(ನ್ಯೂಸ್ ಕಡಬ) newskadaba.com ಸುಳ್ಯ, ಜು.27. ಔಷಧ ಮಾರುವ ಸೋಗಿನಲ್ಲಿ ಬಂದ ವ್ಯಕ್ತಿಗಳಿಬ್ಬರು ದೇವರ ಮೀನುಗಳ ದೇವಸ್ಥಾನವೆಂದೇ ಖ್ಯಾತಿಯಿರುವ ಸುಳ್ಯ ತಾಲೂಕಿನ ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ಮೀನುಗಳನ್ನು ಹಿಡಿದು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಆಂದ್ರಪ್ರದೇಶ ಮೂಲದ ಇಬ್ಬರು ದೇವಸ್ಥಾನದ ಒಳಗೆ ಬಂದು ದೇವಸ್ಥಾನದ ವಿಶೇಷತೆಯನ್ನು ಕೇಳುವ ಮೂಲಕ ದೇವಸ್ಥಾನದಲ್ಲೇ ಕೆಲವು ಸಮಯ ಕುಳುತಿದ್ದರು. ದೇವಸ್ಥಾನದಲ್ಲಿ ಪೂಜೆ ನಡೆಯುವ ಸಂದರ್ಭದಲ್ಲಿ ಅಂಗಿ ತೆಗೆದು ಒಳಗೆ ಬರುವಂತೆ ಈ ಇಬ್ಬರನ್ನು ದೇವಸ್ಥಾನದ ಸಿಬ್ಬಂದಿಗಳು ಕರೆದಾಗ ಅಂಗಿ ತೆಗೆಯಲು ನಿರಾಕರಿಸಿ ಹೊರಗೆ ನಡೆದಿದ್ದರು. ದೇವಸ್ಥಾನದ ಸಿಬ್ಬಂದಿ ದೇವಸ್ಥಾನದ ಒಳಗೆ ಮಧ್ಯಾಹ್ನದ ಪೂಜೆಯಲ್ಲಿ ಭಾಗಿಯಾಗಿದ್ದ ಸಂದರ್ಭವನ್ನು ಬಳಸಿಕೊಂಡ ಇವರು ದೇವಸ್ಥಾನದ ಪಕ್ಕದಲ್ಲಿ ಹರಿಯುವ ತೊರೆಯಲ್ಲಿದ್ದ ದೇವರ ಮೀನುಗಳನ್ನು ಹಿಡಿದು ಸಾಗಿಸಲು ಯತ್ನಿಸಿದ್ದಾರೆ. ಇವರ ವರ್ತನೆಯನ್ನು ಕಂಡು ಸಂಶಯಿಸಿದ ಸಾರ್ವಜನಿಕರು ಇವರ ಬ್ಯಾಗನ್ನು ಪರಿಶೀಲಿಸಿದಾಗ ದೇವಸ್ಥಾನದಿಂದ ಹಿಡಿದ ಮೀನುಗಳು ಪತ್ತೆಯಾಗಿದೆ.
ಆಯುರ್ವೇದ ಮದ್ದುಗಳನ್ನು ಮಾರುವಂತೆ ಕಾಣುತ್ತಿದ್ದ ಈ ವ್ಯಕ್ತಿಗಳು ಕೆಲವು ಅಧಿಕಾರಿಗಳ ಜೊತೆ ನಿಂತು ತೆಗೆಸಿಕೊಂಡ ಫೋಟೋಗಳೂ ಕಳ್ಳರ ಬ್ಯಾಗುಗಳಲ್ಲಿ ಪತ್ತೆಯಾಗಿದೆ. ಇಬ್ಬರನ್ನೂ ಹಿಡಿದು ಸುಳ್ಯ ಪೋಲೀಸರಿಗೆ ಒಪ್ಪಿಸಿದ ಸಾರ್ವಜನಿಕರು ಬಳಿಕ ಇಬ್ಬರಿಂದಲೂ ದೇವಸ್ಥಾನಕ್ಕೆ ತಪ್ಪೊಪ್ಪಿಗೆ ಹಾಕಿಸಿ ಕಳುಹಿಸಿಕೊಟ್ಟರು ಎಂದು ತಿಳಿದುಬಂದಿದೆ.