ಕಡಬ ಸಿ.ಎ. ಬ್ಯಾಂಕ್ ಉಪಾಧ್ಯಕ್ಷರ ಹಲ್ಲೆ ಪ್ರಕರಣ ► ಉಳಿದ ಆರೋಪಿಗಳ ಬಂಧನಕ್ಕೆ ಆಡಳಿತ ಮಂಡಳಿ ಅಗ್ರಹ

(ನ್ಯೂಸ್ ಕಡಬ) newskadaba.com ಕಡಬ, ಜು.21. ಇಲ್ಲಿನ ಸಿ.ಎ. ಬ್ಯಾಂಕಿನ ಉಪಾಧ್ಯಕ್ಷ ರಮೇಶ್ ಕಲ್ಪುರೆ ಅವರ ಮೇಲಿನ ಹಲ್ಲೆ ಆರೋಪಿಗಳಲ್ಲಿ ಕೆಲವರು ಮಾತ್ರ ಬಂಧನವಾಗಿದ್ದು ಉಳಿದ ಆರೋಪಿಗಳನ್ನು ತಕ್ಷಣ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿ.ಎ. ಬ್ಯಾಂಕ್ ಅಧ್ಯಕ್ಷ ಸುಂದರ ಗೌಡ ಮಂಡೆಕರ ಆಗ್ರಹಿಸಿದ್ದಾರೆ.

ಅವರು ಬ್ಯಾಂಕಿನ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಮೇಶ್ ಕಲ್ಪುರೆ ಅವರ ಹಲ್ಲೆ ಅಮಾನವೀಯ ಹಾಗೂ ಖಂಡನೀಯವಾಗಿದ್ದು, ಆಡಳಿತ ಮಂಡಳಿ ಈ ಹಲ್ಲೆಯನ್ನು ಉಗ್ರವಾಗಿ ಖಂಡಿಸುತ್ತದೆ ಎಂದರು. ಕಡಬ ಯಶೋದಾ ಟವರ್ಸ್‌ ಬಳಿ ರಮೇಶ್ ಕಲ್ಪುರೆ ಅವರ ಮೇಲೆ ರಾಜರೋಷವಾಗಿ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಯತ್ನ ಮಾಡಲಾಗಿದೆ. ಮಾತ್ರವಲ್ಲದೆ ಆರೋಪಿಗಳು ನಗ ನಗದು ದೋಚಿ ದರೋಡೆ ಮಾಡಿದ್ದಾರೆ. ಆರೋಪಿಗಳ ಪೈಕಿ ಆರು ಜನರ ಬಂಧನ ಮಾತ್ರ ನಡೆದಿದ್ದು, ಉಳಿದ ಆರೋಪಿಗಳು ತಲೆಮರೆಸಿಕೊಂಡು ಪ್ರಭಾವಿ ವ್ಯಕ್ತಿಗಳ ಕೃಪಾ ಕಟಾಕ್ಷದಿಂದ ಬಂಧನದಿಂದ ತಪ್ಪಿಸಿಕೊಂಡಿದ್ದಾರೆ. ಇವರನ್ನು ತಕ್ಷಣ ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಪೋಲಿಸರು ಯಾವುದೇ ಒತ್ತಡಕ್ಕೆ ಮಣಿಯದೆ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಸುಂದರ ಗೌಡ, ಆರೋಪಿಗಳು ಮರಳು ದಂಧೆಯಲ್ಲಿ ತೊಡಗಿರುವ ಕ್ರಿಮಿನಲ್ ಹಿನ್ನಲೆಯುಳ್ಳವರು. ಇವರುಗಳು ಒಬ್ಬ ಸಜ್ಜನ ರಾಜಕಾರಣಿ, ಸಾಮಾಜಿಕ ಕಾರ್ಯಕರ್ತ ರಮೇಶ್ ಕಲ್ಪುರೆಯವರ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಿ ಶಾಂತಿ ಕೆದಡುವ ದುಷೃತ್ಯ ಎಸಗಿದ್ದಾರೆ. ಇಂತಹ ಸಮಾಜದ ಶಾಂತಿ ಕದಡುವ ವ್ಯಕ್ತಿಗಳನ್ನು ಬಂಧಿಸದೆ ಹೋದಲ್ಲಿ ಮುಂದೆ ಕಡಬ ಎನ್ನುವ ಸೂಕ್ಷ್ಮ ಪ್ರದೇಶ ಮತ್ತಷ್ಟು ಅಶಾಂತಿಗೆ ಕಾರಣವಾಗುತ್ತದೆ. ಉಳಿದ ಆರೋಪಿಗಳನ್ನು ಬಂಧಿಸದೇ ಹೋದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಿ.ಎ. ಬ್ಯಾಂಕಿನ ಮಾಜಿ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ನಿರ್ದೇಶಕರಾದ ರಾಜೀವಿ ಕೋರಂದೂರು, ಲೀಲಾವತಿ ಅಣ್ಣು ಶೆಟ್ಟಿ, ನಿತ್ಯಾನಂದ ಬೊಳ್ಳಾಜೆ, ರಘುಚಂದ್ರ ಮನೆಜಾಲು, ಅಂಗಜ ಗೋಳಿಯಡ್ಕ, ಸುದರ್ಶನ ಗೌಡ ಕೋಡಿಂಬಾಳ, ಮಾಜಿ ನಿರ್ದೇಶಕಿ ಸರೋಜಿನಿ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group