(ನ್ಯೂಸ್ ಕಡಬ) newskadaba.com ಆಲಂಕಾರು, ಆ.28. ಈ ವರ್ಷದ ಆರಂಭದಿಂದ ರಾಜ್ಯದ ವಿವಿಧೆಡೆ ಸುರಿದ ಭಾರೀ ಮಳೆಗೆ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಜೀವ ಹಾನಿಯಾಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದರೆ, ಭಾರೀ ಪ್ರಮಾಣದ ಕೃಷಿ ನಾಶವಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಮುಖ್ಯವಾಗಿ ನೆರೆ ನೀರಿಗೆ ಸಿಲುಕಿ ಭತ್ತದ ಕೃಷಿ ನಾಶವಾಗಿದ್ದು, ಕಡಬ ತಾಲೂಕಿನಲ್ಲಿ ಒಟ್ಟು 20 ಎಕ್ರೆ ಭತ್ತದ ಕೃಷಿ ಸಂಪೂರ್ಣ ಕೊಳೆತು ನಾಶವಾಗಿದೆ. ಇಲ್ಲಿನ ಆಲಂಕಾರು ಗ್ರಾಮ ಕಡಬ ತಾಲೂಕಿನಲ್ಲಿಯೇ ಅತೀ ಹೆಚ್ಚು ಭತ್ತದ ಕೃಷಿ ಇರುವ ಗ್ರಾಮವಾಗಿದೆ. ಇದರಲ್ಲಿ ಸಿಂಹ ಪಾಲು ಈಗಾಗಲೇ ನೆರೆ ನೀರಿನಲ್ಲಿ ಕೊಳೆತು ಹೋಗಿದೆ. ಆಲಂಕಾರು ಒಂದೇ ಗ್ರಾಮದ ಬಡ್ಡಮೆ, ಬುಡೇರಿಯಾ, ಪಜ್ಜಡ್ಕ ಪೊಯ್ಯಲಡ್ಡ, ಶರವೂರು ಮುಂತಾದ ಪ್ರದೇಶದ ಒಟ್ಟು 17 ಎಕ್ರೆ ಭತ್ತ ನೆರೆ ನೀರಿಗೆ ಸಿಲುಕಿ ಸಂಪೂರ್ಣ ಕೊಳೆತು ಹೋಗಿದೆ. ಇದೀಗ ಮರು ನಾಟಿಗೆ ಸಿದ್ದತೆ ನಡೆಸುತ್ತಿದ್ದು ಬಿತ್ತನೆ ಬೀಜದ ಅಭಾವ ಈ ಭಾಗದ ರೈತಾಪಿ ಜನತೆಯನ್ನು ಕಾಡುತ್ತಿದೆ.
ಈ ಭಾಗದಲ್ಲಿ ಏನೆಲು, ಸುಗ್ಗಿ, ಕೊಳಕೆ ಎಂಬ ಮೂರು ಹಂತದಲ್ಲಿ ಭತ್ತದ ಕೃಷಿ ಮಾಡಲಾಗುತ್ತಿತ್ತು. ನೇಜಿ ನಾಟಿ ಮಾಡಿದ 120 ದಿನಗಳಲ್ಲಿ ಕಟಾವಿಗೆ ಬರುತ್ತಿತ್ತು. ಈಗಾಗಲೇ ನಾಶವಾಗಿರುವ ಭತ್ತದ ಕೃಷಿಗೆ 60 ದಿನಗಳು ಕಳೆದಿದ್ದು ಕಾಯಿ ಕಟ್ಟುವ ಹಂತದಲ್ಲಿದ್ದವು. ಆಲಂಕಾರು ಗ್ರಾಮದ ಬುಡೇರಿಯಾ, ಪಜ್ಜಡ್ಕ, ಬಡ್ಡಮೆಗಳಲ್ಲಿ ಅತೀ ಹೆಚ್ಚು ಗದ್ದೆಗಳಿರುವ ಪ್ರದೇಶಗಳಾಗಿವೆ. ಇಲ್ಲಿ ಸುಮಾರು 12 ಕುಟುಂಬದ 17 ಎಕ್ರೆ ಭತ್ತದ ಕೃಷಿಗೆ ಕುಮಾರಧಾರ ನದಿಯ ನೆರೆ ನೀರು ಆಕ್ರಮಿಸಿ ಸಂಪೂರ್ಣ ಕೊಳೆತು ಹೋಗಿದೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಭತ್ತದ ಗದ್ದೆ ಇದೀಗ ಬೈಹುಲ್ಲು ಹಾಸಿದ ಹಾಗೆ ಕಾಣುತ್ತಿದ್ದು ಈ ಭಾಗದ ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ. ನೇಜಿ ಕೊಳೆತು ಹೋಗಿರುವುದರಿಂದ ಇದೀಗ ಒಂದು ಅವಧಿಯ ಭತ್ತದ ಬೇಸಾಯವನ್ನು ಕಳೆದುಕೊಂಡಿದ್ದು ಕಡಿಮೆ ಪಕ್ಷ ಒಬ್ಬ ರೈತ 30 ರಿಂದ 50 ಸಾವಿರ ನಷ್ಟ ಅನುಭವಿಸಿದ್ದಾನೆ. ಅಲ್ಲದೆ ಹಾಕಿರುವ ಹಟ್ಟಿಗೊಬ್ಬರ, ರಸಗೊಬ್ಬರ ಎಲ್ಲವನ್ನು ಕಳೆದುಕೊಂಡು ನಷ್ಟದಲ್ಲಿದ್ದಾರೆ.
ನೆರೆ ನೀರು ಪ್ರತೀ ವರ್ಷವು ಭತ್ತದ ಗದ್ದೆಗಳಿಗೆ ಬರುತ್ತಿತ್ತು. ಆದರೆ 1974ರ ನಂತರ ಈವರೆಗೆ ನೆರೆ ನೀರಿನಿಂದಾಗಿ ನಾಟಿ ಮಾಡಿದ ಭತ್ತದ ನೇಜಿ ಕೊಳೆತು ಹೋದ ಸಂದರ್ಭ ಎದುರಾಗಿರಲಿಲ್ಲ. ಆದರೆ ಈ ವರ್ಷ ನೇಜಿ ಕೊಳೆತು ಹೋಗಿರುವ ಜೊತೆಗೆ 10 ಎಕ್ರೆ ಭತ್ತದ ಗದ್ದೆಯನ್ನು ನಾಟಿ ಮಾಡಲು ಅವಕಾಶ ನೀಡದಿರುವುದು ಈ ಭಾಗದ ರೈತರಿಗೆ ತುಂಬಲಾರದ ನಷ್ಟವಾಗಿದೆ.
ಬಿತ್ತನೆ ಬೀಜದ ಕೊರತೆಯಿದೆ.
ನೆರ ನೀರಿನಿಂದಾಗಿ ಈ ವರ್ಷ ತುಂಬಲಾರದ ನಷ್ಟವನ್ನು ಅನುಭವಿಸಿದ್ದೇವೆ. ಇದೀಗ ಕೊಳೆತು ಹೋಗಿರುವ ಗದ್ದೆಯನ್ನು ಖಾಲಿ ಬಿಡುವ ಹಾಗಿಲ್ಲ. ಮುಂದಿನ ಒಂದು ವಾರದೊಳಗೆ ಮರು ಉಳುಮೆ ಮಾಡಿ ನಾಟಿ ಮಾಡಲು ಸಿದ್ದತೆ ನಡೆಸುತ್ತಿದ್ದೇವೆ. ಆದರೆ ಇದೀಗ ನಮಗೆ ಬಿತ್ತನೆ ಬೀಜದ ಕೊರತೆ ಕಾಡುತ್ತಿದೆ. ಕೃಷಿ ಇಲಾಖೆಗೆ ಮಾಹಿತಿಯನ್ನು ನೀಡಿದ್ದೇವೆ. ಇಲಾಖೆ ಪರಿಹಾರ ನೀಡುವುದರೊಂದಿಗೆ ಬಿತ್ತನೆ ಬೀಜಕ್ಕೂ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿದೆ.
– ದಯಾನಂದ ಗೌಡ ಬಡ್ಡಮೆ
ನಾಶವಾಗಿರುವ ಭತ್ತದ ಕೃಷಿಗೆ ಪ್ರಾಕೃತಿಕ ವಿಕೋಪದಡಿ ಪರಿಹಾರ ನೀಡಲು ಸಾಧ್ಯವಿದೆ. ಕಡಬ ವಲಯದಲ್ಲಿ ಆಲಂಕಾರು ಗ್ರಾಮ ಅತೀ ಹೆಚ್ಚು ಭತ್ತದ ಕೃಷಿ ನಾಶವಾಗಿರುವ ಪ್ರದೇಶವಾಗಿದೆ. ಈಗಾಗಲೇ ಜಿಲ್ಲಾಡಳಿತ ಬೇಸಾಯ ಕೃಷಿ ನಾಶವಾಗಿರುವ ಪ್ರದೇಶದ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದೆ. ನಷ್ಟ ಸಂಭವಿಸಿದ ಸ್ಥಳಗಳ ರಿಶೀಲನೆ ನಡೆಸಲಾಗಿದೆ. ಬಿತ್ತನೆ ಬೀಜವು ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇದ್ದು ಯಾವ ರೀತಿಯಲ್ಲಿ ರೈತರಿಗೆ ವಿತರಣೆ ಮಾಡುವ ಬಗ್ಗೆ ಜಿಲ್ಲಾಡಳಿತ ನಿರ್ಧರಿಸಲಿದೆ ಎಂದು ಕಡಬ ವಲಯ ಸಹಾಯಕ ಕೃಷಿ ಅಧಿಕಾರಿ ತಿಮ್ಮಪ್ಪ ಗೌಡ ಪ್ರತಿಕ್ರಿಯಿಸಿದ್ದಾರೆ.
✍? ಸದಾನಂದ ಆಲಂಕಾರು