ಕಟೀಲು‌ ದೇವಳದಲ್ಲಿ ಪಂಪ್ ಸೆಟ್ ಕಳವು ಪ್ರಕರಣ ► ಕಡಬದ ಇಬ್ಬರ ಸಹಿತ ಮೂವರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.28. ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಪಂಪ್‌ಸೆಂಟ್‌ಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬದ ಇಬ್ಬರು ಸೇರಿದಂತೆ ಒಟ್ಟು ಮೂವರು ಆರೋಪಿಗಳನ್ನು ಬಜ್ಪೆ ಪೊಲೀಸರು ಸೋಮವಾರದಂದು ಬಂಧಿಸಿದ್ದಾರೆ.

ಬಂಧಿಂತರನ್ನು ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ದೊಡ್ಡಕೊಪ್ಪ ನಿವಾಸಿ ಬಾಲಚಂದ್ರ ಕುಂಬಾರ (22), ಕುಟ್ರುಪಾಡಿ ನಿವಾಸಿ ಅಶ್ವಿನ್ ಯು. ಗೌಡ (20) ಹಾಗೂ ಪುತ್ತೂರು ತಾಲೂಕಿನ ಬಜತ್ತೂರು ನಿವಾಸಿ ನಿತಿನ್ ಗೌಡ (21) ಎಂದು ಗುರುತಿಸಲಾಗಿದೆ. ಬಜ್ಪೆ ಠಾಣೆ ವ್ಯಾಪ್ತಿಯ ಕೊಂಡೆಮೂಲ ಗ್ರಾಮದ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಬೇಸಿಗೆ ಕಾಲದಲ್ಲಿ ಉಪಯೋಗಿಸಲ್ಪಡುವ ನೀರೆತ್ತುವ ಐದು ಪಂಪ್ ಸಬ್ ಮಾರ್ಸಿಬಲ್ ಪಂಪ್‌ಸೆಟ್ ಮತ್ತು ಇತರ ಪರಿಕರಗಳನ್ನು ಮಳೆಗಾಲ ಆರಂಭವಾಗುವ ವೇಳೆ ಕಳಚಿ ಆಫೀಸ್‌ನ ಮೇಲ್ಭಾಗದಲ್ಲಿ ತೆಗೆದಿರಿಸಲಾಗಿತ್ತು. ಆ.17ರಿಂದ 21ರ ಮಧ್ಯೆ ಕೊಠಡಿಯ ಬಾಗಿಲಿನ ಬೀಗ ಒಡೆದು ಎಲ್ಲ ಸೊತ್ತುಗಳನ್ನು ಕಳವುಗೈಯಲಾಗಿತ್ತು. ಈ ಕುರಿತು ಆ. 22ರಂದು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Also Read  ಬಂಟ್ವಾಳ: ಕಲ್ಲಿನ ಕೋರೆಯಲ್ಲಿ ಸ್ಫೋಟಕ ಬಳಕೆ- ಸಾರ್ವಜನಿಕರಿಂದ ದೂರು ➤ ತಹಶೀಲ್ದಾರ್ ದಾಳಿ

ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ನಿರ್ದೇಶನದಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್, ಸಹಾಯಕ ಪೊಲೀಸ್ ಆಯುಕ್ತ ಪಣಂಬೂರು ರಾಜೇಂದ್ರ ಡಿ.ಎಸ್. ಮಾರ್ಗದರ್ಶನದಲ್ಲಿ ತನಿಖೆ ಕೈಗೆತ್ತಿಕೊಂಡ ಬಜ್ಪೆ ಠಾಣೆಯ ಪೊಲೀಸ್ ನಿರೀಕ್ಷಕ ಎಸ್.ಪರಶಿವಮೂರ್ತಿ, ಪಿಎಸ್ಸೈ ಶಂಕರ್ ನಾಯರಿ ಆರೋಪಿಗಳನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಎಚ್.ಸಿ. ಚಂದ್ರಮೋಹನ್, ಪಿಸಿಗಳಾದ ಭರತ್, ಪ್ರೇಮಾನಂದ, ಶಶಿಧರ್, ಮಂಜುನಾಥ ನಾಯಕ್, ಲಕ್ಷ್ಮಣ ಕಾಂಬ್ಳೆ ಪಾಲ್ಗೊಂಡಿದ್ದರು.

Also Read  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ➤ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್

ಬಂಧಿತರಿಂದ ಕಳವುಗೈದ ಎಲ್ಲ ಸೊತ್ತು ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

error: Content is protected !!
Scroll to Top