ದಿನಪೂರ್ತಿ ನಡೆಯಬೇಕಿದ್ದ ಪ್ರತಿಭಟನೆಯನ್ನು ತನ್ನ ಭರವಸೆಯಲ್ಲೇ ಅಂತ್ಯಗಾಣಿಸಿದ ಉಪ್ಪಿನಂಗಡಿ ಎಸ್ಐ ► ನಂದಕುಮಾರ್ ರ ನಡೆಗೆ ವ್ಯಾಪಕ ಪ್ರಶಂಸೆ

(ನ್ಯೂಸ್ ಕಡಬ) newskadaba.com ಕಡಬ, ಅ.29. ಕೇವಲ ಒಂದು ಭರವಸೆಯ ಮೂಲಕ ಹಿರಿಯ ಅಧಿಕಾರಿಗಳು ಬಂದು ಮಾಡಬೇಕಿದ್ದ ಕೆಲಸವನ್ನು ಉಪ್ಪಿನಂಗಡಿ ಠಾಣಾ ಉಪ ನಿರೀಕ್ಷಕ ನಂದಕುಮಾರ್ ತನ್ನ ಮಾತಿನ ಮೋಡಿಯಲ್ಲೇ ಮಾಡಿ ಮುಗಿಸುವುದರೊಂದಿಗೆ ಇಡೀ ಒಂದು ದಿನದ ಪ್ರತಿಭಟನೆಯನ್ನು ಕೆಲವೇ ತಾಸುಗಳಲ್ಲಿ ಶಾಂತಿಯುತವಾಗಿ ಅಂತ್ಯಗೊಳಿಸಿದ ಘಟನೆ ಸೋಮವಾರದಂದು ಕಡಬದಲ್ಲಿ ನಡೆದಿದೆ.

ಕಡಬ ಠಾಣಾ ಪೊಲೀಸ್ ಉಪನಿರೀಕ್ಷಕ ಹಾಗೂ ಕಡಬ ತಹಶಿಲ್ದಾರ್‍ರವರು ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಕಡಬ ಶಾಖೆ, ದ.ಕ ಜಿಲ್ಲಾ ದಲಿತ ಸೇವಾ ಸಮಿತಿ ವಿಟ್ಲ ಇದರ ಕಡಬ ಶಾಖೆ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ದಲಿತ ಸಂಘರ್ಷ ಸಮಿತಿ ಪ್ರೋ. ಕೃಷ್ಣಪ್ಪ ಸ್ಥಾಪಿತ ಸಂಘಟನೆಗಳನ್ನೊಳಗೊಂಡ ಕಡಬ ತಾಲೂಕು ದಲಿತ ಸಂಘಟನೆಗಳ ಮಹಾ ಒಕ್ಕೂಟದ ವತಿಯಿಂದ ಕಡಬ ಠಾಣೆ ಮತ್ತು ಕಡಬ ತಹಶೀಲ್ದಾರರ ಕಛೇರಿಯ ಮುಂಭಾಗದಲ್ಲಿ ಸೋಮವಾರದಂದು ಪ್ರತಿಭಟನೆ ನಡೆಯಿತು. ಕಡಬ ಪೇಟೆಯಲ್ಲಿ ಸಭೆ ಸೇರಿದ ಪ್ರತಿಭಟನಾಕಾರರು ಮೆರವಣಿಗೆಯ ಮೂಲಕ ಕಡಬ ಠಾಣೆಯ ಆವರಣದಲ್ಲಿ ಪ್ರತಿಭಟನೆ ನಡೆಸಿ ಪೊಲೀಸ್ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಬಳಿಕ ಕಡಬ ತಹಶಿಲ್ದಾರ್ ಕಛೇರಿಗೆ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ಕಂದಾಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

Also Read  ವಿಶ್ವದ ಇಬ್ಬರ ದಾಖಲೆ ಮುರಿದು ಗಿನ್ನೆಸ್ ದಾಖಲೆ ಸಾಧಿಸಿದ ದೇರಳಕಟ್ಟೆಯ ಯುವಕ.!

ಕಡಬ ಠಾಣಾ ಉಪ ನಿರೀಕ್ಷಕ ಪ್ರಕಾಶ್ ದೇವಾಡಿಗ ಹಾಗೂ ಕಡಬ ತಾಲೂಕು ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು, ದಲಿತರ ಕುಂದುಕೊರತೆಗಳ ಸಭೆ ನಡೆಸದೆ ಅನ್ಯಾಯ ಎಸಗುತ್ತಿದ್ದಾರೆ. ಕಡಬ ತಾಲೂಕಿನ ಡಿ.ಸಿ. ಮನ್ನಾ ಜಾಗಕ್ಕೆ ಪ್ರತೈಕ ಟಾಸ್ಕ್ ಫೋರ್ಸ್ ರಚಿಸಬೇಕು. 102 ನೇ ನೆಕ್ಕಿಲಾಡಿ ಹಾಗೂ ಐತ್ತೂರು ಗ್ರಾಮದಲ್ಲಿರುವ ಡಿ.ಸಿ. ಮನ್ನಾ ಭೂಮಿ ಒತ್ತುವಾರಿದಾರರಿಂದ ತೆರವುಗೊಳಿಸಿ ಅರ್ಜಿ ಸಲ್ಲಿಸಿದ ಭೂ ರಹಿತ ದಲಿತರಿಗೆ ಜಾಗ ಮಂಜೂರುಗೊಳಿಸಬೇಕು. ವಸತಿ ಯೋಜನೆಯಡಿ ಮನೆ ಮಂಜೂರುಗೊಂಡಿದ್ದರೂ ಮರಳಿನ ಅಭಾವದಿಂದ ಸರಿಯಾದ ಸಮಯಕ್ಕೆ ಮನೆ ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ, ಹಾಗಾಗಿ ಜಿಲ್ಲಾಧಿಕಾರಿ ಸೂಕ್ತ ಕ್ರಮಕೈಗೊಳ್ಳಬೇಕು. ಹೊಸ್ಮಠ ಎಂಬಲ್ಲಿ ಸುಗುಣ ದೇವಯ್ಯ ಎಂಬುವವರು ನಡೆಸುತ್ತಿದ್ದ ಫ್ಯಾನ್ಸಿ ಹಾಗೂ ಟೈಲರಿಂಗ್ ಅಂಗಡಿಗೆ ಕಳೆದ ವರ್ಷದ ನವಂಬರ್‍ನಲ್ಲಿ ಉದ್ದೇಶಪೂರ್ವಕವಾಗಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು ಇದುವರೆಗೆ ದೂರು ನೀಡಿದರೂ ನ್ಯಾಯ ಸಿಕ್ಕಿಲ್ಲ. ಇಂತಹ ಹಲವಾರು ಪ್ರಕರಣಗಳು ಇತ್ಯರ್ಥವಾಗದೆ ದಲಿತರಿಗೆ ಅನ್ಯಾಯ ಎಸಗಲಾಗುತ್ತಿದೆ. ಅಲ್ಲದೆ ಕಂದಾಯ ಇಲಾಖೆಗೆ ಸಂಬಂಧಪಟ್ಟ ಹಲವಾರು ಪ್ರಕರಣಗಳಲ್ಲಿ ಕಡಬ ತಹಶೀಲ್ದಾರ್ ದಲಿತರಿಗೆ ಅನ್ಯಾಯ ಎಸಗುತ್ತಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಂಡು ತಕ್ಷಣ ವರ್ಗಾಯಿಗೊಳಿಸಬೇಕು ಎಂದು ಪ್ರತಿಭಟಕಾರರು ಆಗ್ರಹಿಸಿದರು.

Also Read  ವಿಧಾನಪರಿಷತ್ ಉಪಚುನಾವಣೇ ಉಸ್ತುವಾರಿ- ಕೋಟ ಶ್ರೀನಿವಾಸ್ ಪೂಜಾರಿ

ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದಾಗ ಬಂದೋ ಬಸ್ತ್ ನ ಹೊಣೆ ಹೊತ್ತಿದ್ದ ಉಪ್ಪಿನಂಗಡಿ ಠಾಣಾ ಉಪ ನಿರೀಕ್ಷಕರಾದ ನಂದಕುಮಾರ್ ಪ್ರತಿಭಟನಾ ನಿರತ ಮುಖಂಡರ ಮನವೊಲಿಸಿ ಮನವಿಯನ್ನು ತಾನೇ ಸ್ವತಃ ಸ್ವೀಕರಿಸಿದ್ದಲ್ಲದೆ, ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಕಳುಹಿಸುತ್ತೇನೆ ಎಂದು ಭರವಸೆ ನೀಡಿದ್ದರಿಂದಾಗಿ ಪ್ರತಿಭಟನೆಯು ಕೆಲವೇ ತಾಸುಗಳಲ್ಲಿ ಅಂತ್ಯಗೊಂಡಿತು. ಈ ಮೂಲಕ ತನ್ನ ಮಾತಿನ ಮೋಡಿಯಲ್ಲೇ ಪ್ರತಿಭಟನೆಯನ್ನು ಕೊನೆಗಾಣಿಸಿದ ನಂದ ಕುಮಾರ್ ರವರ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು.

error: Content is protected !!
Scroll to Top