(ನ್ಯೂಸ್ ಕಡಬ) newskadaba.com ಕಡಬ, ಸೆ.09. ಕಳೆದ ನಾಲ್ಕುವರೆ ವರ್ಷದಿಂದ ಈ ದೇಶವನ್ನು ಆಳುತ್ತಿರುವ ಬಿಜೆಪಿ ನೇತೃತ್ವದ ಎನ್.ಡಿ.ಎ. ಸರಕಾರವು ದೇಶವನ್ನು ಅದಃಪತನಕ್ಕೆ ತಳ್ಳುತ್ತಿದ್ದು, ಯಾವುದೋ ಯೋಗದಿಂದ ಚಹಾ ಮಾರುತ್ತಿದ್ದ ನರೇಂದ್ರ ಮೋದಿಯವರು ಪ್ರಧಾನಿಯಾಗಿದ್ದಾರೆ. ತನ್ನ ಅನುಭವದ ಕೊರತೆಯ ಆಡಳಿತದಿಂದ ಮುಂದೊಮ್ಮೆ ಈ ದೇಶವನ್ನೇ ಮಾರಲಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ, ಕಡಬ ಕಾಂಗ್ರೇಸ್ ಉಸ್ತುವಾರಿ ಎಂ.ಎಸ್. ಮಹಮ್ಮದ್ ವ್ಯಂಗ್ಯವಾಡಿದರು.
ಅವರು ಭಾನುವಾರದಂದು ಕಡಬ ಕಾಂಗ್ರೇಸ್ ಕಛೇರಿಯಲ್ಲಿ ಸೋಮವಾರ ಇಂಧನ ಬೆಲೆ ಏರಿಕೆಯ ವಿರುದ್ದ ಕಾಂಗ್ರೇಸ್ ಭಾರತ್ ಬಂದ್ ಗೆ ಕರೆನೀಡುವ ಹಿನ್ನೆಲೆಯಲ್ಲಿ ಸೆ.11 ರಂದು ರೆಫೆಲ್ ಡೀಲ್ ವಿರುದ್ದ ಮಂಗಳೂರಿನಲ್ಲಿ ನಡೆಯುವ ಪ್ರತಿಭಟನೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ದೇಶವನ್ನು ಸಂಪೂರ್ಣ ಲೂಟಿಮಾಡಿರುವ ಮೋದಿ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸದಿದ್ದರೆ ಈ ದೇಶಕ್ಕೆ ಉಳಿಗಾಲವಿಲ್ಲ ಎಂದರು. ದೇಶದಲ್ಲಿ ಭ್ರಷ್ಟಾಚಾರ ಮುಗಿಲುಮುಟ್ಟಿದ್ದು, ಅಸಹಿಷ್ಣುತೆ ತಾಂಡವವಾಡುತ್ತಿದೆ, ದ್ವೇೀಷದ ರಾಜಕಾರಣ ಮೇಲೈಸಿ ಪ್ರತೀ ವಿಚಾರದಲ್ಲೂ ವಿರೋಧ ಪಕ್ಷದವರನ್ನು ಹಣಿಯುವ ಹುನ್ನಾರ ನಸೆಲಾಗುತ್ತಿದೆ. ಭಾರೀ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಎನ್‍ಡಿಎ ಸರಕಾರ ಎಲ್ಲಾ ರಂಗದಲ್ಲೂ ವಿಫಲವಾಗಿದೆ. ದಿನದಿಂದ ದಿನಕ್ಕೆ ದಿನಬಳಕೆ ವಸ್ತುಗಳ ಬೆಲೆ ಕೈಗೆಟಕದ ರೀತಿಯಲ್ಲಿ ಏರುತ್ತಿದೆ, ಪೆಟ್ರೋಲ್ ಡೀಸೆಲ್ ಹಾಗೂ ಗ್ಯಾಸ್ ಬೆಲೆ ಹಿಂದೆಂದೂ ಕಾಣದ ರೀತಿಯಲ್ಲಿ ಏರಿಕೆಯಾಗಿದೆ, ದೇಶದ ಬಡಜನತೆ ಬದುಕುವುದೇ ದುಸ್ತರ ಎನ್ನುವಂತಾಗಿದೆ, ಇದರ ವಿರುದ್ಧ ದೇಶದ ಜನ ದಂಗೆ ಏಳುತ್ತಿದ್ದಾರೆ. ಕಾಂಗ್ರೇಸ್ ಇದರ ವಿರುದ್ಧ ಒಂದು ವ್ಯವಸ್ಥಿತ ಹೋರಾಟಕ್ಕೆ ಸನ್ನದ್ದವಾಗಿದೆ. ಅಖಿಲ ಭಾರತ ಕಾಂಗ್ರೇಸ್ ಪಕ್ಷ ಸೋಮವಾರ ಭಾರತ ಬಂದ್‍ಗೆ ಕರೆ ನೀಡಿದೆ, ದೇಶದ ಜನರ ಪರವಾದ ಈ ಹೋರಾಟವನ್ನು ಬಿಜೆಪಿಯವರು ರಾಜಕೀಯ ಹುನ್ನಾರವೆಂದು ಬಣ್ಣಿಸುತ್ತಿದ್ದಾರೆ. ಇಂಧನ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವ ಬಿಜೆಪಿಗರು ಎಲ್ಲವೂ ದೇಶಕ್ಕಾಗಿ ಎಂದು ಹೇಳುತ್ತಿದ್ದಾರೆ. ಈ ರೀತಿ ಹೇಳುತ್ತಾ ಸಾಗಿದರೆ ದೇಶದ ಜನ ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ರೆಫೆಲ್ ಯುದ್ದ ವಿಮಾನ ಖರೀದಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು, ಇದರಲ್ಲಿ ಪ್ರಧಾನಿಯವರ ಅಸಲಿ ಮುಖ ಅನಾವರಣವಾಗಲಿದೆ. ರೆಫೆಲ್ ಡೀಲ್ ಪ್ರಕರಣದಲ್ಲಿ ಪ್ರಧಾನಿಯವರು ನೇರ ಭಾಗಿಯಾಗಿದ್ದು ಇದರ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ನಡೆಯುತ್ತಿದೆ ಎಂದು ಹೇಳಿದ ಎಂ.ಎಸ್. ಮಹಮ್ಮದ್ ಸೆ 11 ರಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ, ಮಂಗಳೂರು ಬಾವುಟಗುಡ್ಡೆಯಿಂದ ಪಾದಯಾತ್ರೆಯಲ್ಲಿ ತೆರಳಿ ಡಿಸಿ ಕಛೇರಿ ಎದುರು ಬೃಹತ್ ಪ್ರತಿಭಟನೆ ನಡೆಯಲಿದೆ, ಈ ಪ್ರತಿಭಟನೆಗೆ ಬ್ಲಾಕ್‍ನಿಂದ ಕನಿಷ್ಟ ಇಪ್ಪತ್ತು ವಾಹನಗಳಲ್ಲಿ ಕಾರ್ಯಕರ್ತರು ಆಗಮಿಸುವಂತೆ ಸ್ಥಳೀಯ ಮುಖಂಡರು ಶ್ರಮಿಸಬೇಕು, ಸೋಮವಾರದ ಪ್ರತಿಭಟನೆಗೆ ಎಲ್ಲಾ ಜಾತ್ಯಾತೀತ ಪಕ್ಷಗಳು ಬೆಂಬಲ ನೀಡುತ್ತಿವೆ, ಬಸ್ಸು ಮಾಲಕರ ಸಂಘ ಈಗಾಗಲೇ ಬೆಂಬಲ ವ್ಯಕ್ತಪಡಿಸಿದೆ, ಎಲ್ಲಾ ಮುಖಂಡರು ಒಟ್ಟಾಗಿ ಬಂದ್ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯಿ ಸದಸ್ಯ, ಪಿ.ಪಿ.ವರ್ಗೀಸ್, ಜೆಡಿಎಸ್ ಕಡಬ ತಾಲೂಕು ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್, ಕಡಬ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ದಿವಾಕರ ಗೌಡ ಶಿರಾಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಸರ್ವೋತ್ತಮ ಗೌಡ, ಡಿಸಿಸಿ ಸದಸ್ಯ ರಾಯ್ ಅಬ್ರಹಾಂ ಮೊದಲಾದವರು ಮಾತನಾಡಿ ಬಂದ್ ಸಂಪೂರ್ಣ ಯಶಸ್ವಿಗೆ ಮನವಿ ಮಾಡಿದರು. ಕಾಂಗ್ರೇಸ್ ರಾಜ್ಯ ಹಿಂದುಳಿದ ವರ್ಗ ವಿಭಾಗದ ಸದಸ್ಯೆ ಉಷಾ ಅಂಚನ್, ತಾಲೂಕು ಪಂಚಾಯತಿ ಸದಸ್ಯರಾದ ಫಝಲ್ ಕೋಡಿಂಬಾಳ, ಕಾಂಗ್ರೇಸ್ ಮುಖಂಡರಾದ ಸೈಮನ್ ಸಿ ಜೆ, ಪ್ರವೀಣ್ ಕುಮಾರ್ ಕೆಡೆಂಜಿ, ಡೆನ್ನೀಸ್ ಫೆರ್ನಾಂಡೀಸ್, ಗಂಗಾಧರ ಶೆಟ್ಟಿ, ಅಬ್ದುಲ್ ನಾಸಿರ್, ಯತೀಶ್ ಬಾನಡ್ಕ, ಕೆ.ಜೆ.ತೋಮಸ್, ಶಶಿಧರ ಬೊಟ್ಟಡ್ಕ, ಬಾಬು ಮುಗೇರ,ನೀಲಾವತಿ ಶಿವರಾಮ್, ಶಾಲಿನಿ ಸತೀಶ್ ನಾೈಕ್ ಮೊದಲಾದವರು ಉಪಸ್ಥಿತರಿದ್ದರು.