(ನ್ಯೂಸ್ ಕಡಬ) newskadaba.com ಕಡಬ, ಆ.25. ಕಳೆದ ವಾರ ಧಾರಕಾರವಾಗಿ ಸುರಿದ ಮಳೆಯಿಂದಾಗಿ ನೆರೆ ನೀರಿನಿಂದ ತತ್ತರಿಸಿದ್ದ ಕುಮಾರಧಾರ ನದಿ ಪಾತ್ರದ ಜನತೆ ಕಿಂಚಿತ್ತು ನಿಟ್ಟುಸಿರು ಬಿಡುವಂತಾದರೂ ಇದೀಗ ಸಾಂಕ್ರಾಮಿಕ ರೋಗದ ಭೀತಿಯನ್ನು ಎದುರಿಸುತ್ತಿದ್ದಾರೆ.
ಮಳೆ ಸ್ವಲ್ಪ ಬಿಡುವನ್ನು ನೀಡಿದ್ದು, ನೆರೆ ನೀರು ಇಳಿಮುಖ ಕಂಡಿದೆಯಾದರೂ ಈ ಪ್ರದೇಶ ಜನತೆಯಲ್ಲಿ ನೆರೆಯೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳುವ ಭೀತಿ ಕಾಡುತ್ತಿದೆ. ಮೇ 27 ರಂದು ಪ್ರಾರಂಭವಾದ ಮಳೆ ಬರೋಬ್ಬರಿ ಎರಡು ತಿಂಗಳಿಗೂ ಅಧಿಕ ಕಾಲ ಬಿಡುವಿಲ್ಲದೆ ಹಗಲು ರಾತ್ರಿ ಸುರಿದಿರುವುದು ರೈತಾಪಿ ಜನತೆಯನ್ನು ಆರ್ಥಿಕವಾಗಿ ಮೇಲೇರದಂತೆ ಮಾಡಿ ಬಿಟ್ಟಿದೆ. ಬೇಸಿಗೆಯಲ್ಲಿ ತಾನು ಬೆಳೆದ ಕೃಷಿಯಲ್ಲಿ ನೀರಿನ ಅಭಾವದಿಂದ ಭಾರಿ ನಷ್ಟ ಸಂಭವಿಸಿದರೆ ಇದೀಗ ನೆರೆ ನೀರಿನ ಮೂಲಕ ಮತ್ತೆ ಗಾಯದ ಮೇಲೆ ಬರೆ ಎಳೆದಿದೆ.
ಸತತ ನೆರೆ ನೀರು ಕಸಕಡ್ಡಿಗಳೊಂದಿಗೆ ಜನವಸತಿ ಪ್ರದೇಶಗಳಿಗೆ ನುಗ್ಗಿದರ ಪರಿಣಾಮ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ನೆರೆ ನೀರು ಕೆಲವೊಂದು ಮನೆಗಳಿಗೆ ನುಗ್ಗಿದರ ಪರಿಣಾಮ ಮನೆ ತುಂಬಾ ಕೆಸರುಮಯವಾಗಿದ್ದು ವಾಸಕ್ಕೆ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪ್ರದೇಶದಲ್ಲಿ ಸೊಳ್ಳೆಯ ಕಾಟವು ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಅಲ್ಲದೆ ನೆರೆ ನೀರಿನಲ್ಲಿ ವಿಷಕಾರಿ ಹಾವು, ಜಂತುಗಳು ನಾಡನ್ನು ಪ್ರವೇಶಿಸಿದ್ದು ಇವುಗಳ ಅಪಾಯದಿಂದ ಕಾಪಾಡಿಕೊಳ್ಳುವುದು ಈ ಭಾಗದ ಜನತೆಗೆ ಸವಾಲಾಗಿ ಪರಿಣಮಿಸಿದೆ. ಈ ಕಾರಣಕ್ಕಾಗಿ ನೆರೆ ನೀರು ಬಂದಿರುವ ಪ್ರದೇಶಗಳಿಗೆ ಫಾಗಿಂಗ್ ಮಾಡ ಬೇಕೆಂಬ ಒತ್ತಡ ಈ ಭಾಗದ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ನದಿ ಪಾತ್ರದ ರೈತರು ಬೇಸಾಯದ ನೇಜಿ ನಾಟಿ ಮಾಡಿದಲ್ಲಿಂದ ಆಗಾಗ ನೆರೆ ನೀರು ಗದ್ದೆಗಳಿಗೆ ನುಗ್ಗಿದರ ಪರಿಣಾಮ ನಾಟಿ ಮಾಡಿದ ನೇಜಿಯು ಇನ್ನೂ ಸರಿಯಾಗಿ ಜೀವ ಹಿಡಿದಿಲ್ಲ. ಇದೀಗ ಕಳೆದ ಹತ್ತು ದಿನಗಳಿಂದ ನಿರಂತರವಾಗಿ ನೆರೆ ನೀರು ಗದ್ದೆಯಲ್ಲಿ ನಿಂತಿರುವುದರಿಂದ ನಾಟಿ ಮಾಡಿದ ಎಲ್ಲಾ ನೇಜಿಯು ಕೊಳೆಯುವ ಭೀತಿ ಎದುರಾಗಿದೆ. ಮಾತ್ರವಲ್ಲದೆ ಅಡಿಕೆ ತೋಟಕ್ಕೂ ನೆರೆ ನೀರು ನುಗ್ಗಿದ ಪರಿಣಾಮ ಅಡಿಕೆ ತೋಟವು ಇದೀಗ ಕೊಳೆ ರೋಗದಿಂದ ತತ್ತರಿಸಿದೆ. ನೆರೆ ನೀರು ತೋಟದಲ್ಲೇ ಇದ್ದ ಕಾರಣ ತೋಟಕ್ಕೆ ಭೇಟಿ ನೀಡಿ ಅಡಿಕೆ ವೀಕ್ಷಣೆ ಸಹಿತ ಔಷಧಿ ಸಿಂಪಡಣೆಗೂ ಅವಕಾಶ ನೀಡಿಲ್ಲ. ನಿರಂತರ ಮಳೆಯ ಕಾರಣ ಔಷಧಿ ಸಿಂಪಡಣೆಗೆ ಸಾಧ್ಯವಾಗದೆ ಬೇಸಿಗೆಯಲ್ಲಿ ಕಷ್ಟಪಟ್ಟು ಉಳಿಸಿ ಬೆಳೆಸಿದ ಅಡಿಕೆ ಇಂದು ನೀರುಪಾಲಾಗುತ್ತಿದೆ.
ಮಳೆ ಸ್ವಲ್ಪ ವಿರಾಮವನ್ನು ನೀಡಿರುವುದು ಅಡಿಕೆ ಬೆಳೆಗಾರರ ಮುಖದಲ್ಲಿ ಹೊಸ ಕಳೆಯನ್ನು ಮೂಡಿಸಿದೆಯಾದರೂ, ತಮ್ಮ ಅಡಿಕೆ ತೋಟಗಳಿಗೆ ಮದ್ದು ಸಿಂಪಡಣೆಗೆ ಬಾರಿ ತುರಾತುರಿಯ ಸಿದ್ಧತೆಗಳನ್ನು ಮಾಡುತ್ತಿದ್ದು ಸಿಂಪಡಣೆದಾರರ ಮನೆ ಬಾಗಿಲಿಗೆ ಹಗಳಿರುಳು ಎನ್ನದೆ ಧಾವಿಸುತ್ತಿದ್ದಾರೆ. ಅಲ್ಲದೆ ಹೆಚ್ಚು ವೇತನ ನೀಡುವ ಆಮಿಷವನ್ನು ಒಡ್ಡಲಾಗುತ್ತಿದೆ ಎಂಬ ಮಾಹಿತಿಗಳಿವೆ. ಆದರೆ ಸಿಂಪಡಣೆದಾರರಿಗೆ ಒಂದು ಕ್ಷಣವು ವಿಶ್ರಾಂತಿಯಿಲ್ಲದೆ ಪರಿಸ್ಥಿತಿ ನಿರ್ಮಾಣವಾಗಿದ್ದು, ತಮ್ಮ ಮೊಬೈಲ್‍ಗಳನ್ನು ಸ್ವಿಚ್ ಆಫ್ ಮಾಡಿಡುವ ಪ್ರಮೇಯ ಎದುರಾಗಿದೆ.
ನದಿ ಪಾತ್ರದ ಕೆಲ ಭಾಗದಲ್ಲಿ ಈಗಾಗಲೇ ಹಲವು ಬಾರಿ ನೆರೆ ನೀರು ಬಂದು ಹೋಗಿದ್ದು ಒಮ್ಮೆ ನೆರೆ ನೀರು ಬಂದಾಗ ಒಂದೆರಡು ದಿನ ನಿಂತು ಇದೀಗ ಕೃಷಿ ತೋಟಗಳ ಮಣ್ಣು ಮೃದುವಾಗಿದೆ. ಹಾಗಾಗಿ ಅಡಿಕೆ, ಬಾಳೆ ಇನ್ನಿತರ ಗಿಡಗಳು ಸ್ವಲ್ಪ ಗಾಳಿ ಬಂದರೂ ಬುಡ ಸಮೇತ ಮಗುಚಿ ಬೀಳುತ್ತಿದೆ. ಕೃಷಿ ಜಮೀನಿಗೆ ನುಗ್ಗಿದ ನೆರೆ ನೀರಿನೊಂದಿಗೆ ಬಂದ ಕಸಕಡ್ಡಿಗಳು, ಮರಳುಗಳ್ನು ತೆರವುಗೊಳಿಸಲು ಬಿಸಿಲಿನ ಝಲಕ್ ಹೆಚ್ಚಾಗಬೇಕಾಗಿದ್ದು, ಆಗಾಗ್ಗೆ ಸುರಿಯುವ ಮಳೆಯಿಂದ ತೆರವುಗೊಳಿಸಲು ಅಸಾದ್ಯವಾಗುತ್ತಿದೆ. ಈ ಮಧ್ಯೆ ಆದಷ್ಟು ಬೇಗ ತಮ್ಮ ಕೃಷಿ ತೋಟಗಳನ್ನು ಸಹಜ ಸ್ಥಿತಿಗೆ ತರಲು ರೈತ ಹರಸಾಹಸ ಪಡುತ್ತಿದ್ದಾನೆ.
ನದಿ ತೀರದ ತೋಟಗಳಿಗೆ ಈ ಬಾರಿಯ ಮಳೆಗಾಲದಲ್ಲಿ ನಾಲ್ಕು ಬಾರಿ ನೆರೆ ನೀರು ನುಗ್ಗಿದೆ. ಒಮ್ಮೆ ಬಂದ ನೀರು ಒಂದೆರೆಡು ದಿನಗಳ ಕಾಲ ತೋಟದಲ್ಲಿ ಉಳಿಯುತ್ತದೆ. ಹಾಗಾಗಿ ಮಣ್ಣು ಮೃದುವಾಗಿ ಅಡಿಕೆ, ಬಾಳೆ ಇನ್ನಿತರ ತೊಟದಲ್ಲಿನ ಮರಗಳು ಸ್ವಲ್ಪ ಮಟ್ಟನ ಗಾಳಿ ಬಂದರೂ ದರೆಗುಳಿರುತ್ತಿದೆ. ಕೃಷಿಕನಿಗೆ ಪರಿಹಾರ ಒದಗಿಸಿ ಕೊಡುವಲ್ಲಿ ಸಂಬಂಧಪಟ್ಟವರು ಮುಂದಾಗಬೇಕು.
– ಕುಶಾಲಪ್ಪ ಗೌಡ ಕೊಲ್ಯ, ಪ್ರಗತಿಪರ ಕೃಷಿಕ