ಕಡಬ: ಕಂದಾಯ, ಪೊಲೀಸ್ ಇಲಾಖೆಗಳಲ್ಲಿ ದಲಿತ ವಿರೋಧಿ ನೀತಿಯ ಆರೋಪ ► ತಾಲೂಕು ಉದ್ಘಾಟನೆಗೆ ಆಗಮಿಸುವ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸುವುದಕ್ಕೆ ಕೃಷ್ಣಪ್ಪ ಸ್ಥಾಪಿತ ದಸಂಸ ಬೆಂಬಲವಿಲ್ಲ ► ದಲಿತ ಮುಖಂಡ ಆನಂದ ಮಿತ್ತಬೈಲ್ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಕಡಬ, ನ.24. ಕಂದಾಯ ಹಾಗೂ ಪೊಲೀಸ್ ಇಲಾಖೆಗಳಲ್ಲಿ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಕಡಬ ತಾಲೂಕು ಉದ್ಘಾಟನೆಗೆ ಆಗಮಿಸುವ ಕಂದಾಯ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಎಂದು ದಲಿತ ಸಂಘಟನೆಗಳ ಮಹಾ ಒಕ್ಕೂಟದ ಅಧ್ಯಕ್ಷ ವಸಂತ ಕುಬುಲಾಡಿ ನೀಡಿದ್ದ ಹೇಳಿಕೆಗೆ ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ ದಸಂಸ ನ ಸಹಮತ ಇಲ್ಲ ಎಂದು ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ ದಸಂ‌ಸ ಮುಖಂಡ ಆನಂದ ಮಿತ್ತಬೈಲು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಕಡಬ ತಾಲೂಕು ಆಗಬೇಕಾದರೆ ಇಲ್ಲಿನ ಅನೇಕ ಮಹನೀಯರುಗಳು ಜಾತಿ, ಧರ್ಮ, ರಾಜಕೀಯ ಮೀರಿ ನಡೆಸಿದ ಹೋರಾಟದ ಫಲವಾಗಿರುತ್ತದೆ ಹಾಗೂ ಕಡಬ ತಾಲೂಕು ಅಧಿಕೃತವಾಗಿ ಘೋಷಣೆಯಾದ ಮೇಲೆ ಇದರಿಂದ ಬಹಳಷ್ಟು ಅನುಕೂಲ ಪಡೆಯುವವರು ತೀರಾ ಬಡಕುಟುಂಬಗಳ ಗ್ರಾಮೀಣ ಭಾಗದ ಜನರು ಆಗಿರುತ್ತಾರೆ. ಈ ಕಾರಣದಿಂದಾಗಿ ದಲಿತ ಒಕ್ಕೂಟದ ಸಹ ಸಂಘಟನೆಯಾದ ನಮ್ಮ ಸಂಘಟನೆಯು ಕರಿಪತಾಕೆ ಪ್ರದರ್ಶನಕ್ಕೆ ಸಮ್ಮತಿಸುವುದಿಲ್ಲ. ಆದರೆ ದಲಿತ ಮಹಾ ಒಕ್ಕೂಟದ ಆಶ್ರಯದಲ್ಲಿ ಕಡಬ ಕಂದಾಯ ಮತ್ತು ಕಡಬ ಪೊಲೀಸ್ ಅಧಿಕಾರಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ನೀಡಲಾಗಿದೆ. ಈ ಬಗ್ಗೆ ಕಾನೂನು ಕ್ರಮಕ್ಕೆ ಜಿಲ್ಲಾಧಿಕಾರಿಗಳು ಮುಂದಾಗದೆ ನಿರ್ಲಕ್ಷ್ಯ ತಾಳಿದರೆ ಮುಂದಿನ ದಿನಗಳಲ್ಲಿ‌ ಹೋರಾಟವನ್ನು ತೀವ್ರಗೊಳಿಸಲಾಗುವುದು. ಈ ಬಗ್ಗೆ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತವು ಭಾನುವಾರದ ಒಳಗಾಗಿ ದಲಿತ ಮುಖಂಡರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

Also Read  ಸಿಐಡಿ DYSP ಲಕ್ಷ್ಮಿ ನೇಣಿಗೆ ಶರಣು.!

error: Content is protected !!
Scroll to Top