►► ? ಕವರ್ ಸ್ಟೋರಿ ? ಮಂಗಳೂರು – ಸುಬ್ರಹ್ಮಣ್ಯ ರೋಡ್ – ಬೆಂಗಳೂರು ರೈಲು ಸಂಚಾರಕ್ಕೆ ಎದುರಾದ ವಿಘ್ನ ► ಕನಿಷ್ಠ ಆರು ತಿಂಗಳುಗಳ ಕಾಲ ಸ್ಥಗಿತಗೊಳ್ಳಲಿದೆ ಈ ರೈಲು ► ರಾಜ್ಯ ರಾಜಧಾನಿಯ ಸಂಪರ್ಕಕ್ಕೆ ರಸ್ತೆ ಮಾರ್ಗವೇ ಗತಿ

(ನ್ಯೂಸ್ ಕಡಬ) newskadaba.com ಕಡಬ, ಆ.25. ಪ್ರಕೃತಿ ಸೌಂದರ್ಯದ ಕಿರೀಟವಾಗಿರುವ ಸುಬ್ರಹ್ಮಣ್ಯ ರೋಡ್ ಹಾಗೂ ಎಡಕುಮೇರಿ ನಡುವೆ ಅಲ್ಲಲ್ಲಿ ಬೃಹತ್ ಗಾತ್ರದ ಗುಡ್ಡಗಳು ನಿರಂತರವಾಗಿ ಜರಿದು ಬೀಳುತ್ತಿರುವುದರಿಂದ ಮಂಗಳೂರು – ಬೆಂಗಳೂರು ರೈಲು ಸಂಚಾರಕ್ಕೆ ವಿಘ್ನವುಂಟಾಗಿದ್ದು, ಕನಿಷ್ಠ ಆರು ತಿಂಗಳುಗಳ ಕಾಲ ರೈಲು ಸಂಚಾರ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.

ಸುಬ್ರಹ್ಮಣ್ಯ ರೋಡ್ ರೈಲ್ವೇ ನಿಲ್ದಾಣದಿಂದ ಸುಮಾರು 11 ಕಿ.ಮೀ. ದೂರದ ಸಿರಿಬಾಗಿಲು ಸಮೀಪ ಬೃಹತ್ ಗಾತ್ರದ ಗುಡ್ಡವೊಂದು ಕುಸಿದು ಮಾರ್ಗದ ಮಧ್ಯೆ ಬಿದ್ದ ಪರಿಣಾಮ ಹಳಿಗಳು ಹಾನಿಗೀಡಾಗಿದ್ದು, 48 ನೆಯ ಸುರಂಗವೊಂದು ಮಣ್ಣಿನಿಂದ ಮುಚ್ಚಿಹೋಗಿದೆ. ಆರು ಹಿಟಾಚಿ ಯಂತ್ರಗಳ ಮೂಲಕ ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದ್ದರೂ, ಮೇಲಿನಿಂದ ಮತ್ತೆ ಗುಡ್ಡ ಕುಸಿಯುತ್ತಿರುವುದು ಅಧಿಕಾರಿಗಳನ್ನು ಆತಂಕಕ್ಕೀಡುಮಾಡಿದೆ. ಗುಡ್ಡದ ತುದಿಯಲ್ಲಿ ಸುಮಾರು ಇಪ್ಪತ್ತು ಮೀಟರ್ ಆಳಕ್ಕೆ ಬಿರುಕು ಬಿಟ್ಟಿದ್ದು, ಆ ಎಲ್ಲಾ ಮಣ್ಣುಗಳನ್ನು ತೆರವುಗೊಳಿಸಿದರೆ ಮಾತ್ರ ಸುಗಮ ಸಂಚಾರಕ್ಕೆ ಹಳಿಯನ್ನು ಬಳಸಬಹುದು. ಇಲ್ಲದಿದ್ದಲ್ಲಿ ಮತ್ತೆ ಗುಡ್ಡ ಕುಸಿಯುವುದರಲ್ಲಿ ಯಾವುದೇ ಸಂಶಯವಿಲ್ಲ.

ಸುಬ್ರಹ್ಮಣ್ಯ ರೋಡ್ ನಿಂದ ಎಡಕುಮೇರಿವರೆಗಿನ ಸುಮಾರು 40 ಕ್ಕೂ ಹೆಚ್ಚಿನ ಕಡೆಗಳಲ್ಲಿ ಮಣ್ಣು ಕುಸಿದಿರುವುದರಿಂದ ಮಣ್ಣು ತೆರವು ಕಾರ್ಯಾಚರಣೆಗೆ ಕಡಿಮೆಯೆಂದರೂ ಮೂರ್ನಾಲ್ಕು ತಿಂಗಳುಗಳ ಸಮಯಾವಕಾಶ ಬೇಕಾಗಬಹುದು ಎನ್ನುವುದು ಅಧಿಕಾರಿಗಳ ಮಾತು. ಹಿಟಾಚಿ ಯಂತ್ರಗಳನ್ನು ಮಣ್ಣು ಬಿದ್ದಲ್ಲಿಗೆ ತೆಗೆದುಕೊಂಡು ಹೋಗುವುದು ದೊಡ್ಡ ಸಮಸ್ಯೆಯಾಗಿದ್ದು, ಒಂದೆಡೆ ತೆರವುಗೊಂಡ ನಂತರವೇ ಮುಂದಿನ ಸ್ಥಳಕ್ಕೆ ತೆರಳುವುದರ ಮೂಲಕ ಹಂತ ಹಂತವಾಗಿಯೇ ಮಣ್ಣನ್ನು ತೆರವುಗೊಳಿಸಬೇಕಾಗಿದೆ. ಆ ಬಳಿಕ ಹಳಿಗಳ ದುರಸ್ತಿ, ಉನ್ನತ ಮಟ್ಟದ ಅಧಿಕಾರಿಗಳಿಂದ ಹಳಿಯ ಪರಿಶೀಲನೆ, ಪ್ರಾಯೋಗಿಕ‌ ಸಂಚಾರದ ನೆಪದಲ್ಲಿ ಆರಕ್ಕೂ ಹೆಚ್ಚು ತಿಂಗಳುಗಳ ಕಾಲ ರೈಲು ಸಂಚಾರ ವಿಳಂಬವಾಗಲಿದ್ದು, ರಾಜ್ಯ ರಾಜಧಾನಿಯನ್ನು ಸಂಪರ್ಕಿಸಲು ರಸ್ತೆ ಮಾರ್ಗವನ್ನೇ ಅವಲಂಬಿಸಬೇಕಾಗಿದೆ.

Also Read  ಚುನಾವಣಾ ಪ್ರಚಾರಕ್ಕಾಗಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಕರಾವಳಿಗೆ ► ಏಪ್ರಿಲ್ 27 ರಂದು ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ

ಕಾಡು ಪ್ರದೇಶವಾದುದರಿಂದ ಒಂದೆಡೆ ಕಾಡಾನೆಗಳು ಹಿಂಡು ಹಿಂಡಾಗಿ ಸಂಚರಿಸುತ್ತಿರುವುದರಿಂದ ಹಗಲು ಹೊತ್ತಿನಲ್ಲಿ ಮಾತ್ರ ಮಣ್ಣನ್ನು ತೆರವುಗೊಳಿಸಬೇಕಾಗಿದ್ದು, ಯಾವುದೇ ಭದ್ರತಾ ವ್ಯವಸ್ಥೆಯಿಲ್ಲದ ಕಾರಣ ರಾತ್ರಿ ಹೊತ್ತು ಸ್ಥಳದಲ್ಲಿ ನಿಲ್ಲಲು ಅಧಿಕಾರಿಗಳು ಸೇರಿದಂತೆ ಕಾರ್ಮಿಕರು ಹಿಂಜರಿಯುತ್ತಿದ್ದಾರೆ. ಮಾರ್ಗದ ಬಲ ಬದಿಯಲ್ಲಿ ಬೃಹತ್ ಗಾತ್ರದ ಗುಡ್ಡ ಹಾಗೂ ಎಡಭಾಗದಲ್ಲಿ ಆಳವಾದ ಪ್ರಪಾತಗಳಿದ್ದು, ಇವುಗಳ ಮಧ್ಯೆ ಜೀವವನ್ನು ಪಣಕ್ಕಿಟ್ಟು ಅಪಾಯವನ್ನು ಲೆಕ್ಕಿಸದೆ ಹಿಟಾಚಿ ಆಪರೇಟರ್ ಗಳು ಕಾರ್ಯ ನಿರ್ವಹಿಸಬೇಕಾಗಿದೆ. ಇತ್ತೀಚೆಗಷ್ಟೇ ಸಿರಿಬಾಗಿಲು ಬಳಿ ರೈಲು ಢಿಕ್ಕಿಯಾಗಿ ಮರಿಯಾನೆ ಹಾಗೂ ತಾಯಿ ಆನೆ ಸ್ಥಳದಲ್ಲೇ ಮೃತಪಟ್ಟಿದ್ದವು.

Also Read  ಪುತ್ತೂರು, ಕಡಬದಲ್ಲಿ ಇಂದು 25 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ

ಮೀಟರ್ ಗೇಜ್‌ನಿಂದ ಬ್ರಾಡ್ ಗೇಜ್‌ಗೆ ಪರಿವರ್ತನೆಗೊಂಡ ಈ ರೈಲು ಮಾರ್ಗದ ಇತಿಹಾಸದಲ್ಲಿಯೇ ಇಷ್ಟೊಂದು ಪ್ರಮಾಣದಲ್ಲಿ ಗುಡ್ಡ ಕುಸಿದಿರುವುದು ಇದೇ ಮೊದಲು ಎನ್ನಲಾಗಿದೆ. ಒಂದೆಡೆ ಮಣ್ಣು ತೆರವು ಕಾಮಗಾರಿಯ ಖರ್ಚುಗಳು ಹಾಗೂ ಇನ್ನೊಂದೆಡೆ ಅತ್ಯಂತ ಲಾಭದಲ್ಲಿದ್ದ ಗೂಡ್ಸ್ ರೈಲಿನ ಸಂಚಾರ ನಿಲುಗಡೆಯು ಭಾರತೀಯ ರೈಲ್ವೇ ಇಲಾಖೆಗೆ ಕೋಟ್ಯಂತರ ರೂ.ಗಳ ನಷ್ಟವನ್ನು ಉಂಟುಮಾಡಿದೆ. ಒಟ್ಟಿನಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ನೇರವಾಗಿ ಪ್ರಯಾಣಿಸುವುದು ಇನ್ನೂ ಆರು ತಿಂಗಳುಗಳ ಕಾಲ ಸ್ಥಗಿತಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.

error: Content is protected !!
Scroll to Top