(ನ್ಯೂಸ್ ಕಡಬ) newskadaba.com ಕಡಬ, ಸೆ.30. ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಪಾನಮತ್ತರಾಗಿ ಆಗಮಿಸಿದ ನಾಲ್ವರು ಕಡಬ ಪೊಲೀಸ್ ಉಪ ನಿರೀಕ್ಷಕರಿಗೆ ಹಾಗೂ ಸಿಬ್ಬಂದಿಗಳಿಗೆ ಹಲ್ಲೆ ನಡೆಸಿದ ಘಟನೆ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಚಾಕೋಟೆಕೆರೆ ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ.
ಮರ್ಧಾಳದ ಚಾಕೋಟೆಕೆರೆಯಲ್ಲಿರುವ
ಮದ್ಯದಂಗಡಿಯ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಕಡಬ ಠಾಣಾ ಉಪ ನಿರೀಕ್ಷಕ ಪ್ರಕಾಶ್ ದೇವಾಡಿಗ, ಸಿಬ್ಬಂದಿಗಳಾದ ಪುಟ್ಟಸ್ವಾಮಿ, ಶಿವಪ್ರಸಾದ್, ಶ್ರೀಶೈಲ, ಗೃಹರಕ್ಷಕ ದಳದ ಸಿಬ್ಬಂದಿ ಯೋಗೀಶ್ ಮದ್ಯಪಾನ ಮಾಡಿರುವುದನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಪಾನಮತ್ತರಾಗಿ ಆಗಮಿಸಿದ ನೂಜಿಬಾಳ್ತಿಲ ನಿವಾಸಿಗಳಾದ ರತ್ನಾಕರ, ಹರೀಶ, ದಿನೇಶ, ಪ್ರಶಾಂತ್, ಮತ್ತಿತರರು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಲ್ಲದೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಪೊಲೀಸ್ ವಾಹನದ ಗಾಜನ್ನು ಪುಡಿಗೈದು ಹಾನಿಗೊಳಿಸಿದ್ದು, ಮದ್ಯಪಾನ ತಪಾಸಣೆಯ ಸಲಕರಣೆಯನ್ನು ಧ್ವಂಸಗೈದಿದ್ದಾರೆ.
ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಪುಟ್ಟಸ್ವಾಮಿಯವರ ಹಲ್ಲು ಹಾಗೂ ಶ್ರೀಶೈಲ ರವರ ಹಣೆಗೆ ಏಟಾಗಿದೆ. ಗಾಯಾಳುಗಳನ್ನು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಲ್ಲಿ ರತ್ನಾಕರ ಹಾಗೂ ಹರೀಶ್ ಎಂಬವರು ಸೈನಿಕರಾಗಿದ್ದು, ರಜೆಯಲ್ಲಿ ಊರಿಗೆ ಆಗಮಿಸಿದ್ದರೆನ್ನಲಾಗಿದೆ. ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಗೋಪಾಲ್ ನಾಯ್ಕ್ ಭೇಟಿ ನೀಡಿದ್ದಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.