(ನ್ಯೂಸ್ ಕಡಬ) newskadaba.com ಕಡಬ, ಆ.28. ತೀವ್ರ ನೆರೆಯಿಂದಾಗಿ ಕೊಚ್ಚಿ ಹೋದ ಕೊಡಗಿನ ಮದೆನಾಡು ಪ್ರದೇಶದಲ್ಲಿ ಕಳಾರದ ಯುವಕರ ತಂಡವೊಂದು ಸೇವೆಗೈಯುವುದರ ಮೂಲಕ ಮಾನವೀಯ ಕಾರ್ಯವನ್ನು ಮಾಡಿದೆ.
ತೀವ್ರವಾಗಿ ಸುರಿದ ಮಳೆ ಮತ್ತು ಗುಡ್ಡ ಹಾಗು ನೆಲ ಕುಸಿತದ ಕಾರಣದಿಂದಾಗಿ ಹಲವಾರು ಪ್ರದೇಶದಲ್ಲಿ ಅಪಾರವಾದ ನಾಶ ನಷ್ಟವಾಗಿ ಜನತೆ ತೀವ್ರವಾದ ಸಂಕಷ್ಟಗಳನ್ನು ಎದುರಿಸುತ್ತಿದ್ದು, ಕೆಲವರು ಮನೆ ಆಸ್ತಿ ಕೃಷಿ ಮುಂತಾದವುಗಳನ್ನು ಕಳೆದುಕೊಂಡು ಆಧಾರವಿಲ್ಲದೆ ರೋಧಿಸುತ್ತಿದ್ದಾರೆ. ಇದೀಗ ಕೆಲವು ದಿನಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ಅಲ್ಲಿನ ಜನರ ಸಂಕಷ್ಟಗಳು ಬಹಳಷ್ಟಿವೆ ಮತ್ತು ಅಲ್ಲಿನ ನಿವಾಸಿಗಳಿಗೆ ಶ್ರಮದಾನದ ನೆರವು ಬಹಳ ಅತ್ಯಗತ್ಯವಾಗಿದೆ. ಇದನ್ನು ಮನಗಂಡ ಕಡಬ ಪ್ರದೇಶದ “ಅಲ್ ಅಮೀನ್ ಫ್ರೆಂಡ್ಸ್ ಕಳಾರ”ದ ಯುವಕರ ತಂಡವು ಸರ್ವ ಸನ್ನದ್ಧವಾಗಿ ಕೊಡಗು ಜಿಲ್ಲೆಯ ಮದನಾಡು ಎಂಬ ಪ್ರದೇಶಕ್ಕೆ ಹೋಗಿ ಅಲ್ಲಿನ ನಿವಾಸಿಗಳಿಗೆ ಹೆಗಲು ಕೊಟ್ಟು ಶ್ರಮದಾನ ಮಾಡುತ್ತಾ ಗುಡ್ಡ ಕುಸಿತದಿಂದ ಮುಚ್ಚಿ ಹೋದ ಮಣ್ಣುಗಳನ್ನು ತೆರವುಗೊಳಿಸುವುದರೊಂದಿಗೆ ಬಿರುಕು ಬಿಟ್ಟ ಮನೆಗಳಿಗೆ ತಾತ್ಕಾಲಿಕವಾಗಿ ಸಹಾಯ ಮಾಡಿ, ಸುತ್ತಮುತ್ತಲಿನ ಮನೆಗಳ ವಸ್ತುಗಳು ಮಣ್ಣಿನಡಿಗೆ ಸಿಲುಕಿರುವುದನ್ನು ಮನಗಂಡು ಅದನ್ನು ಶುಚಿಗೊಳಿಸಿ ಅದರ ವಾರಿಸುದಾರರಿಗೆ ಒಪ್ಪಿಸುವಂತಹ ಸೇವೆಯನ್ನು ಮಾಡಿದೆ.