ಬಲ್ಯ ಪಟ್ಟೆ ಸರಕಾರಿ ಶಾಲೆಯ ಬಳಿಗೆ ತಲುಪಿದ ಕಾಡಾನೆ ► ಅರಣ್ಯಾಧಿಕಾರಿಗಳಿಂದ ಕಾಡಿಗೆ ಅಟ್ಟಲು ಶತಪ್ರಯತ್ನ

(ನ್ಯೂಸ್ ಕಡಬ) newskadaba.com ಕಡಬ, ಅ.30. ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪದವು ಎಂಬಲ್ಲಿ ಕಾಡಾನೆಯು ಪ್ರತ್ಯಕ್ಷವಾಗಿದ್ದು, ಪರಿಸರದ ಜನರನ್ನು ಭಯಭೀತರನ್ನಾಗಿಸಿದೆ‌.

 

ಕಳೆದೆರಡು ದಿನಗಳ ಹಿಂದೆ ಇಚಿಲಂಪಾಡಿ ಪರಿಸರಕ್ಕೆ ಕಾಡಾನೆ ಆಗಮಿಸಿದೆ ಎಂಬ ವದಂತಿ ಹಬ್ಬಿತ್ತಾದರೂ, ಮಂಗಳವಾರ ಸಂಜೆಯ ವೇಳೆಗೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಪ್ರತ್ಯಕ್ಷವಾಗಿದೆ. ಇಚಿಲಂಪಾಡಿಯಿಂದ ಬಲ್ಯ ಮೂಲವಾಗಿ ಕಾಡಿನಲ್ಲಿ ಸಂಚರಿಸಿದ ಆನೆಯು ಪದವು ಗೇರುತೋಪಿನಿಂದ ನೇರವಾಗಿ ರಸ್ತೆಗಿಳಿದಿದೆ. ಆನೆಯು ರಸ್ತೆಯಲ್ಲಿ ಸಂಚರಿಸುತ್ತಿದ್ದುದನ್ನು ಬೈಕ್ ಸವಾರರೊಬ್ಬರು ವೀಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾಡಾನೆಯು ಪಡ್ನೂರು ಮೀಸಲು ಅರಣ್ಯದಿಂದ ಆಗಮಿಸಿದ್ದು, ಅದನ್ನು ಹಿಂದಕ್ಕಟ್ಟುವ ಕಾರ್ಯವನ್ನು ಅರಣ್ಯ ಇಲಾಖಾ ಸಿಬ್ಬಂದಿಗಳು ಮಾಡುತ್ತಿದ್ದಾರೆ.

ಆನೆಯು ರಾತ್ರಿ ವೇಳೆ ಬಲ್ಯ ಸಮೀಪದ ಪಟ್ಟೆ ಸರಕಾರಿ ಶಾಲೆಯ ಬಳಿಯಲ್ಲಿ ಕಂಡುಬಂದಿದ್ದು, ಯಾವುದೇ ಕ್ಷಣದಲ್ಲಿ ರಸ್ತೆಗಿಳಿಯುವ ಸಂಭವವಿರುವುದರಿಂದ ಸಾರ್ವಜನಿಕರು ರಾತ್ರಿ ಹೊತ್ತು ಸಂಚರಿಸುವಾಗ ಆದಷ್ಟು ಜಾಗರೂಕತೆ ವಹಿಸುವಂತೆ ಅರಣ್ಯಾಧಿಕಾರಿಗಳು ಎಚ್ಚರಿಸಿದ್ದಾರೆ. ಪಂಜ ವಲಯ ಅರಣ್ಯಾಧಿಕಾರಿ ಗಿರೀಶ್ ರವರ ಮಾರ್ಗದರ್ಶನದಲ್ಲಿ ಕುಂತೂರು ಉಪ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ತೀವ್ರ ನಿಗಾ ವಹಿಸುತ್ತಿದ್ದಾರೆ.

error: Content is protected !!

Join the Group

Join WhatsApp Group