(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ.12. ಶಿರಾಡಿ ಘಾಟ್ ರಸ್ತೆಯಲ್ಲಿ ಲಾರಿಗಳ ಸಂಚಾರಕ್ಕೆ ನವೆಂಬರ್ 12 ಸೋಮವಾರದಿಂದ ಅನುವು ಮಾಡಿ ಕೊಡಲಾಗುತ್ತದೆ ಎಂದು ನವೆಂಬರ್ 08 ರಂದು ಜಿಲ್ಲಾಡಳಿತವು ಘೋಷಿಸಿದ್ದನ್ನು ನಂಬಿ ಬಂದ ನೂರಾರು ಲಾರಿಗಳ ಚಾಲಕರು ಪರದಾಡಿದ ಘಟನೆ ಸೋಮವಾರದಂದು ಗುಂಡ್ಯದಲ್ಲಿ ನಡೆದಿದೆ.
ಶಿರಾಡಿ ಘಾಟಿ ರಸ್ತೆ ಘನ ವಾಹನಗಳಾದ ಲಾರಿಗಳ ಸಂಚಾರಕ್ಕೆ ಇಂದು ಮುಕ್ತವಾಗುತ್ತದೆ ಅನ್ನುವ ಸುದ್ದಿಯನ್ನು ನಂಬಿ ಅನೇಕ ಲಾರಿಗಳು ಗುಂಡ್ಯಕ್ಕೆ ಆಗಮಿಸಿವೆ. ಸಕಲೇಶಪುರ ಕಡೆಗಳಿಂದಲೂ ಟನ್ ಗಟ್ಟಲೆ ಲೋಡು ತುಂಬಿದ ಲಾರಿಗಳು ಘಾಟ್ ಇಳಿದು ಗುಂಡ್ಯಕ್ಕೆ ತಲುಪಿವೆ. ಆದರೆ ಗುಂಡ್ಯ ಗೇಟ್ ನಲ್ಲಿ ಸಂಚಾರಕ್ಕೆ ಜಿಲ್ಲಾಡಳಿತವು ತಡೆ ಒಡ್ಡಿದ್ದರಿಂದಾಗಿಲಾರಿ ಚಾಲಕರು ಪರದಾಡುತ್ತಿದ್ದಾರೆ. ಕೆಲವೊಂದು ಲಾರಿಗಳು ಲೋಡನ್ನು ಸಮಯಕ್ಕೆ ಸರಿಯಾಗಿ ತಲುಪಿಸುವ ಜವಾಬ್ದಾರಿಯಿಂದಾಗಿ ಗುಂಡ್ಯದಿಂದ ಮತ್ತೆ ಹಿಂತಿರುಗಿದ್ದು, ಸಕಲೇಶಪುರಕ್ಕೆ ತೆರಳಿವೆ. ಜಿಲ್ಲಾಡಳಿತದ ಈ ನಿರ್ಧಾರಕ್ಕೆ ಲಾರಿ ಚಾಲಕರು ಹಿಡಿಶಾಪ ಹಾಕುತ್ತಿರುವುದು ಕಂಡು ಬಂದಿದೆ.