ಕೋಡಿಂಬಾಳ ಪರಿಸರದಲ್ಲಿ ನಿಗೂಢ ಜ್ವರ ಬಾಧೆ ಹಿನ್ನೆಲೆ ► ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್ ಸ್ಥಳಕ್ಕೆ ಭೇಟಿ

(ನ್ಯೂಸ್ ಕಡಬ) newskadaba.com ಕಡಬ, ಅ.20. ನಿಗೂಢ ಜ್ವರದ ಬಾಧೆಯಿಂದಾಗಿ ಆತಂಕದಲ್ಲಿರುವ ಕೋಡಿಂಬಾಳ ಗ್ರಾಮದ ಮಜ್ಜಾರು ಪ್ರದೇಶಕ್ಕೆ ಶುಕ್ರವಾರದಂದು ಭೇಟಿ ನೀಡಿದ ಜಿಲ್ಲಾ ಅರೋಗ್ಯಾಧಿಕಾರಿ ಡಾ|ರಾಮಕೃಷ್ಣ ರಾವ್ ಅವರು ಆತಂಕದಲ್ಲಿರುವ ಸ್ಥಳೀಯರಿಗೆ ಧೈರ್ಯ ತುಂಬಿದರು.

22 ದಿನಗಳ ಹಿಂದೆ ಜ್ವರ ಪೀಡಿತರಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಮಜ್ಜಾರು ನಿವಾಸಿ ಹರೀಶ್ ಅವರ ಮನೆಗೆ ಜನಪ್ರತಿನಿಧಿಗಳು ಹಾಗೂ ವೈದ್ಯಾಧಿಕಾರಿಗಳ ಜೊತೆ ಭೇಟಿ ನೀಡಿದ ಡಾ| ರಾಮಕೃಷ್ಣ ರಾವ್ ಅವರು ಪರಿಸರದಲ್ಲಿ ಜ್ವರ ಪೀಡಿತರಾಗಿರುವವರ ವೈದ್ಯಕೀಯ ದಾಖಲೆಗಳು ಹಾಗೂ ಆರೋಗ್ಯಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಪರಿಸರದಲ್ಲಿ ಫಾಗಿಂಗ್ ನಡೆಸುವುದರೊಂದಿಗೆ ಜ್ವರಪೀಡಿತರ ಆರೋಗ್ಯಸ್ಥಿತಿಯ ಕುರಿತು ಪ್ರತಿದಿನ ಮಾಹಿತಿ ಪಡೆದುಕೊಂಡು ಚಿಕಿತ್ಸೆಯ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಸ್ಥಳೀಯ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಕಾರ್ಯಕರ್ತೆಯವರಿಗೆ ಅವರು ಸೂಚನೆ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೃತ ಹರೀಶ್ ಅವರು ಮೇದೋಜೀರಕ ಗ್ರಂಥಿಯ ಊತದಿಂದಾಗಿ ಮೃತಪಟ್ಟಿರುವುದಾಗಿ ವೈದ್ಯಕೀಯ ದಾಖಲೆಗಳಿಂದ ದೃಢಪಟ್ಟಿದೆ. ಪ್ರಸ್ತುತ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜೀವನ್ ಹಾಗೂ ಇನ್ನಿತರರಲ್ಲಿ ಕಾಣಿಸಿಕೊಂಡಿರುವ ಅನಾರೋಗ್ಯಕ್ಕೂ ಮೃತ ಹರೀಶ್ ಅವರನ್ನು ಬಾಧಿಸುತ್ತಿದ್ದ ಕಾಯಿಲೆಗೂ ಯಾವುದೇ ಸಂಬಂಧವಿಲ್ಲ.  ಆದುದರಿಂದ ಯಾರು ಕೂಡ ಆತಂಕಪಡಬೇಕಿಲ್ಲ. ಮಜ್ಜಾರು ಪರಿಸರದಲ್ಲಿ ಜಾಂಡಿಸ್ ಹಾಗೂ ಜ್ವರಕ್ಕೆ ತುತ್ತಾಗಿರುವ ಎಲ್ಲಾ ರೋಗಿಗಳು ಗುಣಮುಖರಾಗುತ್ತಿದ್ದಾರೆ. ಮಂಗಳೂರಿನಲ್ಲಿ ಜೀವನ್ ಅವರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಸ್ವತಃ ನಾನೇ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಲ್ಲಿ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಜೀವನ್ ಅವರಿಗೆ ಡೆಂಗ್ಯೂ ಜ್ವರ ಹಾಗೂ ವೈರಲ್ ಎ ಹೆಪಟೈಟಿಸ್‍ನೊಂದಿಗೆ ಲಿವರ್‍ನಲ್ಲಿಯೂ ಸಮಸ್ಯೆ ಇರುವುದು ತಿಳಿದುಬಂದಿದೆ. ಇದೀಗ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಅವರ ಆರೋಗ್ಯ ಸಾಕಷ್ಟು ಸುಧಾರಿಸಿದೆ. ಆದುದರಿಂದ ಜನರು ವದಂತಿಗಳಿಗೆ ಕಿವಿಗೊಟ್ಟು ಭೀತರಾಗಬೇಕಿಲ್ಲ. ಜನರು ಆರೋಗ್ಯದಲ್ಲಿ ಯಾವುದೇ ಏರುಪೇರು ಕಂಡುಬಂದಲ್ಲಿ ಕೂಡಲೇ ಸ್ಥಳೀಯ ಸರಕಾರಿ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸುವಂತೆ ಅವರು ಸೂಚನೆ ನೀಡಿದರು.

Also Read  ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್ ಅವರಿಗೆ ರಾಜ್ಯಮಟ್ಟದ ಎಕ್ಸಲೆನ್ಸ್ ಅವಾರ್ಡ್

ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್, ತಾ.ಪಂ. ಸದಸ್ಯ ಫಝಲ್ ಕೋಡಿಂಬಾಳ, ಗ್ರಾಮ ಪಂಚಾಯತ್ ಅದ್ಯಕ್ಷ ಬಾಬು ಮುಗೇರ, ತಾಲೂಕು ಆರೋಗ್ಯಾಧಿಕಾರಿ ಡಾ|ಅಶೋಕ್‍ಕುಮಾರ್ ರೈ, ಕಡಬ ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ|ಸುಚಿತ್ರಾ ರಾವ್, ಆರೋಗ್ಯ ಇಲಾಖಾ ಸಿಬಂದಿಗಳಾದ ತ್ರೇಸಿಯಮ್ಮ, ಅನ್ನಮ್ಮ, ಆಶಾ ಕಾರ್ಯಕರ್ತೆಯರಾದ ಆಶಾ, ಶಶಿಕಲಾ ಹಾಜರಿದ್ದರು. ಸ್ಥಳೀಯ ಮುಂದಾಳು ಮೋಹನ ಕೋಡಿಂಬಾಳ ಅವರು ಮಾಹಿತಿ ನೀಡಿದರು.

Also Read  ಮಂಗಳೂರು: ಪಿಯು ವಿದ್ಯಾರ್ಥಿಗೆ ಚೂರಿ ಇರಿತ ➤‌ ಗಂಭೀರ ಗಾಯ

error: Content is protected !!
Scroll to Top