ಗಣೇಶೋತ್ಸವ ಮೆರವಣಿಗೆಯಲ್ಲಿ ಡಿಜೆಗೆ ಅವಕಾಶ ಇಲ್ಲ – ಬೆಳ್ಳಾರೆ ಪಿಎಸೈ ಈರಯ್ಯ ► ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳ ಹಾಗೂ ಸಾರ್ವಜನಿಕರ ಶಾಂತಿ ಸಭೆಯಲ್ಲಿ ಸೂಚನೆ

(ನ್ಯೂಸ್ ಕಡಬ) newskadaba.com ಸವಣೂರು, ಸೆ.09. ಗಣೇಶೋತ್ಸವಗಳ ಮೆರವಣಿಗೆಯಲ್ಲಿ ಡಿ.ಜೆ.ಸೌಂಡ್ಸ್‍ಗೆ ಅವಕಾಶವಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕರು ಇಲಾಖೆಯೊಂದಿಗೆ ಕೈಜೋಡಿಸಿ, ಕಾನೂನು ಪಾಲನೆಗೆ ಸಹರಿಸಬೇಕು ಎಂದು ಬೆಳ್ಳಾರೆ ಠಾಣಾ ಉಪನಿರೀಕ್ಷಕ ಡಿ.ಎನ್ ಈರಯ್ಯ ಹೇಳಿದರು.

ಅವರು ಶನಿವಾರದಂದು ಸಂಜೆ ಬೆಳ್ಳಾರೆಯ ಅಂಬೇಡ್ಕರ್ ಭವನದಲ್ಲಿ ನಡೆದ ವಿವಿಧ ಕಡೆಗಳ ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳ ಹಾಗೂ ಸಾರ್ವಜನಿಕರ ಶಾಂತಿ ಸಭೆಯಲ್ಲಿ ಹೇಳಿದರು. ಕಾರ್ಯಕ್ರಮಗಳಲ್ಲಿ ಅನ್ಯಧರ್ಮದ ವ್ಯಕ್ತಿಗಳಿಗೆ, ಧರ್ಮಕ್ಕೆ ನೋವು ತರುವಂತಹ ಕೆಲಸ ಮಾಡಬೇಡಿ. ಶಾಂತಿ, ಸಂಯಮ, ಮಾನವೀಯತೆಯನ್ನು ಮೈಗೂಡಿಸಿಕೊಂಡು ಶಾಂತಿ ಸುವ್ಯವಸ್ಥೆ ಕಾಪಾಡಲು ಇಲಾಖೆಯೊಂದಿಗೆ ಕೈಜೋಡಿಸಬೇಕು. ಇಲಾಖೆಯ ಮೇಲೆ ಸಾರ್ವಜನಿಕರ ನಂಬಿಕೆ ಹಾಗೂ ಸಹಕಾರ ಬೇಕು ಎಂದರು. ಕಾನೂನಿನ ಎದುರು ಎಲ್ಲರೂ ಸಮಾನರು. ಕಾನೂನು ಪಾಲನೆ ಎಲ್ಲರ ಕರ್ತವ್ಯ, ಯಾವುದೇ ಸಮಸ್ಯೆ ಉಂಟಾದರೂ ನೇರವಾಗಿ ಇಲಾಖೆಯ ಗಮನಕ್ಕೆ ತನ್ನಿ, ಕಾನೂನಿನ ಚೌಕಟ್ಟಿನಲ್ಲಿ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುತ್ತೇವೆ. ಶಾಂತಿ ಕಾಪಾಡಲು ಸಹಕರಿಸಬೇಕು ಎಂದರು. ಅವರವರ ಧಾರ್ಮಿಕ ಚೌಕಟ್ಟಿನಲ್ಲಿ ಕಾರ್ಯ ನಡೆಸಿ, ಸರ್ವ ಧರ್ಮದವರೂ ಸೇರಿ ಹಬ್ಬ ಆಚರಿಸಿ, ಆದರೆ ಯಾರಿಗೂ ತೊಂದರೆ ಉಂಟು ಮಾಡುವುದು ಬೇಡ. ಕಾನೂನು ಉಲ್ಲಂಘನೆ ಮಾಡುವವರೂ ಎಷ್ಟೇ ಪ್ರಭಾವಿಯಾದರೂ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು. ಶಾಂತಿ ಕೆಡಿಸುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಇಲಾಖೆಯ ಗೌರವ ಹಾಗೂ ಸಾರ್ವಜನಿಕರ ನಂಬಿಕೆಯನ್ನು ಉಳಿಸುವುದು ನಮ್ಮ ಕರ್ತವ್ಯವಾಗಿದ್ದು, ಸಾರ್ವಜನಿಕರೂ ಪೊಲೀಸ್ ಇಲಾಖೆಯೊಡನೆ ಸಹಕರಿಸುವಂತೆ ವಿನಂತಿಸಿದರು.

Also Read  ರಾಷ್ಟ್ರೀಯ ಒಲಿಂಪಿಯಾಡ್ ನಲ್ಲಿ ಕಡಬದ ಪೋರನಿಗೆ ದ್ವಿತೀಯ ರ್‍ಯಾಂಕ್

ಸಭೆಯಲ್ಲಿ ಪೆರ್ಲಂಪಾಡಿ, ಕೋಟೆ ಮುಂಡುಗಾರು, ಮುಪ್ಪೇರ್ಯ,  ಬಾಳಿಲ,  ಎಣ್ಮೂರು,  ಅಮರ ಮುಡ್ನೂರು ,ಕಾಣಿಯೂರು , ಪುಣ್ಚತ್ತಾರು, ಮುರುಳ್ಯ , ಅಲೆಕ್ಕಾಡಿ, ಬೆಳ್ಳಾರೆ, ಪಾಲ್ತಾಡಿ ಅಂಕತ್ತಡ್ಕ ,ಸವಣೂರು ಸೇರಿದಂತೆ ವಿವಿಧ ಕಡೆಗಳ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

error: Content is protected !!
Scroll to Top