ಕಂದಾಯ ಹಾಗೂ ಪೊಲೀಸ್ ಇಲಾಖೆಯಿಂದ ದಲಿತರಿಗೆ ಅನ್ಯಾಯದ ಆರೋಪ ► ಅ.18 ರಂದು ಕಡಬ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಅ.01. ಕಡಬ ತಾಲೂಕು ಕಂದಾಯ ಇಲಾಖೆ ಹಾಗೂ ಪೋಲೀಸ್ ಇಲಾಖೆಯಿಂದ ದಲಿತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಕಡಬ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಅ.18 ರಂದು ಕಂದಾಯ ಇಲಾಖೆಯ ಕಚೇರಿ ಹಾಗೂ ಪೋಲೀಸ್ ಠಾಣೆಯ ಎರಡು ಕಡೆ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ವಸಂತ ಕುಬಲಾಡಿ ಹೇಳಿದರು.

ಅವರು ಸೆ.30ರಂದು ಕಡಬ ಅಂಬೇಡ್ಕರ್ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ದಲಿತರಿಗೆ ಅನ್ಯಾಯವಾಗುತ್ತಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. ದಲಿತರನ್ನು ಕಡೆಗಣಿಸುತ್ತಿರುವ ಪೋಲೀಸ್ ಠಾಣೆಯ ಎದುರು ಬೆಳಿಗ್ಗೆ 10.00 ಗಂಟೆಗೆ ಹಾಗೂ ತಹಶಿಲ್ದಾರ್ ಕಛೇರಿ ಎದುರು ಮಧ್ಯಾಹ್ನ 12.00 ಗಂಟೆಗೆ ಎರಡು ಕಡೆ ಪ್ಯತ್ಯೇಕವಾಗಿ ಪ್ರತಿಭಟನೆ ಸಲ್ಲಿಸಿ ಎಚ್ಚರಿಸುವ ಕೆಲಸ ಮಾಡಲಾಗುವುದು ಎಂದರು. ಕಡಬ ಪೇಟೆಯ ಒಂದು ಭಾಗದಲ್ಲಿ ದಲಿತರ ಪಟ್ಟಾಸ್ಥಳವನ್ನು ಕಂದಾಯ ಅಧಿಕಾರಿಗಳು, ಹಣದ ಆಸೆಗೆ ಬಿದ್ದು ಮೇಲ್ವರ್ಗದವರಿಗೆ ವಿಂಗಡನೆ ಮಾಡಿಕೊಟ್ಟು ದಲಿತರಿಗೆ ಅನ್ಯಾಯ ಮಾಡಿದ್ದಾರೆ. ದಲಿತರು ಸೇರಿದಂತೆ ಇತರ ವರ್ಗದ ಬಡಜನರಿಗೆ 94ಸಿ ಯಲ್ಲಿ ಸಮರ್ಪಕವಾಗಿ ಹಕ್ಕು ಪತ್ರ ನೀಡುತ್ತಿಲ್ಲ, ಅರ್ಜಿ ಸಲ್ಲಿಸಿ ಕಾನೂನುಬದ್ದವಾಗಿ ಅರ್ಹತೆ ಇದ್ದರೂ ಅಂತವರನ್ನು ಹಣಕ್ಕಾಗಿ ಪೀಡಿಸಲಾಗುತ್ತಿದೆ, ವಿನಾಕಾರಣ ಕಂದಾಯ ಇಲಾಖಾ ಕಛೇರಿಗಳಿಗೆ ಅಲೆದಾಟ ಮಾಡುವಂತೆ ಅಧಿಕಾರಿಗಳು ಮಾಡುತ್ತಿದ್ದಾರೆ. ಹಣ ನೀಡಿದ ಶ್ರೀಮಂತರಿಗೆ ಕಾನೂನುಬಾಹಿರವಾಗಿ ಹಕ್ಕುಪತ್ರ ನೀಡಿದ ಅನೇಕ ಉದಾಹರಣೆಗಳಿವೆ, ಮನೆ ಎಲ್ಲೋ ಜಾಗ ಎಲ್ಲೋ ಇದ್ದ ಅನೇಕ ಕಡತಗಳನ್ನು ಹಣ ಪಡೆದು ಹಕ್ಕು ಪತ್ರ ನೀಡಲಾಗಿದೆ. ಬ್ರೋಕರ್‍ಗಳ ಹಾವಳಿಯಿಂದ ಸಾಮಾನ್ಯ ಜನ ಕಂದಾಯ ಇಲಾಖೆಗೆ ಹೋಗುವಂತಿಲ್ಲ. ಎಲ್ಲವನ್ನೂ ಬ್ರೋಕರ್‍ಗಳ ಮೂಲಕ ವ್ಯವಹಾರ ನಡೆಸುತ್ತಿರುವ ಕಂದಾಯ ಇಲಾಖೆ ಒಂದು ಕಳ್ಳರ ಸಂತೆಯಾಗಿದೆ. ದಲಿತರಿಗಂತು ಕಂದಾಯ ಇಲಾಖಾಧಿಗಳಿಂದ ಆಗುತ್ತಿರುವ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ. ಅರ್ಹತೆಯಿದ್ದರೂ ಎಲ್ಲದಕ್ಕೂ ಮೀನಾಮೇಷ ಎನಿಸಲಾಗುತ್ತಿದೆ. ಡಿಸಿ ಮನ್ನಾ ಭೂಮಿಗೆ ಸಂಬಂಧಿಸಿದಂತೆ ಪ್ರತೀ ತಾಲೂಕು ಮಟ್ಟದಲ್ಲಿ ಟಾಸ್ಕ್ ಪೋರ್ಸ್ ಸಮಿತಿಯಿದೆ, ಕಡಬ ಈಗ ತಾಲೂಕು ಕೇಂದ್ರವಾಗಿ ಘೋಷಣೆಯಾಗಿರುವುದರಿಂದ ಇಲ್ಲಿ ಪ್ರತ್ಯೇಕ ಟಾಸ್ಕ್ ಪೋರ್ಸ್ ಸಮಿತಿ ಅಸ್ಥಿತ್ವಕ್ಕೆ ಬರಬೇಕು ಎಂದು ಅಗ್ರಹಿಸಿದರು.

Also Read  ಮಾನಸಿಕ ಅಸ್ವಸ್ಥರ ಮೇಲೆ ದಯೆ ಇರಲಿ- ನ್ಯಾಯಾಧೀಶೆ ಶೋಭಾ ಬಿ.ಜಿ

ಅಲ್ಲದೆ ಕಡಬ ಪೋಲೀಸ್ ಠಾಣೆಯಲ್ಲಿ ದಲಿತರಿಗೆ ಸರಿಯಾದ ನ್ಯಾಯ ದೊರೆಯುತ್ತಿಲ್ಲ, ಇಲಾಖೆಯಿಂದ ಎಸ್‍ಸಿ ಎಸ್‍ಟಿ ಕುಂದುಕೊರತೆಗಳ ಸಭೆಯನ್ನು ಸಮಯಕ್ಕೆ ಸರಿಯಾಗಿ ಕರೆಯದೆ ದಲಿತರ ಸಮಸ್ಯೆಗಳನ್ನು ಚರ್ಚಿಸಲು ಸಾಧ್ಯವಾಗುತ್ತಿಲ್ಲ. ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಗಳ ಪರ ಪೋಲೀಸರು ಮೃದುಧೋರಣೆ ತಳೆಯುತ್ತಿದ್ದಾರೆ. ದಲಿತ ದೌರ್ಜನ್ಯ ಎಸಗಿರುವ ಆರೋಪಿಗಳಿಗೆ ರಾಜಾಶ್ರಯ ನೀಡಲಾಗುತ್ತಿದೆ, ಆರೋಪಿಗಳನ್ನು ಠಾಣೆಯ ವಾಹನ ಇದ್ದರೂ ಆರೋಪಿಗಳ ವಾಹನದಲ್ಲಿ ಕುಳ್ಳರಿಸಿಕೊಂಡು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುವ ಕೆಲಸ ಕಡಬ ಪೋಲೀಸರಿಂದ ಆಗುತ್ತಿದೆ. ದಲಿತರು ದೂರು ನೀಡಿದರೆ ದಲಿತರ ವಿರುದ್ಧ ಇರುವ ಜನರಪರವಾಗಿ ಪೋಲೀಸರು ವಕಾಲತ್ತುವಹಿಸುತ್ತಿರುವುದು ನಮಗೆ ನೋವು ತಂದಿದೆ. ಇದರ ವಿರುದ್ಧ ನಾವೆಲ್ಲಾ ದಲಿತರಪರ ಸಂಘಟನೆಗಳು ಒಂದಾಗಿ ಒಕ್ಕೂಟ ರಚಿಸಿಕೊಂಡು ಒಗ್ಗಟ್ಟಿನಿಂದ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಇಲಾಖೆಗಳಿಗೆ ಬಿಸಿಮುಟ್ಟಿಸುವ ಉದ್ದೇಶದಿಂದ ಅ.18 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು. ದಲಿತ ಮುಖಂಡ ಗುರುವಪ್ಪ ಕಲ್ಲುಗುಡ್ಡೆ ಮಾತನಾಡಿ ಕುಟ್ರುಪ್ಪಾಡಿ ಹೊಸಮಠದಲ್ಲಿ ದಲಿತ ಮಹಿಳೆಯವರ ಅಂಗಡಿಗೆ ಬೆಂಕಿ ಹಚ್ಚಿ ನಾಶ ಮಾಡಿರುವ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೋಲೀಸರು ವಿಫಲರಾಗಿದ್ದಾರೆ. ಈ ಪ್ರಕರಣದಲ್ಲಿ ತಾರತಮ್ಯನೀತಿಯನ್ನು ಅನುಸರಿಸಿದ್ದಾರೆ. ಇದರಲ್ಲಿ ಕೂಡಾ ದಲಿತರಿಗೆ ತೀರಾ ಅನ್ಯಾಯವಾಗಿದೆ ಇದು ಖಂಡನೀಯ ಎಂದರು. ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಉಪಾಧ್ಯಕ್ಷರಾದ ಉಮೇಶ್ ಕೋಡಿಂಬಾಳ, ಶಶಿಧರ ಬೊಟ್ಟಡ್ಕ, ಸದಸ್ಯರಾದ ರಾಜು ಗೋಳಿಯಡ್ಕ, ರಾಜರತ್ನಂ, ಆನಂದ ಹೊಸ್ಮಠ, ಶೇಖರ ಮರುವಂತಿಲ, ಶೇಖರ ಮರುವಂತಿಲ, ಕುಶಲ ದೋಂತಿಲಡ್ಕ, ಸತೀಶ್ ದೋಂತಿಲಡ್ಕ, ಲೋಹಿತ್ ಬನಾರಿ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಅಣ್ಣಿ ಎಲ್ತಿಮಾರ್ ಸ್ವಾಗತಿಸಿ, ವಂದಿಸಿದರು.

Also Read  ಸುಬ್ರಹ್ಮಣ್ಯ: ಕುಮಾರಧಾರ ಸ್ನಾನಘಟ್ಟ ಮತ್ತೆ ಮುಳುಗಡೆ

error: Content is protected !!
Scroll to Top