ಕೊಳಚೆ ನೀರಿನ ಪೈಪು ಒಡೆದು ರಸ್ತೆಯಲ್ಲೇ ಹರಿಯುತ್ತಿರುವ ತ್ಯಾಜ್ಯ ನೀರು ► ಕಡಬದ ವರ್ತಕರಿಂದ ಗ್ರಾಮ ಪಂಚಾಯತ್ ಗೆ ಮುತ್ತಿಗೆ

(ನ್ಯೂಸ್ ಕಡಬ) newskadaba.com ಕಡಬ, ಸೆ.24. ಇಲ್ಲಿನ ಮುಖ್ಯ ಪೇಟೆಯಲ್ಲಿ ಕೊಳಚೆ ನೀರಿನ ಪೈಪ್ ಒಡೆದಿರುವುದನ್ನು ಸರಿಪಡಿಸದೇ ಇರುವ ಗ್ರಾಮ ಪಂಚಾಯತ್ ನಿರ್ಲಕ್ಷ್ಯದ ವಿರುದ್ಧ ತೊಂದರೆಗೊಳಗಾಗಿರುವ ವರ್ತಕರು ಕಡಬ ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿದ ಘಟನೆ ಸೋಮವಾರದಂದು ನಡೆದಿದೆ.

ಕಳೆದ ಸುಮಾರು ಆರು ತಿಂಗಳಿನಿಂದ ಮುಖ್ಯ ಪೇಟೆಯಲ್ಲಿ ಅಳವಡಿಸಲಾಗಿದ್ದ ಕೊಳಚೆ ನೀರು ಹರಿಯುವ ಪೈಪ್ ಒಡೆದು ಹೋಗಿದ್ದು, ಈ ಬಗ್ಗೆ ಹಲವು ಬಾರಿ ಕಡಬ ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಉಂಟಾಗಿಲ್ಲ. ತೀವ್ರ ದುರ್ವಾಸನೆಯಿಂದಾಗಿ ಅಂಗಡಿಯಲ್ಲಿ ಕುಳಿತುಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಗ್ರಾಹಕರು ಕೂಡಾ ಆ ಪರಿಸರದ ಅಂಗಡಿಗಳಿಗೆ ಬಾರದೆ ಇರುವುದರಿಂದ ವ್ಯಾಪಾರವಿಲ್ಲದೆ ನಷ್ಟ ಉಂಟಾಗುತ್ತಿದೆ. ಕೊನೆಗೆ ತಾಳ್ಮೆ ಕಳೆದುಕೊಂಡ ಕಡಬದ ಕೆಲವು ವರ್ತಕರು ಸೋಮವಾರದಂದು ಕಡಬ ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

Also Read  ಬಲ್ಯ: ಕಾರುಗಳೆರಡರ ಮಧ್ಯೆ ಮುಖಾಮುಖಿ ಢಿಕ್ಕಿ ➤ ಇಬ್ಬರಿಗೆ ಗಾಯ

ಎಷ್ಟು ದಿನಗಳಲ್ಲಿ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುತ್ತೀರಿ ಎಂದು ಲಿಖಿತವಾಗಿ ಕೊಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದು, ಅದಕ್ಕೆ ಪಿಡಿಓ ನಿರಾಕರಿಸಿದಾಗ ಪಂಚಾಯತ್ ಒಳಗಡೆ ಕುಳಿತುಕೊಂಡು ಪ್ರತಿಭಟನೆ ಮುಂದುವರಿಸಿದರು. ಮುಂದಿನ ಎರಡು ದಿನಗಳ ಒಳಗೆ ತಾತ್ಕಾಲಿಕ ವ್ಯವಸ್ಥೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಲಾಗುವುದು. ಶಾಶ್ವತ ಪರಿಹಾರಕ್ಕೆ ಲೋಕೋಪಕಾರಿ ಇಲಾಖೆ ಕ್ರಮ ತೆಗೆದುಕೊಳ್ಳಬೇಕಿದ್ದು, ಅದರ ಮೊತ್ತವನ್ನು ಕಡಬ ಗ್ರಾಮ ಪಂಚಾಯತ್ ನಿಂದ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕಡಬ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಭರವಸೆ ನೀಡಿದ್ದರಿಂದಾಗಿ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.

error: Content is protected !!
Scroll to Top