಲ ಎಂದು ಸಿಪಿಸಿಆರ್‌ಐ ಉಳಿಸಿ ಹೋರಾಟ ಸಮಿತಿಯ ಸಂಚಾಲಕ ಬಾಲಕೃಷ್ಣ ಗೌಡ ವಾಲ್ತಾಜೆ ಹೇಳಿದರು.

ಬುಧವಾರದಂದು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಕೃಷಿ ಅಭಿವೃದ್ಧಿ ಹಾಗೂ ಸಂಶೋಧನ ಸಂಸ್ಥೆಯಾದ ಐಸಿಎಆರ್ ನಿರ್ದೆಶನದ ಮೇರೆಗೆ ಅಧಿಕಾರಿಗಳ ಸಮಿತಿಯೊಂದು ಸಿಪಿಸಿಆರ್‌ಐ ಸಂಸ್ಥೆಯನ್ನು ಮುಚ್ಚಬೇಕೆಂದು ವರದಿ ತಯಾರಿಸಿದೆ. ಈ ವರದಿ ಕೇಂದ್ರ ಸರಕಾರಕ್ಕೆ ಇನ್ನೂ ಸಲ್ಲಿಕೆಯಾಗಿಲ್ಲ. ವರದಿ ಸಲ್ಲಿಕೆಯಾದರೂ ವರದಿಯನ್ನು ಅನುಷ್ಟಾನ ಮಾಡುವುದಿಲ್ಲ ಎಂದು ಕೇಂದ್ರ ಕೃಷಿ ಸಚಿವರು ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಬಿಳಿನೆಲೆಯಲ್ಲಿ ಅರಣ್ಯ ಇಲಾಖೆಯ ಕರಾರು ಜಾಗದಲ್ಲಿರುವ ಸಿಪಿಸಿಆರ್‌ಐ ಯನ್ನು ಲೀಸ್ ನವೀಕರಣವಾಗದ ಹಿನ್ನೆಲೆಯಲ್ಲಿ ನೆರೆಯ ಆಂಧ್ರ ಪ್ರದೇಶಕ್ಕೆ ಸ್ಥಳಾಂತರವಾಗುತ್ತದೆ ಎನ್ನುವ ಊಹಾಪೋಹಗಳು ಎದ್ದಾಗ ಹೋರಾಟ ಸಮಿತಿ ಶಾಸಕರಾದ ಎಸ್. ಅಂಗಾರ, ಸಂಜೀವ ಮಠಂದೂರು, ಸಂಸದ ನಳೀನ್ ಕುಮಾರ್ ಕಟೀಲ್ ಅವರುಗಳನ್ನು ಸಂಪರ್ಕಿಸಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ಮುಖಾಂತರ ಸ್ಥಳಾಂತರವಾಗದಂತೆ ತಡೆಯಬೇಕೆಂದು ಮನವಿ ಸಲ್ಲಿಸಲಾಗಿತ್ತು. ಅದರಂತೆ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವ ಡಾ|ಹರ್ಷವರ್ಧನ್ ಅವರನ್ನು ಭೇಟಿ ಮಾಡಿ ಲೀಸ್ ಅವಧಿಯನ್ನು ಮುಂದುವರಿಸುವಂತೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಅವಧಿ ಮುಂದುವರಿಕೆಗೆ ಆದೇಶಿಸಲಾಗಿದ್ದು ಪ್ರಕ್ರಿಯೆ ಮುಂದುವರಿಯುತ್ತಿದೆ, ಬಳಿಕ ನಡೆದ ಬೆಳವಣಿಗೆಯಲ್ಲಿ ಕೇಂದ್ರ ಸಚಿವ ಡಿ.ವಿಯವರ ಸೂಚನೆಯಂತೆ ಕಿದುವಿನಲ್ಲಿ ಬೃಹತ್ ಕೃಷಿ ಮೇಳವನ್ನು ಆಯೋಜಿಸಿ ಕೇಂದ್ರ ಉಳಿಸುವ ನಿಟ್ಟಿನಲ್ಲಿ ಜಾಗೃತಿಯನ್ನು ಮೂಡಿಸಲಾಗಿದೆ. ಈ ಸಂದರ್ಭದಲ್ಲಿ ಕೇಂದ್ರವನ್ನು ಇಲ್ಲೇ ಉಳಿಸಿಕೊಳ್ಳುವ ಸಂಕಲ್ಪ ಕೂಡಾ ಮಾಡಲಾಗಿದೆ ಎಂದರು.

Also Read  ಉಳ್ಳಾಲ: ರಿಕ್ಷಾ ಹಾಗೂ ಕಾರು ನಡುವೆ ಅಪಘಾತ- ರಿಕ್ಷಾ ಚಾಲಕ ಮೃತ್ಯು ➤ ವಿಟ್ಲ ಘಟನೆ ಮಾಸುವ ಮುನ್ನವೇ ಮತ್ತೋರ್ವ ಅಟೋ ಚಾಲಕನ ದಾರುಣ ಅಂತ್ಯ

ಜಿಲ್ಲೆಯ ಎಲ್ಲಾ ಶಾಸಕರು ಇದಕ್ಕೆ ಬೆಂಬಲ ಸೂಚಿಸುವುದಾಗಿ ಹೇಳಿದ್ದಾರೆ. ಮಾತ್ರವಲ್ಲದೆ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ,ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಸಮಿತಿ ಮನವಿ ಸಲ್ಲಿಸಿದೆ, ಹೆಗ್ಗಡೆಯವರು ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ನಮ್ಮ ಹೋರಾಟಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ಸಿಪಿಸಿಆರ್‌ಐ ಮುಚ್ಚುತ್ತದೆ ಎನ್ನುವ ಆತಂಕ ದೂರವಾಗಿದೆ. ಆದರೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಸಂಸ್ಥೆಯ ಉಳಿವಿಗಾಗಿ ನಾವು ಪಕ್ಷಾತೀತವಾಗಿ ಉಗ್ರ ಹೋರಾಟ ಮಾಡಲು ಸಿದ್ದರಿದ್ದೇವೆ ಎಂದು ಬಾಲಕೃಷ್ಣ ಗೌಡ ಹೇಳಿದರು.

Also Read  ಕಡಬ: ಮನೆಯಲ್ಲಿ ಯಾರೂ ಇಲ್ಲದ ವೇಳೆ ವ್ಯಕ್ತಿ ನಾಪತ್ತೆ

ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ವಿಜಯಕುಮಾರ್ ಎರ್ಕ, ಕಾರ್ಯದರ್ಶಿ ಮೋಹನ್ ಪಳ್ಳಿಗದ್ದೆ, ಸದಸ್ಯರಾದ ರಮೇಶ್ ಗೌಡ ವಾಲ್ತಾಜೆ, ಕುಮಾರ್ ಕೆ ಉಪಸ್ಥಿತರಿದ್ದರು.

error: Content is protected !!
Scroll to Top