ಡಿವೈಎಫ್ಐ ಮುಖಂಡನ ಮೇಲೆ ಹಲ್ಲೆ ಪ್ರಕರಣ ► ವೇಣೂರು ಠಾಣಾ ಹೆಡ್ ಕಾನ್ಸ್‌ಟೇಬಲ್ ಅಮಾನತು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಅ.20. ವಾಹನ ತಪಾಸಣೆಯ ನೆಪದಲ್ಲಿ ಡಿವೈಎಫ್‍ಐ ಮುಖಂಡ ರಿಯಾಝ್ ಮೇಲೆ ಹಲ್ಲೆ ನಡೆಸಿ ಅಮಾನವೀಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವೇಣೂರು ಠಾಣೆಯ ಹೆಡ್ ಕಾನ್ಟೇಬಲ್ ತಾರಾನಾಥ್ ಅವರನ್ನು ಕೆಲಸದಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ.

ಡಿವೈಎಫ್‍ಐ ಸಂಘಟನೆಯ ಮುಖಂಡ ರಿಯಾಝ್ ಅಕ್ಟೋಬರ್ 02 ರಂದು ರಾತ್ರಿ ಮೂಡುಬಿದಿರೆಯಿಂದ ವೇಣೂರು ಮಾರ್ಗವಾಗಿ ತನ್ನ ಸಹೋದರನೊಂದಿಗೆ ಬೆಳ್ತಂಗಡಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ವಾಹನ ತಪಾಸಣೆಯ ನೆಪದಲ್ಲಿ ವೇಣೂರು ಪೊಲೀಸರು ರಿಯಾಝ್ ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿತ್ತು. ಪ್ರಕರಣದ ಬಗ್ಗೆ ಆಂತರಿಕ ತನಿಖೆ ಕೈಗೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ರವಿಕಾಂತೇಗೌಡ, ಹೆಡ್ ಕಾನ್ಸ್‌ಟೇಬಲ್ ತಾರಾನಾಥ್ ವಿರುದ್ಧ ತಪ್ಪು ಕಂಡುಬಂದ ಹಿನ್ನೆಲೆಯಲ್ಲಿ ಅಮಾನತುಗೊಳಿಸಿ ಆದೇಶಿಸಿದ್ದಾರೆ.

Scroll to Top