ಕಡಬ: ಒಂಟಿ ಮಹಿಳೆಯ ಕೊಲೆಗೆ 5 ವರ್ಷ ► ಇನ್ನೂ ಪತ್ತೆಯಾಗದ ಹಂತಕರು – ಫಲ ನೀಡದ ಪೊಲೀಸರ ಪ್ರಯತ್ನ

(ನ್ಯೂಸ್ ಕಡಬ) newskadaba.com ಕಡಬ, ಸೆ.21. ಇಲ್ಲಿಗೆ ಸಮೀಪದ ನೂಜಿಬಾಳ್ತಿಲ ಗ್ರಾಮದ ಕೋರಿಜಾಲು ನಿವಾಸಿ ವೃದ್ಧೆ ಚಿನ್ನಮ್ಮ ಅವರ ಕೊಲೆ ನಡೆದು 5 ವರ್ಷ ಕಳೆದರೂ ಕೊಲೆಗಾರರನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಪೊಲೀಸರು ನಡೆಸುತ್ತಿರುವ ಪ್ರಯತ್ನಕ್ಕೆ ಇನ್ನೂ ಯಶಸ್ಸು ಲಭಿಸಿಲ್ಲ.

ತನ್ನ ಮನೆಯಲ್ಲಿ ಒಂಟಿಯಾಗಿ ವಾಸವಿದ್ದ 60 ವರ್ಷ ಪ್ರಾಯದ ವೃದ್ಧ ಮಹಿಳೆ ಚಿನ್ನಮ್ಮ ಅವರನ್ನು ಆ.28, 2013 ರಂದು ತಡರಾತ್ರಿ ಕತ್ತಿಯಿಂದ ಕಡಿದು ಕೊಲೆ ಮಾಡಲಾಗಿತ್ತು. ಮರುದಿನ ಸಂಜೆಯ ವೇಳೆಗೆ ಪ್ರಕರಣ ಬೆಳಕಿಗೆ ಬಂದಿತ್ತು. ಮೃತರ ಪತಿ ಹಲವು ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಮೂರು ಜನ ಮಕ್ಕಳಿದ್ದರೂ ಅವರ್ಯಾರು ಮನೆಯಲ್ಲಿ ಇಲ್ಲದೆ ಚಿನ್ನಮ್ಮ ಒಬ್ಬರೇ ಮನೆಯಲ್ಲಿ ಇದ್ದ ವೇಳೆ ಕೊಲೆ ನಡೆದಿದೆ. ಚಿನ್ನಮ್ಮ ತನ್ನಲ್ಲಿದ್ದ ಭೂಮಿಯನ್ನು ತನ್ನ ಮೂರು ಮಕ್ಕಳಿಗೆ ಹಂಚಿದ್ದು, ಸ್ವಲ್ಪ ಜಾಗವನ್ನು ತನ್ನಲ್ಲೇ ಉಳಿಸಿಕೊಂಡಿದ್ದರು. ಜಾಗದ ತಕರಾರಿಗೆ ಸಂಬಂಧಿಸಿದಂತೆ ಕೊಲೆ ನಡೆದಿರಬಹುದೇ ಎನ್ನುವ ಸಂಶಯ ಸಾರ್ವಜನಿಕ ವಲಯದಲ್ಲಿ ಮೂಡಿತ್ತು. ಕೊಲೆಗೆ ಬಳಸಲಾಗಿದೆ ಎನ್ನಲಾದ ರಕ್ತ ಮೆತ್ತಿಕೊಂಡಿದ್ದ ಕತ್ತಿಯೊಂದು ಮನೆಯ ಪಕ್ಕದ ರಬ್ಬರ್ ಮರದ ಬುಡದಲ್ಲಿ ಪತ್ತೆಯಾಗಿತ್ತು. ನಾಪತ್ತೆಯಾಗಿದೆ ಎಂದು ಸಂಶಯಿಸಲಾಗಿದ್ದ ಚಿನ್ನಮ್ಮ ಅವರ ಕತ್ತಿನಲ್ಲಿದ್ದ ಚಿನ್ನದ ಸರ ಅವರು ಮಲಗುತ್ತಿದ್ದ ಮಂಚದ ಬಳಿ ಬಳಿಕ ಪತ್ತೆಯಾಗಿತ್ತು.

Also Read  ಪಿ.ಎ ಇಂಜಿನಿಯರಿಂಗ್ ಕಾಲೇಜು ಅಧ್ಯಕ್ಷರಾದ ಇಬ್ರಾಹಿಂ ಹಾಜಿ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಸಂತಾಪ

ಪ್ರಕರಣಕ್ಕೆ ಸಂಬಂಧಪಟ್ಟಂತೆ ಮನೆಯ ಇತರ ಸದಸ್ಯರನ್ನು ವಿಚಾರಣೆಗೊಳಪಡಿಸಲಾಗಿತ್ತು. ಗುಮಾನಿಯ ಮೇಲೆ ಮೃತ ಮಹಿಳೆಯ ಜೊತೆ ನಿಕಟ ಸಂಪರ್ಕದಲ್ಲಿದ್ದ ಎನ್ನಲಾದ ಕೊಕ್ಕಡ ಮೂಲದ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು ತೀವ್ರವಾಗಿ ವಿಚಾರಣೆಗೊಳಪಡಿಸಿದ್ದರು. ಹಲವಾರು ಮಂದಿ ಸ್ಥಳೀಯರನ್ನು ವಶಕ್ಕೆ ಪಡೆದು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದರೂ ಕೊಲೆಗೆ ಸಂಬಂಧಿಸಿ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಕೊಲೆ ನಡೆದು ಕೆಲ ತಿಂಗಳ ಬಳಿಕ ನೂಜಿಬಾಳ್ತಿಲದ ತೆಗ್‍ರ್ ತುಳುಕೂಟದ ನೇತೃತ್ವದಲ್ಲಿ ಸಾರ್ವಜನಿಕರನ್ನು ಸೇರಿಸಿಕೊಂಡು ಕೊಲೆಗಾರರನ್ನು ಪತ್ತೆಮಾಡಬೇಕೆಂದು ಆಗ್ರಹಿಸಿ ಕಡಬದಲ್ಲಿ ರಸ್ತೆತಡೆ ನಡೆಸಲಾಗಿತ್ತು. ಕೆಲವು ಚರ್ಚುಗಳ ಧರ್ಮಗುರುಗಳು ಸೇರಿದಂತೆ ಸಾಕಷ್ಟು ಮಂದಿ ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಆದರೆ ಆ ಬಳಿಕ ಕಡಬ ಪರಿಸರದ ಮಹಿಳಾ ಪರ ಸಂಘಟನೆಗಳು ಹಾಗೂ ಸಾಮಾಜಿಕ ಹೋರಾಟಗಾರರು ಕೂಡ ಈ ಬಡಪಾಯಿ ವೃದ್ಧೆಯ ಹಂತಕರನ್ನು ಪತ್ತೆ ಮಾಡುವಂತೆ ಪೊಲೀಸರ ಮೇಲೆ ಒತ್ತಡ ಹೇರುವ ಯಾವುದೇ ಕಾರ್ಯ ಮಾಡಿಲ್ಲ.

Also Read  ಮೂಡಬಿದಿರೆ: ‘ಅಂತರಾಷ್ಟ್ರೀಯ ಯುವ ದಿನ’ ಆಚರಣೆ

ಇಲಾಖೆ ಎಲ್ಲಾ ಕೋನಗಳಿಂದ ತನಿಖೆ ನಡೆಸಿದೆ. ಚಿನ್ನಾಭರಣ ಅಥವಾ ದುಡ್ಡಿಗಾಗಿ ಈ ಕೊಲೆ ನಡೆದಿಲ್ಲ ಎನ್ನುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿತ್ತು. ಆದರೆ ಹಂತಕರ ಬಗ್ಗೆ ಯಾವುದೇ ಸ್ಪಷ್ಟ ಸುಳಿವುಗಳು ಲಭ್ಯವಾಗದೇ ಇರುವುದರಿಂದ ಪ್ರಕರಣವನ್ನು ಬೇಧಿಸಲು ಸಾಧ್ಯವಾಗಿಲ್ಲ. ಪ್ರಕರಣ ನಡೆದು 5 ವರ್ಷ ಕಳೆದಿರುವುದರಿಂದ ಪತ್ತೆಯಾಗದ ಪ್ರಕರಣವೆಂದು ಪರಿಗಣಿಸಲಾಗಿದೆ. ಆದರೂ ಪ್ರಕರಣದ ಬಗ್ಗೆ ನಿಖರವಾದ ಸುಳಿವುಗಳೇನಾದರೂ ಲಭ್ಯವಾದರೆ ತನಿಖೆ ಮತ್ತೆ ಮುಂದುವರಿಯಲಿದೆ.

-ಗೋಪಾಲ ನಾೈಕ್,  ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರು

error: Content is protected !!
Scroll to Top