(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ.01. ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಿರುವ ಉಪ್ಪಿನಂಗಡಿ ಪೊಲೀಸರು 225 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಲ್ಲದೆ, ತನ್ನ ಮನೆಯ ಹಿತ್ತಲಿನಲ್ಲಿ ಬೆಳೆಸಿದ್ದ ಗಾಂಜಾ ಗಿಡವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಕೊಡೆಂಕೀರಿ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಹಾರೀಸ್ ಎಂದು ಗುರುತಿಸಲಾಗಿದೆ. ಆರೋಪಿಯು ಬುಧವಾರದಂದು ನೆಲ್ಯಾಡಿಯ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾನೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಿಸಿದಾಗ ತನ್ನ ಮನೆಯ ಹಿತ್ತಲಿನಲ್ಲಿ ಗಾಂಜಾ ಗಿಡವನ್ನು ಬೆಳೆಸಿ, ಗಾಂಜಾ ಹೂವನ್ನು ಒಣಗಿಸಿ ಮಾರಾಟ ಮಾಡುತ್ತಿದ್ದ ಬಗ್ಗೆ ತಪ್ಪು ಒಪ್ಪಿಕೊಂಡಿದ್ದು, ಅದರಂತೆ ಆರೋಪಿಯ ಮನೆಗೆ ತೆರಳಿದ ಪೊಲೀಸರು ನಾಶಗೊಳಿಸಿದ ಗಾಂಜಾ ಗಿಡವನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ| ಬಿ. ಆರ್. ರವಿಕಾಂತೇಗೌಡ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಜಿತ್ ವಿ.ಜೆ. ರವರ ಮಾರ್ಗದರ್ಶನದಲ್ಲಿ, ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀನಿವಾಸ್ ಬಿ.ಎಸ್. ಹಾಗೂ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಗೋಪಾಲ ನಾಯ್ಕ ರವರ ಆದೇಶದಂತೆ ಉಪ್ಪಿಂಗಡಿ ಪೊಲೀಸ್ ಠಾಣಾ ಪಿಎಸ್‌ಐ ನಂದ ಕುಮಾರ್ ಎಂ.ಎಂ. ಹಾಗೂ ಸಿಬ್ಬಂದಿಗಳಾದ ರುಕ್ಮ ನಾಯ್ಕ, ಹರೀಶ್ಚಂದ್ರ, ಶೇಖರ ಗೌಡ, ಇರ್ಷಾದ್, ಪ್ರತಾಪ್, ಮನೋಹರ ಪಿ.ಸಿ, ಶ್ರೀಧರ ಹಾಗೂ ನಾರಾಯಣ ಗೌಡ ರವರು ಭಾಗವಹಿಸಿದ್ದರು.