(ನ್ಯೂಸ್ ಕಡಬ) newskadaba.com ಪುತ್ತೂರು, ಅ.27. ಠಾಣಾ ವ್ಯಾಪ್ತಿಯ ಪೋಳ್ಯ ಎಂಬಲ್ಲಿ ತಡ ರಾತ್ರಿ ಮನೆ ಮಂದಿ ಮಲಗಿದ್ದ ವೇಳೆ ಕಚ್ಚಾ ಬಾಂಬ್ ಸ್ಫೋಟಿಸಿ ಮನೆಯನ್ನು ಧ್ವಂಸಗೈಯಲು ಸಂಚು ರೂಪಿಸಿದ್ದ ಆರೋಪಿಯನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಕೇರಳ ರಾಜ್ಯದ ಎರ್ನಾಕುಲಂ ನಿವಾಸಿ ಬಾಬು ಯಾನೆ ಬಾಲನ್ ಎಂದು ಗುರುತಿಸಲಾಗಿದೆ. ಆರೋಪಿಯು ಅಕ್ಟೋಬರ್ 15 ರಂದು ತಡ ರಾತ್ರಿ ಪೋಳ್ಯ ನಿವಾಸಿ ನಾರಾಯಣ ಪ್ರಸಾದ್ ಎಂಬವರ ಮನೆಯನ್ನು ಧ್ವಂಸಗೈಯುವ ಉದ್ದೇಶದಿಂದ ಮೂರು ನಾಡ ಬಾಂಬ್ ಗಳನ್ನು ತಂದಿರಿಸಿದ್ದು, ಅದರಲ್ಲಿ ಒಂದು ಬಾಂಬ್ ಸ್ಫೋಟಗೊಂಡ ಪರಿಣಾಮ ನಾರಾಯಣ ಪ್ರಸಾದ್ ರವರ ಪತ್ನಿ ಶಾಲಿನಿ ಗಂಭೀರ ಗಾಯಗೊಂಡಿದ್ದರು. ಘಟನೆಯ ಬಳಿಕ ಆರೋಪಿಯು ತಲೆಮರೆಸಿಕೊಂಡಿದ್ದು, ಈತನ ಬಗ್ಗೆ ಶಂಕೆ ವ್ಯಕ್ತವಾಗಿದ್ದರಿಂದ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರಲ್ಲದೆ ಜಿಲ್ಲಾ ಎಸ್ಪಿಯವರ ನೇತೃತ್ವದಲ್ಲಿ ಮೂರು ತಂಡ ರಚಿಸಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ರವಿಕಾಂತೇ ಗೌಡ ಅವರ ನಿರ್ದೇಶನದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಅವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್‌ಪೆಕ್ಟರ್ ಅಜೇಯ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.