ರಾಜ್ಯದ ಮರಳು ನೀತಿಯ ವಿರುದ್ಧ ಸೆ.27 ರಂದು ಕಡಬದಲ್ಲಿ ಬಿಜೆಪಿಯಿಂದ ಪ್ರತಿಭಟನೆ ► ತಿಂಗಳೊಳಗೆ ಅವಕಾಶ ನೀಡದಿದ್ದಲ್ಲಿ ‘ನಮ್ಮ ನದಿ – ನಮ್ಮ ಹಕ್ಕು’ ನೆಲೆಯಲ್ಲಿ ಸಾರ್ವಜನಿಕ ಮರಳುಗಾರಿಕೆ

(ನ್ಯೂಸ್ ಕಡಬ) newskadaba.com ಕಡಬ, ಸೆ.25. ರಾಜ್ಯದಲ್ಲಿರುವ ಜನ ವಿರೋಧಿ ಮರಳು ನೀತಿಯ ವಿರುದ್ಧ ಸೆಪ್ಟೆಂಬರ್ 27 ಗುರುವಾರದಂದು ಕಡಬ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಕೃಷ್ಣ ಶೆಟ್ಟಿ ಕಡಬ ತಿಳಿಸಿದ್ದಾರೆ.

ಅವರು ಮಂಗಳವಾರದಂದು ಕಡಬ ಬಿಜೆಪಿ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಸರಕಾರವು ಮರಳು ನೀತಿಯನ್ನು ರೂಪಿಸದೆ ಇರುವುದರಿಂದಾಗಿ ಬಡವರು ವಸತಿ ಯೋಜನೆಯಲ್ಲಿ ಮನೆ ಕಟ್ಟಿಕೊಳ್ಳಲಾಗದೆ ಬೀದಿಗೆ ಬಿದ್ದಿದ್ದಾರೆ. ಒಂದು ಲೋಡು ಮರಳಿಗೆ 30 ಸಾವಿರ ರೂ. ದಾಟಿದ್ದು, ಸರಕಾರ ಮತ್ತು ಉಸ್ತುವಾರಿ ಸಚಿವರು ಗಾಢ ನಿದ್ದೆಯಲ್ಲಿದ್ದಾರೆ. ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದು ನೂರು ದಿನಗಳು ಕಳೆದಿದ್ದರೂ, ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದೆ ಜನವಿರೋಧಿ ನೀತಿಯನ್ನು ಮುಂದುವರಿಸಿದೆ ಎಂದು ಲೇವಡಿ‌ ಮಾಡಿದರು. ಈ ಹಿಂದೆ ಯಡಿಯೂರಪ್ಪರವರ ನೇತೃತ್ವದ ಬಿಜೆಪಿ ಸರಕಾರ ಇದ್ದಂತಹ ಸಂದರ್ಭದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸರಳವಾದಂತಹ ಮರಳು ನೀತಿಯನ್ನು ಜಾರಿಗೆ ತಂದಿದ್ದರಿಂದಾಗಿ ಜನಸಾಮಾನ್ಯರಿಗೆ ಅತೀ ಕಡಿಮೆ ಬೆಲೆಯಲ್ಲಿ ಮರಳು ದೊರೆಯುತ್ತಿತ್ತು. ಅಂತಹುದೇ ಸರಳ ನೀತಿಯನ್ನು ತಕ್ಷಣವೇ ಜಾರಿಗೆ ತಂದು ಹಣ ಮಾಡುವ ದಂಧೆಯನ್ನು ನಿಲ್ಲಿಸಬೇಕೆಂದು ಆಗ್ರಹಿಸಿದ ಕೃಷ್ಣ ಶೆಟ್ಟಿಯವರು ಸರಕಾರದ ಮರಳು ನೀತಿಯನ್ನು ವಿರೋಧಿಸಿ ಸೆಪ್ಟೆಂಬರ್ 27 ರಂದು ಕಡಬ ಬಿಜೆಪಿ ಕಛೇರಿಯ ಮುಂಭಾಗದಿಂದ ಮೆರವಣಿಗೆ ಹೊರಟು ಕಡಬ ತಹಶೀಲ್ದಾರ್ ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಲಿದೆ ಎಂದರು.

Also Read  ಭೀಕರ ರಸ್ತೆ ಅಪಘಾತ ➤‌ ಮೂವರು ಮೃತ್ಯು

ತಿಂಗಳೊಳಗೆ ಸರಕಾರವು ಮುಕ್ತವಾಗಿ ಮರಳು ತೆಗೆಯಲು ಅವಕಾಶ ಕಲ್ಪಸದೆ ಇದ್ದಲ್ಲಿ ನವೆಂಬರ್‌ನಲ್ಲಿ ‘ನಮ್ಮ ನದಿ – ನಮ್ಮ ಹಕ್ಕು’ ಎಂಬ ನೆಲೆಯಲ್ಲಿ ಸಾರ್ವಜನಿಕವಾಗಿ ನದಿ, ತೊರೆಗಳಿಂದ ಮರಳು ತೆಗೆಯುವ ಮೂಲಕ ಸರಕಾರದ ಅನೀತಿಯ ವಿರುದ್ಧ ಹೋರಾಟ ನಡೆಸಲಿದ್ದೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಕಡಬ ಶಕ್ತಿ ಕೇಂದ್ರದ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್, ಎಪಿಎಂಸಿ ನಿರ್ದೇಶಕಿ ಪುಲಸ್ತ್ಯಾ ರೈ, ಬಿಜೆಪಿ ಮುಖಂಡ ಸತೀಶ್ ನಾಯಕ್, ಬಿಜೆಪಿ ಕಡಬ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎನ್.ಕೆ., ಸುಳ್ಯ ಮಂಡಲ ಬಿಜೆಪಿ ಅಲ್ಪಸಂಖ್ಯಾತ ಮೋರ್ಛಾದ ಕಾರ್ಯದರ್ಶಿ ಫಯಾಝ್ ಕೆನರಾ ಉಪಸ್ಥಿತರಿದ್ದರು.

Also Read  ಪದವಿ ಕಾಲೇಜುಗಳು ‌ಅಕ್ಟೋಬರ್ ಒಂದರಿಂದ ಪುನರಾರಂಭ..!

error: Content is protected !!
Scroll to Top