ಕಡಬ ನೂತನ ತಾಲೂಕು ಉದ್ಘಾಟನಾ ಐತಿಹಾಸಿಕ ಕ್ಷಣದಲ್ಲಿ ಭಾಗಿಗಳಾಗೋಣ ► ನ.25 ರಂದು ಉದ್ಘಾಟನೆ ನಡೆಯದೇ ಹೋದರೆ ಊರ ಜನರಿಂದಲೇ ಉದ್ಘಾಟನೆ..!! ► ತಾಲೂಕು ಹೋರಾಟ ಸಮಿತಿಯ ಸಂಚಾಲಕ ಕೃಷ್ಣ ಶೆಟ್ಟಿ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಕಡಬ, ನ.22. ಸುಮಾರು ಆರು ದಶಕಗಳ ಕಾಲ ಊರಿನ ಪ್ರಮುಖರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ರಾಜಕೀಯ ರಹಿತವಾಗಿ ಪಕ್ಷ ಭೇದ ಮರೆತು ಹೋರಾಡಿದ ಫಲವಾಗಿ ಕಡಬವು ನೂತನ ತಾಲೂಕಾಗಿ ಘೋಷಣೆಯಾಗಿದ್ದು, ನ.25 ರಂದು ನಡೆಯಲಿರುವ ನೂತನ ತಾಲೂಕು ಉದ್ಘಾಟನೆಯ ಐತಿಹಾಸಿಕ ಕ್ಷಣದಲ್ಲಿ ನಾವೆಲ್ಲರೂ ಭಾಗಿಗಳಾಗೋಣ ಎಂದು ಕಡಬ ತಾಲೂಕು ಹೋರಾಟ ಸಮಿತಿಯ ಸಂಚಾಲಕ, ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ ಕಡಬ ಹೇಳಿದರು.

ಸುಮಾರು ಆರು ವರ್ಷಗಳ ಹಿಂದೆ ಬಿಜೆಪಿಯ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಾಲೂಕು ಪುನರ್ ರಚನಾ ಸಮಿತಿಯ ವರದಿಯಲ್ಲಿ ಕಡಬ ತಾಲೂಕನ್ನು ಕೈಬಿಟ್ಟಿರುವ ವಿಚಾರ ತಿಳಿದ ಕಡಬದ ಬಿಜೆಪಿಯ ಪ್ರಮುಖರು ಹೋರಾಟ ಸಮಿತಿಯೊಂದಿಗೆ ಕೈಜೋಡಿಸಿ ಸರಕಾರಕ್ಕೆ ಒತ್ತಡ ಹೇರಿದ ಪರಿಣಾಮವಾಗಿ ನೂತನ ತಾಲೂಕುಗಳ ಪಟ್ಟಿಯಲ್ಲಿ ಕಡಬದ ಹೆಸರನ್ನು ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಆದರೆ ಆ ಬಳಿಕ ರಾಜ್ಯದಲ್ಲಿ  ಅಧಿಕಾರಕ್ಕೆ ಬಂದ ಸರಕಾರಗಳ ವಿಳಂಬ ಧೋರಣೆಯಿಂದಾಗಿ ತಾಲೂಕು ಅನುಷ್ಠಾನವಾಗದೇ ನೆನೆಗುದಿಗೆ ಬಿದ್ದಿತ್ತು. ಸಾಕಷ್ಟು ಏಳು ಬೀಳುಗಳ ನಡುವೆ ಕೊನೆಗೂ ಕಡಬವು ನೂತನ ತಾಲೂಕು ಉದ್ಘಾಟನೆಯ ಹಂತಕ್ಕೆ ತಲುಪಿರುವುದು ಸಂತೋಷದಾಯಕವಾಗಿದೆ. ಈ ಸಮಾರಂಭದಲ್ಲಿ ಕಡಬ ತಾಲೂಕಿನ ವ್ಯಾಪ್ತಿಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಕೈಜೋಡಿಸಬೇಕಿದೆ ಎಂದು ಕೃಷ್ಣ ಶೆಟ್ಟಿ ಹೇಳಿದರು.

Also Read  ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಸಾಧ್ಯವಿಲ್ಲ ➤ ಕೆ.ಎಸ್ ಈಶ್ವರಪ್ಪ

ತಾಲೂಕು ಉದ್ಘಾಟನೆಗೆ ನಿಗದಿಯಾಗಿದ್ದ ಕಾರ್ಯಕ್ರಮಗಳು ಹಲವು ಬಾರಿ ರದ್ದುಗೊಳ್ಳುವ ಮೂಲಕ ಕಡಬದ ಜನತೆ ವಿಚಲಿತರಾಗಿದ್ದರು. ಈ ಬಾರಿಯಾದರೂ ನೂತನ ತಾಲೂಕಿನ ಉದ್ಘಾಟನೆ ನಿರ್ವಿಘ್ನವಾಗಿ ನಡೆಯಬೇಕೆಂಬುದು ನಮ್ಮ ಬಯಕೆ. ಆದರೆ ಉದ್ಘಾಟನಾ ಸಮಾರಂಭದ ಸಿದ್ಧತೆಯಲ್ಲಿ ಕಂದಾಯ ಅಧಿಕಾರಿಗಳ ನಡೆ ನಮಗೆ ಬೇಸರ ತರಿಸಿದೆ. ಕಡಬದ ಅಂಬೇಡ್ಕರ್ ಭವನದಲ್ಲಿ ಪುತ್ತೂರು ತಾಲೂಕು ಸಹಾಯಕ ಕಮೀಷನರ್ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಉದ್ಘಾಟನೆಯ ಪೂರ್ವ ಸಿದ್ಧತಾ ಸಭೆಯಲ್ಲಿ ಕೇವಲ ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳು ಹಾಗೂ ಪ್ರಮುಖರನ್ನು ಕೂರಿಸಿಕೊಂಡು ಬಿಜೆಪಿ ಪಕ್ಷದ ಜನಪ್ರತಿನಿಧಿಗಳನ್ನು ನಿರ್ಲಕ್ಷಿಸಿರುವ ಬಗ್ಗೆ ನಮ್ಮ ತೀವ್ರ ಆಕ್ಷೇಪವಿದೆ. ಆದರೆ ಉದ್ಘಾಟನಾ ಸಮಾರಂಭಕ್ಕೆ ಅಡ್ಡಿಯಾಗುವುದು ತರವಲ್ಲ ಎನ್ನುವ ಕಾರಣಕ್ಕಾಗಿ ಈಗ ಸುಮ್ಮನಿದ್ದೇವೆ.

Also Read  ಮಾಣಿ: ಕಾರು ಹಾಗೂ ರಿಕ್ಷಾ ನಡುವೆ ಢಿಕ್ಕಿ ➤ ಮಹಿಳೆ ಹಾಗೂ ಮಗು ಗಂಭೀರ

ಸುದೀರ್ಘ ಕಾಲದ ತಾಲೂಕು ಹೋರಾಟದ ಹಾದಿಯಲ್ಲಿ ಇಲ್ಲದ ರಾಜಕೀಯವನ್ನು ಉದ್ಘಾಟನೆಯ ಹಂತದಲ್ಲಿ ಕಂದಾಯ ಅಧಿಕಾರಿಗಳು ಸೇರ್ಪಡೆ ಮಾಡಿದ್ದು, ಆಡಳಿತಾರೂಢ ಪಕ್ಷದ ಕೈಗೊಂಬೆಗಳಂತೆ ವರ್ತಿಸುವ ಕಂದಾಯ ಅಧಿಕಾರಿಗಳ ಈ ತಾರತಮ್ಯ ಧೋರಣೆಯನ್ನು ತಾಲೂಕು ಉದ್ಘಾಟನಾ ಕಾರ್ಯಕ್ರಮ ಮುಗಿದ ಬಳಿಕ ಸರಿಯಾದ ಸಂದರ್ಭದಲ್ಲಿ ನಾವು ಪ್ರಶ್ನಿಸಲಿದ್ದೇವೆ. ಉದ್ಘಾಟನಾ ಸಮಾರಂಭದಲ್ಲಿ ರಾಜಕೀಯ ತರುವ ಪ್ರಯತ್ನ ಮಾಡಿದರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ ಕೃಷ್ಣ ಶೆಟ್ಟಿ ಒಂದು ವೇಳೆ ನ. 25 ರಂದು ತಾಲೂಕು ಉದ್ಘಾಟನೆ ನಡೆಯದೇ ಹೋದರೆ ಯಾರನ್ನೂ ಕಾಯದೇ ಊರ ಜನರೇ ತಾಲೂಕನ್ನು ಉದ್ಘಾಟಿಸಲಿದ್ದಾರೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ಸತೀಶ್ ನಾಯಕ್, ಪ್ರಕಾಶ್ ಎನ್.ಕೆ., ಫಯಾಝ್ ಕೆನರಾ, ಅಶೋಕ್‍ಕುಮಾರ್ ಪಿ. ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top