(ನ್ಯೂಸ್ ಕಡಬ) newskadaba.com ಕಡಬ, ಜು.22. ಈಗಾಗಲೇ ತಾಲೂಕು ಕೇಂದ್ರ ಎಂದು ಘೋಷಣೆಯಾಗಿರುವ ಕಡಬದಲ್ಲಿ ಸರಿಯಾದ ಒಂದು ಬಸ್ ನಿಲ್ದಾಣ ಇಲ್ಲ, ಇರೋ ಪ್ರಯಾಣಿಕರ ತಂಗುದಾಣಗಳಿಗೆ ಮೆಟ್ಟಿಲುಗಳೇ ಇಲ್ಲ. ಕಳೆದ ಕೆಲವು ತಿಂಗಳುಗಳಿಂದ ಮೆಟ್ಟಿಲು ಇಲ್ಲದೆ ಪ್ರಯಾಣಿಕರು ಅವಾಂತರ ಎದುರಿಸುತ್ತಿದ್ದಾರೆ.
ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಪೇಟೆಯ ಪಂಜ ಕ್ರಾಸ್ ಬಳಿ ಇರುವ ಪ್ರಯಾಣಿಕರ ತಂಗುದಾಣದ ದುರವಸ್ಥೆ ಇದು. ಈ ತಂಗುದಾಣ ಜನರಿಗೆ ಸೇಫ್ ಎಂದೇನು ಇಲ್ಲ. ಜೋರು ಗಾಳಿ, ಮಳೆಗೆ ತಕ್ಕಮಟ್ಟಿಗೆ ಆಶ್ರಯ ನೀಡುವ ಬಸ್ಸ್ಟಾಂಡ್. ಅದರ ಸ್ವಚ್ಛತೆ, ಭದ್ರತೆ ಎಲ್ಲಾ ಅಷ್ಟಕ್ಕಷ್ಟೆ, ಆದರೂ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಈ ತಂಗುದಾಣದಲ್ಲಿ ತುಂಬಿ ತುಳುಕುತ್ತಿದ್ದಾರೆ. ಈ ಬಸ್ ತಂಗುದಾಣದ ಸರೀ ಎದುರುಗಡೆ ಸಂಘ ಸಂಸ್ಥೆಯವರು ನಿರ್ಮಿಸಿಕೊಟ್ಟ ತಂಗುದಾಣವೊಂದಿದೆ. ಈ ತಂಗುದಾಣದ ಎದುರು ಸರ್ವಿಸ್ ವಾಹನಗಳ ನಿಲುಗಡೆ ಇರುವುದರಿಂದ ಜನತೆಗೆ ಅಲ್ಲೊಂದು ಸಣ್ಣಮಟ್ಟಿನ ಬಸ್ಸ್ಟಾಂಡ್ ಇದೆ ಎನ್ನುವುದೇ ಗೊತ್ತಾಗುತ್ತಿಲ್ಲ. ಬಹುತೇಕರು ಆಶ್ರಯಿಸುವ ಬಸ್ ನಿಲ್ದಾಣದ ಮೆಟ್ಟಿಲುಗಳನ್ನು ಕಿತ್ತು ಹಾಕಿ ಆರು ತಿಂಗಳು ಕಳೆದಿದೆ. ರಾಜ್ಯ ಹೆದ್ದಾರಿಯ ಅಗಲೀಕರಣ ಸಂದರ್ಭದಲ್ಲಿ ಬಸ್ಸ್ಟಾಂಡ್ನ ಮೆಟ್ಟಿಲುಗಳನ್ನು ಕಿತ್ತು ಹಾಕಲಾಗಿತ್ತು. ಇತ್ತೀಚೆಗೆ ಇಲ್ಲಿ ಡಾಮರೀಕರಣ, ಚರಂಡಿ ಮುಚ್ಚುವ ಕಾರ್ಯ ಮಾಡಿದ್ದರೂ ಸಂಬಂಧಪಟ್ಟವರು ಮೆಟ್ಟಿಲು ಮರು ನಿರ್ಮಾಣ ಮಾಡಿಲ್ಲ. ಇದರಿಂದಾಗಿ ವೃದ್ಧರು, ಅಸಾಯಕರು, ಅನಾರೋಗ್ಯ ಪೀಡಿತರು, ವಿದ್ಯಾರ್ಥಿಗಳು ಬಸ್ಸ್ಟಾಂಡಿನ ಒಳಗೆ ಹೋಗಿ ನಿಲ್ಲಲು ಹರಸಾಹಸ ಪಡಬೇಕಾಗಿದೆ. ಅಂಗಡಿಯ ಮುಂದೆಯೋ, ರಸ್ತೆಯ ಬದಿಯಲ್ಲೋ ನಿಲ್ಲುವಂತಾಗಿದೆ. ಸುಬ್ರಹ್ಮಣ್ಯ, ಪಂಜ, ಉಪ್ಪಿನಂಗಡಿ ಸೇರಿದಂತೆ ಹಲವು ಭಾಗಕ್ಕೆ ಸಂಚರಿಸುವ ಜನ ಈ ಬಸ್ ಸ್ಟಾಂಡ್ನ್ನು ಆಶ್ರಯಿಸುತ್ತಿದ್ದಾರೆ. ಅದೆಷ್ಟೋ ವಿದ್ಯಾರ್ಥಿಗಳು ಹತ್ತಲು ಸಾಧ್ಯವಾಗದೆ ಬಿದ್ದಿರುವ ಘಟನೆಗಳು ಕೂಡಾ ಸಂಭವಿಸಿವೆ. ಸಂಬಂದಪಟ್ಟ ಇಲಾಖೆಯಾಗಲೀ, ಸ್ಥಳೀಯಾಡಳಿತವಾಗಲೀ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಇತ್ತ ಬೆಳಿಗ್ಗೆ ಹಾಗೂ ಸಂಜೆ ವಿದ್ಯಾರ್ಥಿಗಳು ಹಿಡಿಶಾಪ ಹಾಕುತ್ತಿದ್ದಾರೆ. ತಕ್ಷಣ ಮೆಟ್ಟಿಲು ನಿರ್ಮಾಣ ಕಾರ್ಯ ಆಗಬೇಕು ಎನ್ನುವ ಅಗ್ರಹ ಕೂಡಾ ಕೇಳಿಬರುತ್ತಿದೆ.
ಸಂಜೆ ಸಮಯದಲ್ಲಿ ಮೂರ್ನಾಲ್ಕು ಶಾಲೆಯ ವಿದ್ಯಾರ್ಥಿನಿಯರು ಈ ಬಸ್ ನಿಲ್ದಾಣಕ್ಕೆ ಆಗಮಿಸುವಾಗ ಫುಲ್ ರಷ್ ಆಗುತ್ತದೆ. ಅಲ್ಲದೆ ಕುಡುಕರು, ಭಿಕ್ಷುಕರು ಇಲ್ಲಿ ನಿಂತಿರುತ್ತಾರೆ. ಇಲ್ಲಿ ಹತ್ತಲೂ ಮೆಟ್ಟಲಿಗಳಿಲ್ಲದೆ ತುಂಬಾ ಸಮಸ್ಯೆಯಾಗುತ್ತಿದೆ. ಮಳೆ ಬಂದಾಗ ಉಪಾಯವಿಲ್ಲದೆ ಕಷ್ಕದಲ್ಲಿ ನಿಂತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತಿದೆ.
ಪಲ್ಲವಿ, ವಿದ್ಯಾರ್ಥಿನಿ
ತಾಲೂಕು ಕೇಂದ್ರವಾಗಿರುವ ಕಡಬದಲ್ಲಿ ಸರಿಯಾದ ಬಸ್ಸು ನಿಲ್ದಾಣವಿಲ್ಲದೆ ಪರದಾಡುವಂತಾಗಿದೆ. ಸ್ವಚ್ಛತೆಯ ವಿಷಯಕ್ಕೆ ಬಂದಾಗ ಧೂಮಪಾನ ಮಾಡಿ ಇಲ್ಲೇ ಉಗುಳುತ್ತಾರೆ. ಸಮಸ್ಯೆಯನ್ನು ಹೇಳುವುದಕ್ಕೇ ಮುಜುಗರವಾಗುತ್ತಿದೆ. ಮೆಟ್ಟಿಲುಗಳ ಆದಷ್ಟು ಬೇಗ ಸರಿಪಡಿಸಬೇಕಾಗಿದೆ.
ಪೂರ್ಣಿಮಾ, ಶಿಕ್ಷಕಿ
ಮೆಟ್ಟಿಲು ಕಿತ್ತು ಹಾಕಿದವರು ಮರು ನಿರ್ಮಾಣ ಮಾಡಬೇಕಿತ್ತು. ಆದರೆ ಹಾಗೆ ಆಗಲಿಲ್ಲ. ಈ ಬಸ್ ನಿಲ್ದಾಣ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವುದರಿಂದ ನಾವೇ ಮೆಟ್ಟಿಲು ನಿರ್ಮಿಸಿಕೊಡಲು ನಿರ್ಧರಿಸಿದ್ದೇವೆ. ಈ ಬಗ್ಗೆ ಅಂದಾಜುಪಟ್ಟಿ ತಯಾರಿಸಿ ಅನುಮೋದನೆಗೆ ಕಳುಹಿಸಲಾಗಿದೆ. ಅನುಮೋದನೆ ದೊರೆತ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು.
ಬಾಬು ಮುಗೇರ ತುಂಬೆತಡ್ಕ, ಅಧ್ಯಕ್ಷರು, ಕಡಬ ಗ್ರಾಮ ಪಂಚಾಯಿತಿ.