ಕಡಬ ಪೊಲೀಸ್ ಠಾಣೆಯಲ್ಲಿ ಗಣೇಶೋತ್ಸವ ಸಮಿತಿಗಳ ಪ್ರಮುಖರ ಸಭೆ ► ಕಾನೂನಿನ ಚೌಕಟ್ಟಿನೊಳಗೆ ಹಬ್ಬ ಆಚರಿಸಿ: ಪಿಎಸ್‍ಐ ಪ್ರಕಾಶ್ ದೇವಾಡಿಗ

(ನ್ಯೂಸ್ ಕಡಬ) newskadaba.com ಕಡಬ, ಸೆ.10. ಕಾನೂನಿನ ಚೌಕಟ್ಟಿನೊಳಗೆ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಶಾಂತಿಯುತವಾಗಿ ಗಣೇಶೋತ್ಸವವನ್ನು ಆಚರಿಸುವುದರೊಂದಿಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರೊಂದಿಗೆ ಸಹಕರಿಸುವಂತೆ ಕಡಬ ಪೊಲೀಸ್ ಠಾಣಾ ಉಪ ನಿರೀಕ್ಷಕ ಪ್ರಕಾಶ್ ದೇವಾಡಿಗ ಅವರು ಠಾಣಾ ವ್ಯಾಪ್ತಿಯ ಗಣೇಶೋತ್ಸವ ಸಮಿತಿಗಳ ಪ್ರಮುಖರಲ್ಲಿ ಮನವಿ ಮಾಡಿದರು.

ಅವರು ಕಡಬ ಪೊಲೀಸ್ ಠಾಣೆಯಲ್ಲಿ ರವಿವಾರ ಜರಗಿದ ಕಡಬ ಠಾಣಾ ವ್ಯಾಪ್ತಿಯ ವಿವಿಧ ಗಣೇಶೋತ್ಸವ ಸಮಿತಿಗಳ ಪ್ರಮುಖರ ಸಭೆಯಲ್ಲಿ ಮಾತನಾಡಿದರು. ಗಣೇಶ ಚೌತಿ ಹಬ್ಬದ ಆಚರಣೆಯ ವೇಳೆ ಸಂಘಟಕರು ಅನುಸರಿಸಬೇಕಾದ ಮಾರ್ಗಸೂಚಿಗಳ ಕುರಿತು ವಿವರಿಸಿದ ಅವರು ಪ್ರತಿಯೊಂದು ಧಾರ್ಮಿಕ ಉತ್ಸವಗಳಿಗೂ ಅದರದೇ ಆದ ಮಹತ್ವವಿದೆ. ಶಿಸ್ತುಬದ್ಧವಾಗಿ ಧಾರ್ಮಿಕ ಮೌಲ್ಯಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ಉತ್ಸವವನ್ನು ಆಚರಿಸುವ ನಿಟ್ಟಿನಲ್ಲಿ ಸಂಘಟಕರು ಮುತುವರ್ಜಿ ವಹಿಸಬೇಕು. ಹಾಗೆಯೇ ಮೆರವಣಿಗೆಯ ಸಂದರ್ಭದಲ್ಲಿ ಡಿ.ಜೆ. ಸೌಂಡ್ ಬಳಕೆಗೆ ಅವಕಾಶವಿಲ್ಲ. ಮೆರವಣಿಗೆಯಿಂದ ಹೊರಗಿರುವವರು ಹಾಗೂ ವಾಹನಗಳಲ್ಲಿ ಪ್ರಯಾಣಿಸುವವರ ಮೇಲೆ ಬಣ್ಣದ ಪುಡಿ ಹಾಗೂ ಬಣ್ಣದ ನೀರನ್ನು ಎರಚಿ ಅನಗತ್ಯ ಗೊಂದಲಗಳಿಗೆ ಕಾರಣರಾಗದಂತೆ ಎಚ್ಚರವಹಿಸುವಂತೆ ಅವರು ಸೂಚಿಸಿದರು. ಸಂಘಟಕರು ಹಾಗೂ ಪೊಲೀಸರ ಸೂಚನೆಗಳನ್ನು ಮೀರಿ ಕಾನೂನು ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಾಶ್ ದೇವಾಡಿಗ ಎಚ್ಚರಿಸಿದರು.

Also Read  ಜಂಟಿ ಕೃಷಿ ನಿರ್ದೇಶಕರು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ➤ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

ಕಡಬ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಅಶೋಕ್‍ ಕುಮಾರ್ ಪಿ., ಪದಾಧಿಕಾರಿಗಳಾದ ಜಯರಾಮ ಆರ್ತಿಲ, ಸೀತಾರಾಮ ಗೌಡ ಎ., ಪ್ರಕಾಶ್ ಎನ್.ಕೆ., ಕಿಶನ್‍ಕುಮಾರ್ ರೈ, ಕುಂತೂರಿನ ಚಂದ್ರಶೇಖರ್, ನಾಗೇಶ್ ಅರ್ಬಿ, ಆಲಂಕಾರಿನ ದಯಾನಂದ ಬಡ್ಡಮೆ, ಮರ್ದಾಳದ ಸತೀಶ್‍ಚಂದ್ರ ರೈ ಮೈಕಾಜೆ, ಸುರೇಶ್ ರೈ ನೈಲ, ರಂಜಿಲಾಡಿಯ ಉಮೇಶ್ ಶೆಟ್ಟಿ ಸಾಯಿರಾಂ, ಡೀಕಯ್ಯ ಪಾಡ್ಲ, ಐತ್ತೂರು 72 ಕಾಲನಿಯ ಲಕ್ಷ್ಮಣ ಹಾಗೂ ರಾಜಕೃಷ್ಣ ಅವರು ಉಪಸ್ಥಿತರಿದ್ದರು. ಠಾಣಾ ಸಿಬಂದಿಗಳಾದ ಶಿವಪ್ರಸಾದ್ ಹಾಗೂ ಚಂದ್ರಿಕಾ ಸಹಕರಿಸಿದರು.

Also Read  ದಕ್ಷಿಣ ಕನ್ನಡ ಆಪರ ಜಿಲ್ಲಾಧಿಕಾರಿಯಾಗಿ ಸಂತೋಷ್ ಕುಮಾರ್ ಅಧಿಕಾರ ಸ್ವೀಕಾರ

error: Content is protected !!
Scroll to Top