(ನ್ಯೂಸ್ ಕಡಬ) newskadaba.com ಕಡಬ, ನ.19. ಈ ಭಾಗದ ಜನರ ಬಹು ದಶಕಗಳ ಬೇಡಿಕೆಯಾದ ಕಡಬ ತಾಲೂಕು ಉದ್ಘಾಟನೆಗೆ ಸರಕಾರವು ಗ್ರೀನ್ ಸಿಗ್ನಲ್ ನೀಡಿದ್ದು, ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ.
ನವೆಂಬರ್ 25 ಭಾನುವಾರದಂದು ಕಡಬದ ಅನುಗ್ರಹ ಸಭಾಭವನದ ವಠಾರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಜ್ಯ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ನೂತನ ತಾಲೂಕನ್ನು ಉದ್ಘಾಟಿಸಲಿದ್ದು, ಸ್ಥಳೀಯ ಶಾಸಕರು, ಸಂಸದರು, ಉಸ್ತುವಾರಿ ಸಚಿವರು ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಪುತ್ತೂರು ಸಹಾಯಕ ಆಯುಕ್ತ ಕೃಷ್ಣ ಮೂರ್ತಿ ಎಚ್.ಕೆ. ಹೇಳಿದ್ದಾರೆ. ಅವರು ಸೋಮವಾರ ಸಂಜೆ ಕಡಬದ ಅಂಬೇಡ್ಕರ್ ಭವನದಲ್ಲಿ ನಡೆದ ಕಡಬ ತಾಲೂಕು ಉದ್ಘಾಟನಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ರಾಜ್ಯ ಕಂದಾಯ ಸಚಿವರು ನವೆಂಬರ್ 25 ರಂದು ನೂತನ ಕಡಬ ತಾಲೂಕು ಉದ್ಘಾಟನೆಗೆ ಸೂಚನೆ ನೀಡಿದ್ದು, ಕಡಬದಲ್ಲಿ ನೂತನ ಮಿನಿ ವಿಧಾನಸೌಧ ತೆರೆಯಲು ಸರಕಾರವು 10 ಕೋಟಿ ರೂ ಮಂಜೂರು ಮಾಡಿದೆ. ಇದನ್ನು ಈಗಾಗಲೇ ತಾಲೂಕಿಗಾಗಿ ಕಾದಿರಿಸಿದ ಜಾಗದಲ್ಲಿ ಅನುಷ್ಟಾನ ಮಾಡಿದರೆ ಎಲ್ಲಾ ಇಲಾಖೆಗಳನ್ನು ಒಂದೇ ಸೂರಿನಡಿ ಸ್ಥಾಪಿಸಲು ಸಾಧ್ಯವಾಗುತ್ತದೆ ಎಂದವರು ಹೇಳಿದರು. ಮಾತ್ರವಲ್ಲದೆ ಆಯಾ ಇಲಾಖಾ ಕಛೇರಿಗಳನ್ನು ತೆರೆಯಲು ಅಧಿಕಾರಿಗಳು ಉನ್ನತಮಟ್ಟದ ಅಧಿಕಾರಿಗಳಿಗೆ ಪತ್ರ ಬರೆಯಬೇಕು ಎಂದರು. ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಎಲ್ಲಾ ಸಿದ್ದತೆಗಳನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜೆಡಿಎಸ್ ಮುಖಂಡ, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್ ಮಾತನಾಡಿ ಮೂರು ನಾಲ್ಕು ಬಾರಿ ಉದ್ಘಾಟನೆಗೆ ದಿನ ನಿಗದಿಯಾಗಿ ತಪ್ಪಿ ಹೋಗಿದ್ದು, ಕೇವಲ ಉದ್ಘಾಟನೆಯಿಂದ ಯಾವುದೇ ಪ್ರಯೋಜನವಿಲ್ಲ. ಅದಕ್ಕೆ ಪೂರಕವಾದ ಕಛೇರಿಗಳನ್ನು ತೆರೆಯಬೇಕು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಪಿ.ವರ್ಗೀಸ್ ಈ ಬಗ್ಗೆ ಈಗಾಗಲೇ ಹಲವು ಇಲಾಖೆಗಳಿಗೆ ಕಟ್ಟಡಗಳನ್ನು ಗುರುತಿಸಿ ಅಲ್ಲಿ ಕಛೇರಿಗಳನ್ನು ತೆರೆಯಲು ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ನೀಡಲಾಗಿದೆ ಎಂದು ಹೇಳಿದರು. ಆಗ ಮೀರಾ ಸಾಹೇಬ್ ಹಾಗೂ ಪಿ.ಪಿ.ವರ್ಗೀಸ್ ನಡುವೆ ನಾವು ಮಾಡಿಸಿದ್ದು – ನಾವು ಮಾಡಿಸಿದ್ದು ಎನ್ನುವ ವಾದ ಪ್ರತಿವಾದಗಳು ನಡೆದಿದ್ದು, ಇದನ್ನು ಗಮನಿಸಿದ ಎ.ಸಿಯವರು ಮಧ್ಯಪ್ರವೇಶಿಸಿ ಮಾತು ಕಡಿಮೆ ಮಾಡುವಂತೆ ಸೂಚಿಸಿದರಲ್ಲದೆ, ತಾಲೂಕು ಉದ್ಘಾಟನೆ ಸಂಪ್ರದಾಯದಂತೆ ನಡೆಯದ ಬಳಿಕ ಹಂತಹಂತವಾಗಿ ತಾಲೂಕು ಅನುಷ್ಟಾನವಾಗಲಿದೆ. ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಶ್ರಮಿಸೋಣ ಎಂದರು. ಎಸ್. ಅಬ್ದುಲ್ ಖಾದರ್, ತಾಲೂಕು ಪಂಚಾಯಿತಿ ಸದಸ್ಯರಾದ ಗಣೇಶ್ ಕೈಕುರೆ, ಫಝಲ್ ಕೋಡಿಂಬಾಳ ಮತ್ತಿತರರು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಪಿ.ವರ್ಗೀಸ್, ತಾಲೂಕು ಪಂಚಾಯತ್ ಸದಸ್ಯೆ ಆಶಾ ಲಕ್ಷ್ಮಣ್, ಕಡಬ ಗ್ರಾಮ ಪಂಚಾಯತಿ ಅಧ್ಯಕ್ಷ ಬಾಬು ಮುಗೇರ, ಸುಳ್ಯ ತಹಶೀಲ್ದಾರ್ ಕುಂಞಮ್ಮ, ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್, ಸಿಡಿಪಿಒ ಶಾಂತಿ ಹೆಗ್ಡೆ, ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ ಮೊದಲಾದವರು ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ಇಲಾಖಾಧಿಕಾರಿಗಳು ಭಾಗವಹಿಸಿದ್ದರು.
ಕಡಬ ತಹಶಿಲ್ದಾರ್ ಜಾನ್‍ಪ್ರಕಾಶ್ ರೋಡ್ರಿಗಸ್ ಸ್ವಾಗತಿಸಿ, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ ವಂದಿಸಿದರು. ಸಭೆಯ ಬಳಿಕ ಸಹಾಯಕ ಆಯುಕ್ತರು ಅನುಗ್ರಹ ಸಭಾಭವನದ ವಠಾರದಲ್ಲಿ ಸ್ಥಳ ಪರಿಶೀಲನೆ ನಡೆಸಿದರು.