(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ.11. ನಾಲ್ಕು ದಿನಗಳ ಹಿಂದೆ ತನ್ನ ಮನೆಯಲ್ಲೇ ಕೊಲೆಗೈಯಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಪಂಬೆತ್ತಾಡಿ ಗ್ರಾಮದ ಕಲ್ಚಾರು ಸುಬ್ರಹ್ಮಣ್ಯ ಭಟ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿರುವ ಪೊಲೀಸರು ಪ್ರಕರಣಕ್ಕೆ ತೆರೆ ಎಳೆದಿದ್ದಾರೆ.
ಸೆಪ್ಟೆಂಬರ್ 08 ರಂದು ಸುಬ್ರಹ್ಮಣ್ಯ ಭಟ್ ರವರ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಅವರ ಮನೆಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಪ್ರಕರಣದ ಆರೋಪಿ ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಕಲ್ಪಡ ನಿವಾಸಿ ಶೀನಪ್ಪ ಗೌಡ ಎಂಬವರ ಪುತ್ರ ಆಶಿತ್(19) ನನ್ನು ಬುಧವಾರದಂದು ಬಂಧಿಸಿದ್ದಾರೆ. ಬಂಧಿತ ಆರೋಪಿಯು ತನ್ನ ಸ್ನೇಹಿತರಾದ ವಸಂತ ಮತ್ತು ದೀಕ್ಷಿತ್ ರೊಂದಿಗೆ ಮೃತ ಸುಬ್ರಹ್ಮಣ್ಯ ಭಟ್ ರವರ ಮನೆಗೆ ಕಳೆದ ತಿಂಗಳಲ್ಲಿ ಎರಡು ದಿನ ಅಡಿಕೆ ಸುಲಿಯಲೆಂದು ತೆರಳಿದ್ದು, ಈ ಸಂದರ್ಭದಲ್ಲಿ ಆರೋಪಿ ಆಶಿತ್ ಮೃತ ವ್ಯಕ್ತಿಯ ಜೊತೆ ಪ್ರೀತಿಯಿಂದ ಮಾತನಾಡಿ ವಿಶ್ವಾಸ ಗಳಿಸಿದ್ದಾನೆ.
ಇದೇ ವಿಶ್ವಾಸದಲ್ಲಿ ಮೃತ ವ್ಯಕ್ತಿಯು ತನ್ನ ಮನೆಯಲ್ಲಿರುವ ಅಡಿಕೆಯನ್ನು ಮಾರಾಟ ಮಾಡಿ ಹಣ ತರುವಂತೆ ಆಶಿತ್ ನಲ್ಲಿ ತಿಳಿಸಿದ್ದು, ಒಬ್ಬಂಟಿಯಾಗಿರುವ ವೃದ್ದನನ್ನು ಕೊಂದರೆ ಮನೆಯಲ್ಲಿರುವ ಅಪಾರ ಪ್ರಮಾಣದ ಬೆಲೆ ಬಾಳುವ ಅಡಿಕೆಯನ್ನು ಮಾರಾಟ ಮಾಡಿ ಸುಲಭವಾಗಿ ಹಣ ಗಳಿಸಬಹುದೆಂದು ಆರೋಪಿಯು ದುರ್ಬುದ್ಧಿ ವಿನಿಯೋಗಿಸಿದ್ದಾನೆ. ಅದರಂತೆ ಆಗಸ್ಟ್ 27 ರಂದು ರಾತ್ರಿ ಒಬ್ಬನೇ ಹೋಗಿ ಅಡಿಕೆ ಮಾರಾಟ ಮಾಡುವ ವಿಚಾರದ ಬಗ್ಗೆ ಮಾತನಾಡುವಂತೆ ಮನೆಯ ಒಳಗೆ ಹೊಕ್ಕಿದ್ದು, ಮೃತ ವ್ಯಕ್ತಿಯೊಂದಿಗೆ ಮಾತನಾಡುತ್ತಾ ಹಿಂದಿನಿಂದ ಮರದ ತುಂಡಿನಿಂದ ತಲೆಗೆ ಹೊಡೆದು ಕೊಲೆ ಮಾಡಿ ಮೃತ ದೇಹವನ್ನು ಅಲ್ಲಿಯೇ ಇದ್ದ ರೂಮಿನಲ್ಲಿ ಕೂಡಿ ಹಾಕಿ ನಂತರ ಮನೆಯ ಮುಂದಿನ ಬಾಗಿಲನ್ನು ಒಳಗಿನಿಂದ ಮುಚ್ಚಿ ಹಿಂದಿನ ಬಾಗಿಲಿಗೆ ಬೀಗ ಹಾಕಿ ತೆರಳಿದ್ದಾನೆ.
ಮರುದಿನ ತನ್ನ ಸ್ನೇಹಿತರಾದ ವಸಂತ್ ಹಾಗೂ ದೀಕ್ಷಿತ್ ರವರನ್ನು ಕರೆದುಕೊಂಡು ಹೋಗಿ ಮೃತ ವ್ಯಕ್ತಿಯ ಜೊತೆ ಪೋನಿನಲ್ಲಿ ಮಾತನಾಡುವಂತೆ ಸ್ನೇಹಿತರನ್ನು ನಂಬಿಸಿ ಪಿಕಪ್ ವಾಹನದಲ್ಲಿ 12 ಕ್ವಿಂಟಾಲ್ ಅಡಿಕೆಯನ್ನು ತೆಗೆದುಕೊಂಡು ಹೋಗಿ ಮಾರಿದ್ದಾನೆ. ಪ್ರಕರಣದ ಜಾಡು ಹಿಡಿದ ಪೊಲೀಸರು ಖಚಿತ ವರ್ತಮಾನದ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೃತ್ಯ ನಡೆಸಿದ ಬಗ್ಗೆ ಒಪ್ಪಿಕೊಂಡಿದ್ದು, ಆತನನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ| ರವಿಕಾಂತೇಗೌಡ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಜಿತ್ ವಿ.ಜೆ. ಯವರ ನಿರ್ದೇಶನದಲ್ಲಿ ಪುತ್ತೂರು ಉಪ ವಿಭಾಗದ ಡಿವೈಎಸ್ಪಿ ಶ್ರೀನಿವಾಸ್ ರವರ ನೇತೃತ್ವದಲ್ಲಿ ಸುಳ್ಯ ವೃತ್ತ ನಿರೀಕ್ಷಕರಾದ ಸತೀಶ್ ಕುಮಾರ್, ಡಿ.ಸಿ.ಐ.ಬಿ ಪೊಲೀಸ್ ನಿರೀಕ್ಷಕರಾದ ಸುನೀಲ್ ವೈ. ನಾಯಕ್, ಬೆಳ್ಳಾರೆ ಪಿಎಸ್ಐ ಈರಯ್ಯ, ಸುಬ್ರಹ್ಮಣ್ಯ ಪಿಎಸ್ಐ ಗೋಪಾಲ್, ಸುಳ್ಯ ಪಿಎಸ್ಐ ಮಂಜುನಾಥ್, ಸಿಬ್ಬಂದಿಗಳಾದ ಎಎಸ್ಐ ಭಾಸ್ಕರ್, ಕೃಷ್ಣಯ್ಯ, ಕರುಣಾಕರ, ಹೆಡ್ ಕಾನ್ಸ್‌ಟೇಬಲ್ ಗಳಾದ ಬಾಲಕೃಷ್ಣ, ಉಮೇಶ್,ಸತೀಶ್, ನವೀನ್, ಕಾನ್ಸ್‌ಟೇಬಲ್ ಗಳಾದ ಮಂಜುನಾಥ, ಪುನೀತ್, ಆನಂದ ನಾಯ್ಕ ಹಾಗೂ ಡಿಸಿಐಬಿ ಸಿಬ್ಬಂದಿಯವರಾದ ನಾರಾಯಣ, ವಾಸು ನಾಯ್ಕ, ಲಕ್ಷ್ಮಣ ಕೆ.ಜಿ, ಇಕ್ಬಾಲ್ ಎ.ಇ, ಉದಯ ರೈ, ಪ್ರವೀಣ್ ಎಂ, ತಾರಾನಾಥ್, ಉದಯ ಗೌಡ, ಪ್ರವೀಣ ರೈ, ಶೋನ್ಶಾ ಮತ್ತು ಸುರೇಶ್ ಪೂಜಾರಿಯವರು ಭಾಗವಹಿಸಿದ್ದರು.