ಧರ್ಮಸ್ಥಳ ಕಾಡಿನಿಂದ ಬೆಲೆಬಾಳುವ ಮರಗಳ ಕದ್ದು ಸಾಗಾಟ ► ಓಮ್ನಿ ಸಹಿತ ಓರ್ವನ ಬಂಧನ, ಮೂವರು ಪರಾರಿ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಅ.27. ಧರ್ಮಸ್ಥಳ ಸಮೀಪದ ಪುದುವೆಟ್ಟು ಕಾಡಿನಿಂದ ಬೀಟಿ, ಸಾಗುವಾನಿ ಸೇರಿದಂತೆ ಬೆಲೆಬಾಳುವ ಮರಗಳನ್ನು ಕಡಿದು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಮಾರುತಿ ಓಮ್ನಿಯಲ್ಲಿ ತುಂಬಿಸಿಟ್ಟಿದ್ದ ಮರದ ದಿಮ್ಮಿಗಳನ್ನು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮಂಗಳೂರು ತಾಲೂಕಿನ ಕೋಟೆಕಾರು ಅಜ್ಜಿನಡ್ಕ ನಿವಾಸಿ ಮಹಮ್ಮದ್ ಎಂಬವರ ಪುತ್ರ ಅಬ್ಬಾಸ್ ಎಂದು ಗುರುತಿಸಲಾಗಿದೆ. ನೆಲ್ಯಾಡಿಯ ಹೊಸಮಜಲು ನಿವಾಸಿಗಳಾದ ಅಬ್ದುಲ್ಲಾ ಎಂಬವರ ಪುತ್ರ ಮಹಮ್ಮದ್ ಬಾವಾ, ಅಬ್ದುಲ್ಲಾ ಎಂಬವರ ಪುತ್ರ ಸುಲೈಮಾನ್ ಹಾಗೂ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ದಿ| ಲತೀಫ್ ಎಂಬವರ ಪುತ್ರ ಶಿಹಾಬ್ ಕಾಡಿನಲ್ಲಿ ಓಡಿ ತಪ್ಪಿಸಿಕೊಂಡಿದ್ದಾರೆ. ಆರೋಪಿಗಳು ಈ ಹಿಂದೆ ಬೆಳ್ತಂಗಡಿ ವಲಯದ ಧರ್ಮಸ್ಥಳ, ಮುಂಡಾಜೆ ಮತ್ತು ಉಪ್ಪಿನಂಗಡಿ ವಲಯದ ರೆಖ್ಯ ರಕ್ಷಿತಾರಣ್ಯದಿಂದ ಬೆಲೆಬಾಳುವ ಸಾಗುವಾನಿ, ಬೀಟೆ ಮುಂತಾದ ಮರಗಳನ್ನು ಕಡಿದು ಸಾಗಾಟ ಮಾಡಿದ್ದು, ಶುಕ್ರವಾರ ಬೆಳಗ್ಗಿನ ಜಾವ ಮರ ಸಾಗಾಟ ಮಾಡುತ್ತಿದ್ದಾಗ ಅರಣ್ಯಾಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

Also Read  ಮದುವೆಗೆ ದೋಷಗಳು ನಿವಾರಣೆಯಾಗಬೇಕು ಎಂದರೆ ಈ ನಿಯಮ ಪಾಲಿಸಿ ಕಷ್ಟಗಳು ಪರಿಹಾರ ಆಗುತ್ತದೆ

ಬೆಲೆಬಾಳುವ ಮರಗಳನ್ನು ಕಡಿದು ಅಕ್ರಮವಾಗಿ ಸಾಗಾಟ ಮಾಡುವಂತಹ ವೃತ್ತಿಪರ ಮರಗಳ್ಳರನ್ನು ಪತ್ತೆ ಹಚ್ಚುವ ಸಲುವಾಗಿ ಕಳೆದ ಒಂದು ತಿಂಗಳಿಂದ ಸತತವಾಗಿ ಹೊಂಚು ಹಾಕಿ ಪ್ರಯತ್ನಿಸುತ್ತಿದ್ದ ಉಜಿರೆ ಶಾಖಾ ಉಪ ವಲಯ ಅರಣ್ಯ ಅಧಿಕಾರಿಯವರು ವಲಯದ ಇತರ ಶಾಖಾ ಸಿಬ್ಬಂದಿ ಹಾಗೂ ಕಾಲಭೈರವ ರಾತ್ರಿ ಗಸ್ತು ಪಡೆಯ ಸಿಬ್ಬಂದಿಯವರೊಂದಿಗೆ 4 ತಂಡಗಳಾಗಿ ಗಸ್ತು ಸಂಚರಿಸುತ್ತಿದ್ದಾಗ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಕಲ್ಲೇರಿ ಎಂಬಲ್ಲಿ ಧರ್ಮಸ್ಥಳ ಮುಂಡಾಜೆ ಮೀಸಲು ಅರಣ್ಯ ಪ್ರದೇಶದ ಕಡೆಯಿಂದ ಬಂದ ಮಾರುತಿ ಒಮ್ನಿ ಕಾರು ಪರಿಶೀಲಿಸಿದಾಗ 5 ಬೀಟೆ ಮತ್ತು 4 ಸಾಗುವಾನಿ ಮರದ ತುಂಡುಗಳನ್ನು ತುಂಬಿಸಿಕೊಂಡು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಸೊತ್ತು ಸಮೇತ ಮಾರುತಿ ಒಮ್ನಿಯನ್ನು ವಶಪಡಿಸಿಕೊಂಡಿದ್ದಾರೆ. ಓಮ್ನಿಯಲ್ಲಿ ಕತ್ತಿ, ಗರಗಸ ಹಾಗೂ ಇತರ ಆಯುಧಗಳು ಪತ್ತೆಯಾಗಿವೆ. ವಶಪಡಿಸಿಕೊಂಡ ಸೊತ್ತು ಹಾಗೂ ವಾಹನದ ಒಟ್ಟು ಮೌಲ್ಯ 3 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

Also Read  ಕುಲ್ಕುಂದ: ದೀಪಾವಳಿ ಪ್ರಯುಕ್ತ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ತಂಬಿಲ

ಕಾರ್ಯಾಚರಣೆಯಲ್ಲಿ ಉಜಿರೆ ಶಾಖಾ ಉಪ ವಲಯ ಅರಣ್ಯಾಧಿಕಾರಿಯವರಾದ ವಿನೋದ್ ಎಸ್. ಗೌಡ ಹಾಗೂ ಉಪ ವಲಯ ಅರಣ್ಯಾಧಿಕಾರಿಗಳಾದ ರವೀಂದ್ರ ಅಂಕಲಗಿ, ರಾಜೇಶ್ ಎಸ್, ಹರಿಪ್ರಸಾದ್, ಭವಾನಿ ಶಂಕರ್ ಬಿ.ಜೆ., ಅರಣ್ಯ ರಕ್ಷಕರಾದ ಶರತ್ ಶೆಟ್ಟಿ, ಪಾಂಡುರಂಗ ಕಮತಿ, ರಾಘವೇಂದ್ರ ಪ್ರಸಾದ್, ಪಿ.ಶಂಕರ್ ಮತ್ತು ಅರಣ್ಯ ವೀಕ್ಷಕ ಸದಾನಂದ ಭಾಗವಹಿಸಿದ್ದರು. ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ| ಕರಿಕಲನ್ ಹಾಗೂ ಮಂಗಳೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡರವರ ನಿರ್ದೇಶನದಂತೆ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಸುಬ್ಬಯ್ಯ ನಾಯ್ಕ್ ತನಿಖೆಯನ್ನು ಮುಂದುವರಿಸಿದ್ದಾರೆ.

error: Content is protected !!
Scroll to Top