ನೆಕ್ಕಿಲಾಡಿ ಪಿಡಿಒ ಚಂದ್ರಾವತಿಯವರ ವರ್ಗಾವಣೆಗೆ ಹುನ್ನಾರ ► ಕೆಲ ಗ್ರಾ.ಪಂ. ಸದಸ್ಯರ ನಡೆಗೆ ಗ್ರಾಮಸ್ಥರ ಆಕ್ರೋಶ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ.13. ಕಾನೂನು ಉಲ್ಲಂಘಿಸಿ ತಮ್ಮ ಕೆಲಸ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ 34ನೇ ನೆಕ್ಕಿಲಾಡಿ ಗ್ರಾ.ಪಂ. ಪ್ರಭಾರ ಪಿಡಿಒ ಚಂದ್ರಾವತಿಯವರನ್ನು ಇಲ್ಲಿಂದ ಎತ್ತಂಗಡಿ ನಡೆಸುವ ಪ್ರಯತ್ನ ಪಂಚಾಯತ್‍ನ ಕೆಲ ಸದಸ್ಯರಿಂದಲೇ ನಡೆಯುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದ್ದು, ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

34ನೇ ನೆಕ್ಕಿಲಾಡಿ ಗ್ರಾ.ಪಂ. ಕಾರ್ಯದರ್ಶಿಯಾಗಿದ್ದ ರಾಮಣ್ಣರವರು ಅನಾರೋಗ್ಯದ ಮೇಲೆ ರಜೆಯಲ್ಲಿ ತೆರಳಿದ್ದರು. ಬಳಿಕ ಅವರನ್ನು ನೆಟ್ಟಣಿಗೆ ಮುಡ್ನೂರು ಗ್ರಾ.ಪಂ.ನ ಕಾರ್ಯದರ್ಶಿಯಾಗಿ ನಿಯೋಜಿಸಲಾಗಿತ್ತು. 34ನೇ ನೆಕ್ಕಿಲಾಡಿ ಗ್ರಾ.ಪಂ.ನ ಕಾರ್ಯದರ್ಶಿಯಾಗಿದ್ದ ಸಂದರ್ಭ ನೀರಿನ ಬಿಲ್‍ಗಳನ್ನು ದುರುಪಯೋಗಪಡಿಸಿಕೊಂಡ ಆರೋಪವೂ ಇವರ ಮೇಲಿತ್ತು. ಇನ್ನೊಂದೆಡೆ 34ನೇ ನೆಕ್ಕಿಲಾಡಿಗೆ ಪಿಡಿಓ ಆಗಿ ಜಯಪ್ರಕಾಶ್ ಅವರನ್ನು ನಿಯೋಜಿಸಲಾಗಿತ್ತು. ಬಳಿಕ ಅವರೂ ರಜೆಯ ಮೇಲೆ ತೆರಳಿದ ಬಳಿಕ ಬಜತ್ತೂರು ಗ್ರಾ.ಪಂ.ನ ಕಾರ್ಯದರ್ಶಿಯಾಗಿದ್ದ ಚಂದ್ರಾವತಿ ಅವರನ್ನು 34ನೇ ನೆಕ್ಕಿಲಾಡಿ ಗ್ರಾ.ಪಂ.ನ ಪ್ರಭಾರ ಪಿಡಿಓ ಆಗಿ ನಿಯೋಜಿಸಲಾಗಿತ್ತು. ಚಂದ್ರಾವತಿಯವರು ದಕ್ಷ, ನಿಷ್ಠಾವಂತ ಅಧಿಕಾರಿಯಾಗಿದ್ದು, ಕಾನೂನು ಉಲ್ಲಂಘನೆಗೆ ಅವಕಾಶ ಕೊಡುತ್ತಿರಲಿಲ್ಲ. ಈ ಮೊದಲು ಬೇರೆ ಅಧಿಕಾರಿಗಳಿದ್ದಾಗ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದ ಗ್ರಾ.ಪಂ.ನ ಒಂದಿಬ್ಬರು ಸದಸ್ಯರಿಗೆ ಇಲ್ಲಿಗೆ ಚಂದ್ರಾವತಿಯವರನ್ನು ನಿಯೋಜಿಸಿದ್ದು ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ಇದೇ ಕಾರಣಕ್ಕೆ ಅವರನ್ನು ಇಲ್ಲಿಂದ ವರ್ಗಾಯಿಸಲು ರಾಜಕೀಯ ವಲಯದಲ್ಲಿ ತೀವ್ರ ಕಸರತ್ತು ನಡೆಸಲಾಗಿತ್ತು. ಅಲ್ಲದೇ, ಇಲ್ಲಿಗೆ ಮತ್ತೆ ರಾಮಣ್ಣ ಅವರನ್ನೇ ನಿಯೋಜಿಸಲು ತೆರೆಮರೆಯಲ್ಲಿ ಪ್ರಯತ್ನ ಸಾಗಿತ್ತು. ಇದು ಈಗ ಫಲ ನೀಡುವ ಲಕ್ಷಣಗಳು ಗೋಚರಿಸಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.

Also Read  ಪುತ್ತೂರು: ಕಾರು ಹಾಗು ಓಮ್ನಿ ನಡುವೆ ಢಿಕ್ಕಿ

ಚಂದ್ರಾವತಿಯವರ ವರ್ಗಾವಣೆಗೆ ಕಾಂಗ್ರೆಸ್ ಪಕ್ಷದ ಉತ್ತಮ ನಂಟು ಹೊಂದಿರುವ ಗ್ರಾ.ಪಂ. ಸದಸ್ಯರೋರ್ವರು ಹಲವು ಬಾರಿ ಬೆಂಗಳೂರಿಗೆ ಓಡಾಡಿದ್ದು, ಇದೀಗ ಪ್ರಭಾರ ಪಿಡಿಓ ಚಂದ್ರಾವತಿ ಅವರನ್ನು ವರ್ಗಾಯಿಸಲು ದ.ಕ. ಜಿಲ್ಲಾ ಉಸ್ತುವಾರಿ ಸಚಿವರ ಪತ್ರವನ್ನು ತಂದು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದೆರಡು  ದಿನದಲ್ಲಿಯೇ ಚಂದ್ರಾವತಿಯವರ ವರ್ಗಾವಣೆಯ ಆದೇಶ ತಾ.ಪಂ. ಕಾರ್ಯನಿರ್ವಹಣಾಧಿಕಾರಿಯಿಂದ ಬರಲಿದ್ದು, ಇಲ್ಲಿಗೆ ಕಾರ್ಯದರ್ಶಿಯಾಗಿ ರಾಮಣ್ಣ ಅವರು ನಿಯೋಜನೆಗೊಳ್ಳಲಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿದ್ದ 34ನೇ ನೆಕ್ಕಿಲಾಡಿ ಗ್ರಾ.ಪಂ. ಕೆಲ ಸದಸ್ಯರ ಸ್ವಾರ್ಥಕ್ಕಾಗಿ ಮತ್ತೆ ಅಧಃಪತನದತ್ತ ಸಾಗಲಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Also Read  ಎಂಡಿಎಂಎ ಮಾದಕ ವಸ್ತು ಮಾರಾಟ..!  ಇಬ್ಬರು ಆರೋಪಿಗಳ ಅರೆಸ್ಟ್..! 

ಚಂದ್ರಾವತಿಯವರು ದಕ್ಷ ಅಧಿಕಾರಿ. ಅವರ ಎಲ್ಲಾ ನಡೆಗಳು ಕಾನೂನು ಪರಿಧಿಯೊಳಗಡೆಯೇ ನಡೆಯುತ್ತಿತ್ತು. ಅವರು ಬಂದ ಬಳಿಕ ಅಭಿವೃದ್ಧಿಯ ದೃಷ್ಟಿಯಲ್ಲಿ ಗ್ರಾ.ಪಂ. ಸಾಕಷ್ಟು ಸುಧಾರಿಸಿತ್ತು. ಪಾರದರ್ಶಕವಾಗಿ ಸಾರ್ವಜನಿಕ ಕೆಲಸ ಕಾರ್ಯಗಳು ನಡೆಯುತ್ತಿತ್ತು. ಆದರೆ ತಮ್ಮ ಕಾನೂನು ಬಾಹಿರ ಕೆಲಸವಾಗುತ್ತಿಲ್ಲ ಅನ್ನೋ ಕಾರಣಕ್ಕಾಗಿ ಅವರ ವರ್ಗಾವಣೆಗೆ ಕೆಲ ಗ್ರಾ.ಪಂ. ಸದಸ್ಯರೇ ಹುನ್ನಾರ ನಡೆಸುತ್ತಿರುವುದು ಖಂಡನೀಯ. ಪಂಚಾಯತ್ ಎನ್ನುವುದು ಸ್ಥಳೀಯ ಸರಕಾರವಿದ್ದಂತೆ. ಗ್ರಾಮದ ಅಭಿವೃದ್ಧಿಯೇ ಇದರ ಧ್ಯೇಯವಾಗಬೇಕೇ ಹೊರತು ರಾಜಕೀಯ ಕಸರತ್ತುಗಳಿಗೆ ಇದು ವೇದಿಕೆಯಾಗಬಾರದು. ಆದ್ದರಿಂದ ದಕ್ಷ ಅಧಿಕಾರಿಗಳನ್ನು ವರ್ಗಾವಣೆಗೊಳಿಸುವಂತ ಕಲುಷಿತ ರಾಜಕಾರಣವನ್ನು ಯಾವುದೇ ಕಾರಣಕ್ಕೂ ಗ್ರಾಮಸ್ಥರಾದ ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ಎಲ್ಲರೊಂದಿಗೆ ಚರ್ಚಿಸಿ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು.

– ಜತೀಂದ್ರ ಶೆಟ್ಟಿ
ಅಧ್ಯಕ್ಷರು, ‘ನಮ್ಮೂರು- ನೆಕ್ಕಿಲಾಡಿ’

error: Content is protected !!
Scroll to Top