(ನ್ಯೂಸ್ ಕಡಬ) newskadaba.com ವಿಶೇಷ ಲೇಖನ, ಸೆ.08. ಭರತ ಭೂಮಿ ಪುಣ್ಯ ಭೂಮಿ, ಈ ಮಾತೃ ಭೂಮಿಯಲ್ಲಿ ಜನ್ಮ ತಾಳಿದ ನಾವೇ ಧನ್ಯರು. ಭಾರತ ಮಾತೆ ತನ್ನ ಬಾಹುಗಳಲ್ಲಿ ಹಲವಾರು ವೈಶಿಷ್ಠಗಳನ್ನು ಮೈಗೂಡಿಸಿಕೊಂಡಿದ್ಧಾಳೆ. ಈ ಭೂಮಿಯಲ್ಲಿ ಆಚರಿಸಲ್ಪಡುವ ಸಂಸ್ಕತಿ, ಸಂಪ್ರದಾಯ, ಆಚಾರ-ವಿಚಾರಗಳು ಒಂದಕ್ಕೊಂದು ಬೆಸೆದುಕೊಂಡಿದೆ ಎಂದರೆ ತಪ್ಪಾಗಲಾರದು. ಅದರಲ್ಲಿ ಕರಾವಳಿಯ ಕ್ರೈಸ್ತ ಬಾಂಧವರು ಆಚರಿಸುವ ಮೋಂತಿ ಫೆಸ್ಟ್ ಕೂಡ ಈ ಮಣ್ಣಿನ ಸೊಗಡಿನ ಜೊತೆ ಬೆರೆತು ಹೋಗಿದೆ. ಕನ್ನಡದಲ್ಲಿ ಹೊಸತೆನೆಯ ಹಬ್ಬ, ತುಳುವಿನಲ್ಲಿ ವೃದ್ದರ್, ಕೊಂಕಣಿಯಲ್ಲಿ ಮೊಂತಿ ಫೆಸ್ತ ಎಂದು ಕರೆಯಲ್ಪಡುತ್ತದೆ. ಇದು ತುಳುನಾಡಿನ ಕ್ರೈಸ್ತ ಬಾಂಧವರು ಅದರಲ್ಲೂ ಕೊಂಕಣಿ ಕ್ರೈಸ್ತರು ಸಾಂಪ್ರದಾಯಿಕವಾಗಿ ಆಚರಿಸಲ್ಪಡುವ ಹಬ್ಬವಾಗಿದೆ.
ಈ ಹಬ್ಬದ ಇತಿಹಾಸವನ್ನು ಗಮನಿಸುವುದಾದರೆ ಇದರ ಹುಟ್ಟು ಕ್ರಿ.ಶ 5ನೇ ಶತಮಾನದಲ್ಲಿ ಜೆರುಸಲೇಂನಲ್ಲಿ ಮೇರಿ ಮಾತೆಯ ಜನ್ಮ ದಿನವನ್ನಾಗಿ ಆಚರಿಸಲ್ಪಟ್ಟಿತು. ತದನಂತರ ಸಿರಿಯಾ, ಮತ್ತು ಪ್ಯಾಲೆಸ್ತೀನಿನಲ್ಲಿ ಈ ಆಚರಣೆ ಮತ್ತೆ ಕಂಡುಬಂದಿತು. 7ನೇ ಶತಮಾನದಲ್ಲಿ ರೋಮ್ ನಗರದಲ್ಲಿ ಈ ಹಬ್ಬವನ್ನು ಆಚರಿಸುವ ಪದ್ಧತಿ ಪ್ರಾರಂಭವಾಯಿತು. ಹೀಗೆ ರೋಮ್ ನ ಸ್ಥಳೀಯ ಚರ್ಚ್‍ಗಳಲ್ಲಿ ಆಚರಿಸಲ್ಪಟ್ಟು ದಮಾಸ್ಕಸ್ ನ ಸಂತ ಯೋಹಾನ್ನ ಮತ್ತು ಸಂತ ಅಂದ್ರು ಇವರ ಪ್ರಸಂಗದ ಮುಖಾಂತರ ಈ ಆಚರಣೆಯನ್ನು ರೋಂನಾದ್ಯಂತ ಪ್ರಚಲಿತಗೊಳಿಸಿದರು. ಹೀಗೆ ಆಚರಿಸಲ್ಪಡುತ್ತಿದ್ದ ಈ ಹಬ್ಬವನ್ನು 1918ರಿಂದ ಸೆಪ್ಟೆಂಬರ್ 8ರ ದಿನವನ್ನು ಮೇರಿ ಮಾತೆಯ ಜನ್ಮದಿನ ಎಂದು ಘೋಷಿಸಿ ಆ ದಿನವನ್ನು ರಜಾದಿನವನ್ನಾಗಿ ಜಾರಿಗೊಲಿಸಲಾಯಿತು.
ಕ್ರೈಸ್ತ ಧರ್ಮದಲ್ಲಿ ಮೂವರ ಜನ್ಮದಿನವನ್ನು ಮಾತ್ರ ಹಬ್ಬವಾಗಿ ಆಚರಿಸಲ್ಪಡುತ್ತದೆ. ಯೇಸು ಕ್ರಿಸ್ತನ ಜನನ, ಸ್ನನಿಕ ಯೋವಾನ್ನರ ಜನನ ಮತ್ತು ಯೇಸುವಿನ ತಾಯಿ ಮೇರಿ ಮಾತೆಯ ಜನನ. ಇವುಗಳಲ್ಲಿ ಮೇರಿ ಮಾತೆಯ ಜನ್ಮದಿನವನ್ನು ಮಂಗಳೂರು ಮತ್ತು ಉಡುಪಿಯ ಕ್ರೈಸ್ತ ಬಾಂಧವರು ವಿಶೇಷವಾಗಿ ಆಚರಿಸುತ್ತಾರೆ. ಮೇರಿ ಮಾತೆಯ ಜನ್ಮದಿನದ ಹಬ್ಬವನ್ನು ಈ ಪ್ರದೇಶದ ಜನರು ಮೊಂತಿಫೆಸ್ಟ್ ಎಂದು ಕರೆಯುತ್ತಾರೆ. ಭಾರತದಲ್ಲಿ ಮೊತ್ತ ಮೊದಲು ಕ್ರಿ.ಶ 18ನೇ ಶತಮಾನದಲ್ಲಿ ಗೋವಾದಲ್ಲಿ ಮೊಂತಿಫೆಸ್ಟ್ ಆಚರಿಸಲ್ಪಟ್ಟಿತು. ಆಗಿನ ಧರ್ಮಗುರು ಜೋಕಿಮ್ ಮಿರಾಂಡ ಮೊದಲು ಭಾರತದಲ್ಲಿ ಈ ಹಬ್ಬವನ್ನು ಪ್ರಚಾರಗೊಳಿಸಿದರು. ಈ ಹಬ್ಬದ ತಯಾರಿಗಾಗಿ ಒಂಭತ್ತು ದಿನಗಳ ಕಾಲ ಸೋಬೇನಾ ನಡೆಯುತ್ತದೆ. ಮಕ್ಕಳು ಸತತವಾಗಿ ಒಂಬತ್ತು ದಿನ ಪೂಜಾ ಬಲಿದಾನದಲ್ಲಿ ಪಾಲ್ಗೊಂಡು ಮಾತೆ ಮರಿಯರ ಪ್ರೀತಿ ಮತ್ತು ಗೌರವದ ಸಂಕೇತವಾಗಿ ಬಟ್ಟಲುಗಳಲ್ಲಿ ಹೂವುಗಳನ್ನು ತಂದು ಅರ್ಪಿಸುತ್ತಾರೆ.
ಸೆಪ್ಟೆಂಬರ್ 8ರಂದು ಎಲ್ಲಾ ಚರ್ಚ್‍ಗಳಲ್ಲಿ ವಿಶೇಷ ಪೂಜಾ ಬಲಿದಾನಗಳಿರುತ್ತದೆ. ಮಕ್ಕಳು ಹೊಸ ಉಡುಪನ್ನು ಧರಿಸಿ ಸಂಭ್ರಮಿಸುತ್ತಾರೆ.ಪೂಜಾ ಕೈಂಕರ್ಯಗಳಲ್ಲಿ ಎಲ್ಲರೂ ಭಕ್ತಿ ಪೂರ್ವಕವಾಗಿ ಭಾಗವಹಿಸುತ್ತಾರೆ. ವಿವಿಧ ಬಗೆಯ ಹೂವುಗಳನ್ನು ಮೇರಿ ಮಾತೆಗೆ ಅರ್ಪಿಸುತ್ತಾರೆ. ಭತ್ತದ ತೆನೆಯನ್ನು ಮೆರವಣಿಗೆಯ ಮೂಲಕ ತಂದು ಆಶೀರ್ವದಿಸಿ ಪ್ರತಿಯೊಂದು ಕುಟುಂಬಕ್ಕೆ ಹಂಚಲಾಗುತ್ತದೆ. ಈ ಹಬ್ಬದ ವಿಶೇಷವೆಂದರೆ ಸಾಂಪ್ರದಾಯಿಕವಾಗಿ ಕಬ್ಬನ್ನು ಎಲ್ಲರಿಗೂ ಹಂಚುತ್ತಾರೆ. ಈ ಹಬ್ಬವು ರೈತರಿಗೆ ವಿಶೇಷವಾದ ಹಬ್ಬ. ತಾವು ಬೆಳೆದ ಬೆಳೆಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿ ತಾವು ಬೆಳೆದ ಪ್ರಥಮ ಬೆಳೆಯನ್ನು ದೇವರಿಗೆ ಅರ್ಪಿಸುತ್ತಾ ಕೃಷಿ ವಲಯದಲ್ಲಿ ಇದಕ್ಕೆ ಇನ್ನಷ್ಟು ಮಹತ್ವ ನೀಡಲಾಗುತ್ತದೆ. ಈ ಹಬ್ಬ ಕುಟುಂಬದ ಹಬ್ಬವಾಗಿದೆ. ಕುಟುಂಬದ ಸಾಮರಸ್ಯವನ್ನು ಸಾರುವ ಆಚರಣೆಯಾಗಿದೆ. ಕುಟುಂಬದ ಸದಸ್ಯರೆಲ್ಲ ಒಟ್ಟಾಗಿ ಸಹ ಭೋಜನವನ್ನು ಮಾಡುತ್ತಾರೆ. ಇದನ್ನು ನೊವೆ ಜೆವಾಣ್’ ಹೊಸ ಅಕ್ಕಿ ಊಟ ಎಂದು ಕರೆಯಲ್ಪಡುತ್ತದೆ. ಚರ್ಚ್‍ಗಳಲ್ಲಿ ಆಶೀರ್ವದಿಸಿ ಕೊಡಲ್ಪಟ್ಟ ಭತ್ತದ ತೆನೆಯನ್ನು ಮನೆಯೊಳಗೆ ಪ್ರಾರ್ಥನೆಯ ಮೂಲಕ ಒಳ ತಂದು ಮೇಣದ ಭತ್ತಿಯನ್ನು ಉರಿಸಿ ಗೌರವಿಸಲಾಗುತ್ತದೆ. ತದನಂತರ ಬೆಸ ಸಂಖ್ಯೆಯ ಆಧಾರದಲ್ಲಿ ಅದನ್ನು ಕುಟ್ಟಿಪುಡಿ ಮಾಡಿ ಮನೆಯ ಎಲ್ಲಾ ಸದಸ್ಯರಿಗೆ ಹಾಲು ಅಥವಾ ಪಾಯಸಕ್ಕೆ ಹಾಕಿ ಕೊಡುತ್ತಾರೆ. ವಿದೇಶದಲ್ಲಿರುವವರಿಗೆ ತಂದಿಟ್ಟಂತಹ ಭತ್ತವನ್ನು ಸಾಮರಸ್ಯ ಮತ್ತು ಒಗ್ಗಟ್ಟಿನ ಗುರುತಾಗಿ ಕಳುಹಿಸಿಕೊಡಲಾಗುತ್ತದೆ. ಈ ಹಬ್ಬದಲ್ಲಿ ಸಸ್ಯಹಾರವನ್ನು ಮಾತ್ರ ಸೇವಿಸಲಾಗುತ್ತದೆ. ಮಾಡುವಂತಹ ಬಗೆ ಬಗೆಯ ಸಾಂಬಾರು ಪದಾರ್ಥಗಳು ಕೂಡ ಬೆಸ ಸಂಖೈಯ ಆಧಾರದಲ್ಲಿಯೇ ಇರುತ್ತದೆ.
ಈ ಹಬ್ಬ ಕುಟುಂಬದ ಹಬ್ಬ, ಕುಟುಂಬದ ಮಾತೆಯಾಗಿ ಮೇರಿ ಮಾತೆಯು ಕುಟುಂಬದ ರಕ್ಷಕಳಾಗಿ ಕಾಪಾಡಿ ಸಲಹುತ್ತಾರೆ ಎಂಬ ನಂಬಿಕೆ ಇದೆ. ಮೇರಿ ಮಾತೆಗೆ ಕುಟುಂಬದ ತಾಯಿಯಾಗಿ ವಿಶೇಷ ಸ್ಥಾನಮಾನವನ್ನು ನೀಡಲಾಗುತ್ತದೆ. ಪೂರ್ವಜರಿಂದಲೂ ಆಚರಿಸಲ್ಪಡುವ ಈ ಹಬ್ಬಕ್ಕೆ ಧಾರ್ಮಿಕ ಸೊಬಗು ಮತ್ರವಲ್ಲದೆ ಈ ಹಬ್ಬ ಇಂದಿಗೂ ಚಾಲ್ತಿಯಲ್ಲಿದೆ. ಭರತ ಭೂಮಿಯ ಮಣ್ಣಿನ ಸೊಗಡು ಧರ್ಮದ ಆಚರಣೆಯಲ್ಲಿ ಒಳ ಹೊಕ್ಕಿದೆ ಎಂದರೆ ತಪ್ಪಾಗಲಾರದು. ಈ ಹಬ್ಬವು ಎಲ್ಲರಿಗೂ ಶಾಂತಿ, ಸಮೃದ್ಧಿ, ನೆಮ್ಮದಿಯನ್ನು ನೀಡುವ ಹಬ್ಬವಾಗಿರಲಿ ಎಂದು ಹಾರೈಸೋಣ.
ರೇಷ್ಮ ವೀರ ಕ್ರಾಸ್ತಾ
ಉಪನ್ಯಾಸಕಿ, ಸರಕಾರಿ ಪ್ರಥಮ ದರ್ಜೆ ಕಾಲೇಜು
ಬೆಳ್ಳಾರೆ