ಕಡಬ: ಕಂದಾಯ, ಪೊಲೀಸ್ ಇಲಾಖೆಗಳಲ್ಲಿ ದಲಿತ ವಿರೋಧಿ ನೀತಿಯ ಆರೋಪ ► ತಾಲೂಕು ಉದ್ಘಾಟನೆಗೆ ಆಗಮಿಸುವ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸುವ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಕಡಬ, ನ.22. ಕಡಬ ತಹಸೀಲ್ದಾರ್ ಹಾಗೂ ಕಡಬ ಆರಕ್ಷಕ ಉಪ ನಿರೀಕ್ಷಕರು ದಲಿತ ವಿರೋಧಿ ಧೋರಣೆ ಅನುಸರಿಸುತ್ತಿದ್ದು, ಈ ಬಗ್ಗೆ ಇತ್ತೀಚೆಗೆ ಕಡಬದಲ್ಲಿ ಪ್ರತಿಭಟನೆ ನಡೆಸಿದ್ದರೂ ಆರೋಪಿತರ ವಿರುದ್ದ ಯಾವುದೇ ಕ್ರಮ ಕೈಗೊಳ್ಳದೆ ಇರುವುದನ್ನು ಖಂಡಿಸಿ ನ.25ರಂದು ಕಡಬ ತಾಲೂಕು ಉದ್ಘಾಟನೆಗೆ ಆಗಮಿಸುವ ಕಂದಾಯ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಎಂದು ದಲಿತ ಸಂಘಟನೆಗಳ ಮಹಾ ಒಕ್ಕೂಟದ ಅಧ್ಯಕ್ಷ ವಸಂತ ಕುಬಲಾಡಿ ಹೇಳಿದರು.

ಅವರು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಂದಾಯ ಹಾಗೂ ಪೋಲೀಸ್ ಇಲಾಖೆಯಿಂದ ದಲಿತರಿಗೆ ಅನ್ಯಾವಾಗುತ್ತಿದ್ದು, ಇದರ ವಿರುದ್ಧ ಎಲ್ಲಾ ದಲಿತ ಸಂಘಟನೆಗಳು ಒಟ್ಟಾಗಿ ದಲತ ಸಂಘಗಳ ಮಹಾ ಒಕ್ಕೂಟ ರಚಿಸಿಕೊಂಡು ಪ್ರತಿಭಟನೆ ನಡೆಸಿದರೂ ತಪ್ಪಿತಸ್ಥರ ವಿರುದ್ದ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನಮ್ಮ ಬೇಡಿಕೆಗಳಿಗೆ ಯಾವುದೇ ಸ್ಪಂದನೆ ನೀಡಿಲ್ಲ ಎಂದು ಆರೋಪಿಸಿದರು. ಕಡಬಕ್ಕೆ ಕೇಂದ್ರ ಅಥವಾ ರಾಜ್ಯದ ಯಾವುದೇ ಸಚಿವರು ಆಗಮಿಸಿದರೆ ಅವರ ವಿರುದ್ಧ ಕರಿಪತಾಕೆ ಹಾರಿಸಲು ನಾವು ನಿರ್ಧರಿಸಿದ್ದು, ಸದ್ಯಕ್ಕೆ ತಾಲೂಕು ಉದ್ಘಾಟನೆಗೆ ಆಗಮಿಸುವ ಕಂದಾಯ ಸಚಿವರು ಹಾಗೂ ಜನಪ್ರತಿನಿಧಿಗಳ ಎದುರು ಕಪ್ಪು ಬಾವುಟ ಹಾರಿಸಲಾಗುವುದು. ಮುಂದೆ ದಲಿತ ವಿರೋಧಿ ನೀತಿಯ ವಿರುದ್ಧ ಮಹಾ ಒಕ್ಕೂಟದ ವತಿಯಿಂದ ಪುತ್ತೂರು ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ. ಜಿಲ್ಲಾ ಹಾಗೂ ರಾಜ್ಯ ನಾಯಕರೊಂದಿಗೆ ಚರ್ಚಿಸಿ ಜಿಲ್ಲಾಧಿಕಾರಿ ಕಛೇರಿ, ವಿಧಾನ ಸೌಧದ ಎದುರು ಪ್ರತಿಭಟನೆ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ಅಲ್ಲದೆ ನ್ಯಾಯಾಂಗದ ಮೊರೆ ಹೋಗಲು ಸಿದ್ದರಿದ್ದೇವೆ. ದಲಿತ ಸಂಘಟನೆಗಳು ಒಮ್ಮೆ ಪ್ರತಿಭಟನೆ ಮಾಡಿ ಮತ್ತೆ ಸುಮ್ಮನಾಗುತ್ತಾರೆ ಎಂದು ಅಧಿಕಾರಿಗಳು ನಂಬಿದ್ದು, ಅವರ ನಂಬಿಕೆಯನ್ನು ಸುಳ್ಳು ಮಾಡುತ್ತೇವೆ ಎಂದರು.

Also Read  ಮಾದಕ ವಸ್ತು ನೀಡಿ ಸಾಮೂಹಿಕ ಅತ್ಯಾಚಾರ   ➤ ಮೂವರು ಆರೋಪಿಗಳ ಬಂಧನ 

ಇನ್ನು ಮುಂದಿನ ದಿನಗಳಲ್ಲಿ ಕೆಲವೊಂದು ರಾಜಕೀಯ ಜನಪ್ರತಿನಿಧಿಗಳ ಅಕ್ರಮ ಅಸ್ತಿ ಗಳಿಕೆ, ಸರಕಾರಿ ಜಮೀನು ಕಬಳಿಸಿರುವ ಬಗ್ಗೆ ಸೂಕ್ತ ದಾಖಲೆಯೊಂದಿಗೆ ತನಿಖಾ ಸಂಸ್ಥೆಗಳಿಗೆ ದೂರು ನೀಡಲಾಗುವುದು. ನಮಗೆ ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಟೆಂಪಲ್‍ರನ್ ಮಾಡಿ ಗಣಹೋಮ ಮಾಡುತ್ತಾ ತಿರುಗುವುದನ್ನು ಸ್ವಲ್ಪ ನಿಲ್ಲಿಸಿ ದಲಿತರ ಸಮಸ್ಯೆಗಳ ಬಗ್ಗೆ ಸ್ಪಂದನ ನೀಡಬೇಕು, ಸುಳ್ಯ ಮೀಸಲು ಕ್ಷೇತ್ರವಾದರೂ ದಲಿತರಿಗೆ ಶೌಚಾಲಯ ಮತ್ತು ಕುಡಿಯುವ ನೀರು, ವಿದ್ಯುತ್, ಮನೆಗಳು ಇಲ್ಲ, ಇಷ್ಟೆಲ್ಲ ಸೌಲಭ್ಯ ಸಿಗಬೇಕಾದರೆ ನಾವು ಪ್ರತಿಭಟನೆ ಮಾಡಬೇಕಾದ ಅನಿವಾರ್ಯತೆ ಬಂದಿರುವುದು ದುರದೃಷ್ಟಕರ ಎಂದು ವಸಂತ್ ಹೇಳಿದರು.

ಕಡಬ ತಹಶಿಲ್ದಾರ್ ಕಛೇರಿಯಲ್ಲಿ ಬ್ರೋಕರ್‍ಗಳ ಹಾವಳಿ ಹೆಚ್ಚಾಗಿದ್ದು, ಸಾಮಾನ್ಯ ಜನರಿಗೆ ಅಲ್ಲಿಗೆ ಹೋಗುವಂತಿಲ್ಲ, ಎಲ್ಲಾ ಕೆಲಸಗಳಿಗೂ ಬ್ರೋಕರ್‍ಗಳ ಮೂಲಕ ಲಂಚ ನೀಡಿ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಬೇಕಾಗಿದೆ. ಈಗಾಗಲೇ ಸರಕಾರದಿಂದ ಮರಳು ತೆಗೆಯಲು ಅನುಮತಿ ಇಲ್ಲದಿದ್ದರೂ ಕಡಬ ತಹಸೀಲ್ದಾರ್ ಹಾಗೂ ಕಡಬ ಆರಕ್ಷಕ ಉಪನಿರೀಕ್ಷಕರ ಅಭಯದಲ್ಲಿಯೇ ಮರಳು ಮಾಫಿಯ ನಡೆಯುತ್ತಿದೆ. ಠಾಣಾ ವ್ಯಾಪ್ತಿಯ ಹೊಸ್ಮಠ, ಇಚ್ಲಂಪಾಡಿ ಸೇತುವೆಯ ಬಳಿ, ನಾಡೋಳಿ ಮುಂತಾದೆಡೆ ರಾಜಾರೋಷವಾಗಿ ಮರಳುಗಾರಿಕೆ ನಡೆಯುತ್ತಿದ್ದು, ಈ ಅಕ್ರಮ ಚಟುವಟಿಕೆಗಳಿಗೆ ಅಧಿಕಾರಿಗಳ ಪ್ರೋತ್ಸಾಹ ಇದೆ. ಮರಳು ತೆಗೆದು ದೊಡ್ಡ ಕುಳಗಳಿಗೆ ಮಾರಾಟ ಮಾಡುತ್ತಿದ್ದು ಬಡವರು ತನ್ನ ಸ್ವಂತಕ್ಕೆ ತೆಗೆದರೆ ಕೂಡಲೇ ಕಾನೂನು ಕ್ರಮ ಕೈಗೊಳ್ಳುತ್ತಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು ಮರಳು ತೆಗೆಯುತ್ತಿರುವ ವೇಳೆ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿದರೆ ಅವರು ಸ್ಥಳಕ್ಕೆ ಆಗಮಿಸುವ ವೇಳೆ ಆ ಮಾಹಿತಿಯನ್ನು ಕಡಬದ ಅಧಿಕಾರಿಗಳೆ ಮರಳು ಮಾಫಿಯದವರಿಗೆ ನೀಡುತ್ತಾರೆ, ಇನ್ನು ಮುಂದೆ ನಮಗೆ ಬೇಕಾದ ಮರಳನ್ನು ನಾವೇ ನದಿಯಿಂದ ತೆಗೆಯುತ್ತೇವೆ ಯಾರು ತಡೆಯುತ್ತಾರೆ ನೋಡೋಣ ಎಂದು ವಸಂತ ಕುಬಲಾಡಿ ಆಕ್ರೋಶ ವ್ಯಕ್ತಪಡಿಸಿದರು.

Also Read  ಉಪ್ಪಿನಂಗಡಿ: ದ್ವಿಚಕ್ರ ವಾಹನ ಕಳವು

ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘಟನೆಗಳ ಮಹಾ ಒಕ್ಕೂಟದ ಪ್ರ. ಕಾರ್ಯದರ್ಶಿ ಅಣ್ಣಿ ಎಲ್ತಿಮಾರ್, ಸದಸ್ಯರಾದ ಆನಂದ ಹೊಸ್ಮಠ, ಕುಶಲ ದೋಂತಿಲಡ್ಕ, ರಾಘವ ಕಳಾರ, ಜಯಶ್ರೀ ಹೊಸ್ಮಠ, ಸತೀಶ್ ದೋಂತಿಲಡ್ಕ ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top