ಸುಬ್ರಹ್ಮಣ್ಯ: ಹಿಂಜಾವೇ ಮುಖಂಡ ಗುರುಪ್ರಸಾದ್ ಪಂಜರವರಿಗೆ ಹಲ್ಲೆ ಹಿನ್ನೆಲೆ ► ಇಂದು ಸುಬ್ರಹ್ಮಣ್ಯ ಸಂಪೂರ್ಣ ಬಂದ್

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಅ.25. ಕಳೆದ ಕೆಲವು ದಿನಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸರ್ಪಸಂಸ್ಕಾರ ವಿಚಾರದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದ್ದ ತನ್ನ ಹೇಳಿಕೆಯ ಬಗ್ಗೆ ಸಂಧಾನಕ್ಕೆಂದು ಕುಕ್ಕೇ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಚೈತ್ರಾ ಕುಂದಾಪುರ ಮತ್ತು ಸಂಗಡಿಗರು ಹಿಂಜಾವೇ ಸುಳ್ಯ ತಾಲೂಕು ಕಾರ್ಯದರ್ಶಿ ಗುರುಪ್ರಸಾದ್ ಪಂಜರವರಿಗೆ ಗಂಭೀರ ಹಲ್ಲೆ ನಡೆಸಿರುವುದನ್ನು ಖಂಡಿಸಿ ಇಂದು ಕರೆ ನೀಡಿದ್ದ ಸುಬ್ರಹ್ಮಣ್ಯ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಸರ್ಪಸಂಸ್ಕಾರದ ಬಗ್ಗೆ ಚೈತ್ರಾ ಕುಂದಾಪುರ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, ಈ ಬಗ್ಗೆ ಚೈತ್ರಾ ಕುಂದಾಪುರ ಹಾಗೂ ಸುಬ್ರಹ್ಮಣ್ಯದ ಸ್ಥಳೀಯರ ನಡುವೆ ಫೇಸ್ ಬುಕ್ ನಲ್ಲಿ ಚರ್ಚೆ ನಡೆಯುತ್ತಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಚೈತ್ರಾ ಕುಂದಾಪುರ ತನ್ನ ಸಂಗಡಿಗರೊಂದಿಗೆ ಬುಧವಾರದಂದು ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದು, ಇತ್ತಂಡಗಳ ನಡುವೆ ಸಂಧಾನ ಮಾತುಕತೆ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಸಂದರ್ಭ ಚೈತ್ರಾ ಕುಂದಾಪುರ ಹಾಗೂ ಸಂಗಡಿಗರು ಹಿಂದೂ ಜಾಗರಣಾ ವೇದಿಕೆ ಮುಖಂಡ ಗುರುಪ್ರಸಾದ್ ಅವರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಗುರುಪ್ರಸಾದ್ ಅವರನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ‌ ನಡೆಸಿದ ಚೈತ್ರಾ ಕುಂದಾಪುರ ಮತ್ತು ಆರು ಮಂದಿ ಸಹಚರರನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿದ್ದಾರೆ.

ಸುಬ್ರಹ್ಮಣ್ಯದ ನಾಗರೀಕರು ಚೈತ್ರಾ ಕುಂದಾಪುರರವರಿಗೆ ಧಿಕ್ಕಾರ ಕೂಗುತ್ತಾ ಕುಕ್ಕೇ ದೇವಳದ ಬಳಿಯಿಂದ ಕುಮಾರಧಾರದವರೆಗೆ ಮೆರವಣಿಗೆಯಲ್ಲಿ ತೆರಳಿ ಬಳಿಕ ಪುನಃ ದೇವಸ್ಥಾನದತ್ತ ಹಿಂತಿರುಗಿದ್ದಾರೆ. ಗುರುವಾರ ಸಂಜೆ 4 ಗಂಟೆಗೆ ಪ್ರತಿಭಟನಾ ಸಭೆ ನಡೆಯಲಿದೆ.

error: Content is protected !!

Join the Group

Join WhatsApp Group