(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.04. ಕಳೆದ ಆಗಸ್ಟ್ ತಿಂಗಳಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಧಿಕ ಮಳೆಯಾದ ಕಾರಣ ಶಾಲಾ ಮಕ್ಕಳಿಗೆ ಹೆಚ್ಚುವರಿಯಾಗಿ ರಜೆ ನೀಡಲಾಗಿದ್ದ ಕಾರಣ ಮಧ್ಯಂತರ ರಜೆಗಳನ್ನು ಕಡಿತಗೊಳಿಸಲು ಜಿಪಂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಆದೇಶಿಸಿದ್ದಾರೆ.
ಆಗಸ್ಟ್ ನಲ್ಲಿ ಎಡೆಬಿಡದೆ ಮಳೆ ಸುರಿದಿದ್ದರಿಂದ ಹವಾಮಾನ ಇಲಾಖೆಯ ಮುನ್ಸೂಚನೆಯನ್ನು ಆಧರಿಸಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ಒಟ್ಟು 09 ದಿನಗಳ ಕಾಲ ರಜೆಯನ್ನು ನೀಡಲಾಗಿತ್ತು. ಶಾಲಾ ಶೈಕ್ಷಣಿಕ ಅವಧಿಗಳು ಕಡಿಮೆಯಾಗುವ ಹಾಗೂ ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ತೊಂದರೆಯಾಗುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಧ್ಯಂತರ ರಜೆಯನ್ನು ಅಕ್ಟೋಬರ್ 14 ರಿಂದ 21 ರವರೆಗೆ ಮಾತ್ರ ನೀಡುವಂತೆ ಆದೇಶಿಸಲಾಗಿದೆ. ಅಲ್ಲದೆ ಶೈಕ್ಷಣಿಕ ಅವಧಿಯು ಸಾಕಾಗದಿದ್ದಲ್ಲಿ ಶನಿವಾರದಂದು ಸಂಜೆಯವರೆಗೆ ತರಗತಿ ನಡೆಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.